ಮಡಿಕೇರಿ:
ಜಿಲ್ಲೆಯ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ವದ ಮೈಲುಗಲ್ಲಾಗಿ ಸ್ಥಾಪನೆ ಆಗಿರುವ ಕೊಡಗು ವಿಶ್ವವಿದ್ಯಾಲಯ ಕುಶಾಲನಗರ ತಾಲೂಕಿನ ಚಿಕ್ಕ ಅಳುವಾರದಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ. ಶಿಕ್ಷಣ ಪ್ರತಿ ವ್ಯಕ್ತಿಯಲ್ಲಿ ಪರಿಪೂರ್ಣತೆ ತರಬೇಕು. ಜೀವನ ಮುನ್ನಡೆಸುವ ಸಾಮಾರ್ಥ್ಯ ನೀಡಬೇಕು ಹಾಗೂ ಯುವಜನತೆಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎನ್ನುವ ಸದಾಶಯ ಈ ಸಂಸ್ಥೆಯದ್ದಾಗಿದ್ದು, ಅದಕ್ಕೆ ಪೂರಕ ಯೋಜನೆ, ಯೋಚನೆಗಳೊಂದಿಗೆ ಆರಂಭಿಕ ಹೆಜ್ಜೆಗಳನ್ನು ಇಡಲಾರಂಭಿಸಿದೆ. ಹೊಸ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಸದ್ಯ ೬,೨೨೯ ವಿದ್ಯಾರ್ಥಿಗಳು ಜ್ಞಾರ್ಜನೆ ಮಾಡುತ್ತಿದ್ದಾರೆ.
ಚಿಕ್ಕ ಅಳುವಾರದಲ್ಲಿ ಇರುವ ಮಂಗಳೂರು ವಿಶ್ವವಿದ್ಯಾಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರ ಕ್ಯಾಂಪಸ್ ಈ ಹೊಸ ಕೊಡಗು ವಿಶ್ವವಿದ್ಯಾಲಯವಾಗಿ ಬದಲಾಗಿದೆ. ಹಾಲಿ ಇಲ್ಲಿರುವ ಮೂಲಸೌಲಭ್ಯಗಳನ್ನು ಬಳಸಿಕೊಂಡು ಗಹೊಸನ ವಿಶ್ವವಿದ್ಯಾಲಯ ಇದೇ ವರ್ಷದ ಮಾರ್ಚ್ ೧೮ರಿಂದ ಅಧಿಕೃತವಾಗಿ ಕೆಲಸ ಶುರುಮಾಡಿದೆ. ಕೊಡಗು ವಿಶ್ವವಿದ್ಯಾಲಯವು ಈಗ ೭೦.೪೭ ಎಕರೆ ಭೂಮಿ ಹೊಂದಿದ್ದು, ಹೆಚ್ಚುವರಿ ೩೪.೦೮ ಎಕರೆ ಭೂಮಿ ಸೇರ್ಪಡೆಗೊಳಿಸುವ ಪ್ರಕ್ರಿಯೆ ನಡೆದಿದೆ.
ವಿಜ್ಞಾನ ಸಂಕೀರ್ಣ, ಮಾನವಿಕ ಸಂಕೀರ್ಣ, ವಸತಿಗೃಹ, ೨೫ ತರಗತಿ ಕೊಠಡಿಗಳು, ೫ ಸಭಾಂಗಣಗಳು, ೮ ಮಾಡ್ಯುಲರ್ ಲ್ಯಾಬೊರೇಟರಿಗಳು, ೬ ಸಂಶೋಧನಾ ಲ್ಯಾಬೊರೇಟರಿಗಳು, ೨ ಕಂಪ್ಯೂಟರ್ ಲ್ಯಾಬೊರೇಟರಿಗಳು, ೧೨ ಅಧ್ಯಾಪಕರ ಕೊಠಡಿಗಳು, ೨ ವಿಭಾಗೀಯ ಕಚೇರಿಗಳು, ಆಡಳಿತ ಕಚೇರಿ, ಕುಲಪತಿಗಳ ಕಾರ್ಯಾಲಯ, ಕುಲಸಚಿವರು ಮಾಲ್ಯಮಾಪನ ಕಚೇರಿ, ಕುಲಸಚಿವರ ಕಚೇರಿ, ಪುರುಷರ ವಸತಿನಿಲಯ, ಮಹಿಳೆಯರ ವಸತಿನಿಲಯದಂತಹ ಮೂಲ ಸೌಕರ್ಯ ಇಲ್ಲಿದೆ.
ಕೊಡಗು ವಿಶ್ವವಿದ್ಯಾಲಯದಲ್ಲಿ ಹಾಲಿ ೯ ಮಂದಿ ಖಾಯಂ ಅಧ್ಯಾಪಕರು, ಇಬ್ಬರು ಖಾಯಂ ಬೋಧಕೇತರ ಸಿಬ್ಬಂದಿ, ೪೩ ಅತಿಥಿ ಉಪನ್ಯಾಸಕರು, ೪೧ ತಾತ್ಕಾಲಿಕ ಬೋಧಕೇತರ ಸಿಬ್ಬಂದಿ, ಹೊರಗುತ್ತಿಗೆಯಿಂದ ೨೪ ಬೋಧಕೇತರ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ೩೮೮ ಸ್ನಾತಕೋತ್ತರ ವಿದ್ಯಾರ್ಥಿಗಳು, ೩೭ ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಕೊಡಗು ವಿಶ್ವವಿದ್ಯಾಲಯದ ಅಧೀನದಲ್ಲಿ ೧ ಘಟಕ ಕಾಲೇಜು, ೨೧ ಸಂಯೋಜಿತ ಪದವಿ ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ. ಎಲ್ಲಾ ಸೇರಿ ಒಟ್ಟು ೬,೨೨೯ ವಿದ್ಯಾರ್ಥಿಗಳೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
ಕೊಡಗು ವಿಶ್ವವಿದ್ಯಾಲಯ ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಡಿಜಿಟಲ್ ಮೌಲ್ಯಮಾಪನ ಪದ್ಧತಿಯನ್ನು ಅಳವಡಿಸಿಕೊಳ್ಳಲಿದೆ. ಇದರಿಂದ ಅತೀ ಶೀಘ್ರವಾಗಿ ಫಲಿತಾಂಶ ಸಿಗುವಂತಾಗುತ್ತದೆ. ವಿದ್ಯಾರ್ಥಿಗಳಿಗೆ ಸೂಕ್ತ ಸಮಯಕ್ಕೆ ಫಲಿತಾಂಶ ನೀಡಲು ಕೂಡ ಇದರಿಂದ ಅನುಕೂಲ ಆಗಲಿದೆ. ವಿಶ್ವವಿದ್ಯಾಲಯಕ್ಕೆ ಒಳಪಡುವ ಖಾಸಗಿ ಮತ್ತು ಸರ್ಕಾರಿ ಪದವಿ, ಘಟಕ ಕಾಲೇಜುಗಳು ಮತ್ತು ಸ್ನಾತಕೋತ್ತರ ಕೋರ್ಸ್‌ಗೆ ಸಂಬಂಧಿಸಿದ ಎಲ್ಲಾ ಬೋಧಕ ಸಿಬ್ಬಂದಿಗಳಿಗೆ ಫ್ಯಾಕಲ್ಟಿ ಡೆವಲಪ್‌ಮೆಂಟ್ ಕಾರ್ಯಕ್ರಮ ಸೇರಿದಂತೆ ಸಿಬ್ಬಂದಿ ಪುನಶ್ಚೇತನ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಅವರ ಬೋಧನಾ ಕೌಶಲ್ಯ ಅಭಿವೃದ್ಧಿಪಡಿಸುವ ಯೋಜನೆಯೂ ಇದೆ.
ಸದ್ಯಕ್ಕೆ ಇಲ್ಲಿ ಮೈಕ್ರೋಬಯೋಲಜಿ, ಬಯೋಕೆಮೆಸ್ಟ್ರಿ, ಯೋಗಿಕ್ ಸೈನ್ಸ್, ರಸಾಯನಶಾಸ್ತ್ರ, ಬಾಟನಿ, ಕಂಪ್ಯೂಟರ್ ಸೈನ್ಸ್ ಎಂಎಸ್‌ಸಿ, ಎಂಕಾಮ್, ಎಂಎಸ್‌ಡಬ್ಲ್ಯು, ಇತಿಹಾಸ, ಪೊಲಿಟಿಕಲ್ ಸೈನ್ಸ್, ಕನ್ನಡ ಎಂಎ, ಕೊಡವ ಭಾಷೆಯ ಪಿಜಿ ಡಿಪ್ಲಮೋ, ಯೋಗಿಕ್ ಸೈನ್ಸ್‌ನಲ್ಲಿ ಸರ್ಟಿಫಿಕೇಟ್, ಡಿಪ್ಲಮೋ, ಪಿಜಿ ಡಿಪ್ಲಮೋ ಕೋರ್ಸ್ ಇದೆ. ಕೊಡಗಿನ ಒಬ್ಬ ವಿದ್ಯಾರ್ಥಿ ಕೂಡ ಉನ್ನತ ಶಿಕ್ಷಣಕ್ಕಾಗಿ ಜಿಲ್ಲೆಯಿಂದ ಹೊರಗೆ ಹೋಗುವಂತಾಗಬಾರದು ಎನ್ನುವ ದೂರದೃಷ್ಟಿಯನ್ನು ಈಗಿನ ಕುಲಪತಿ ಹೊಂದಿದ್ದಾರೆ. ಹಾಗಾಗಿ ಭವಿಷ್ಯದಲ್ಲಿ ತುಂಬಾ ಬೇಡಿಕೆ ಇರುವ ಕೋರ್ಸ್‌ಗಳನ್ನು ಆರಂಭಿಸಲು ಸಿದ್ಧತೆ ನಡೆಸಲಾಗಿದೆ. ಜಿಲ್ಲೆಗೆ ಪೂರಕವಾಗಿ ಹೊಟೇಲ್ ಮ್ಯಾನೇಜ್‌ಮೆಂಟ್, ಟೂರಿಸ್ಟ್ ಮ್ಯಾನೇಜ್‌ಮೆಂಟ್, ಮಿಲಿಟರಿ ಸೈನ್ಸ್ ಮಾತ್ರವಲ್ಲದೆ ಜಾಗತಿಕ ಬೇಡಿಕೆ ಇರುವ ಕೃತಕ ಬುದ್ಧಿಮತ್ತೆ, ಸೈಬರ್ ಸೆಕ್ಯೂರಿಟಿ, ಆಹಾರ ತಂತ್ರಜ್ಞಾನ, ಇಂಟೀರಿಯರ್ ಡಿಸೈನಿಂಗ್, ಎಲೆಕ್ಟ್ರಾನಿಕ್ ಮತ್ತು ಕಮ್ಯುನಿನೇಷನ್ ಸೇರಿದಂತೆ ಮಾಹಿತಿ ತಂತ್ರಜ್ಞಾನ ಸಂಬಂಧಿತ ಕೋರ್ಸ್‌ಗಳನ್ನು ಶುರುಮಾಡುವ ಚಿಂತನೆ ಇದೆ. ’ಕಲಿಯುವ ಸಂದರ್ಭದಲ್ಲಿ ಗಳಿಸು’ ಎನ್ನುವ ನೀತಿಯನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಹೋಗುವ ಉದ್ದೇಶವನ್ನೂ ವಿಶ್ವವಿದ್ಯಾಲಯ ಹೊಂದಿದೆ.
ಸಂಸ್ಥೆಗೆ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಪುರುಷ ಮತ್ತು ಮಹಿಳಾ ವಿದ್ಯಾರ್ಥಿಗಳ ವಸತಿನಿಲಯಗಳ ವಿಸ್ತರಣಾ ಕಾರ್ಯಗಳ ಮೂಲಕ ವಸತಿ ವ್ಯವಸ್ಥೆ ಕಲ್ಪಿಸುವುದು, ವಿದ್ಯಾರ್ಥಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಉನ್ನತ ಸಾರಿಗೆ ಸೌಲಭ್ಯವನ್ನು ಒದಗಿಸಿಕೊಡುವ ವ್ಯವಸ್ಥೆ ಮಾಡಿಕೊಡಲಾಗುತ್ತಿದೆ.
ಕೊಡಗು ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೀಠಗಳನ್ನು ಸ್ಥಾಪಿಸುವುದರ ಜೊತೆಗೆ ಆ ಪೀಠಗಳ ಸಹಯೋಗದೊಂದಿಗೆ ವಿಶ್ವವಿದ್ಯಾಲಯದ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುವ ತೀರ್ಮಾನ ಮಾಡಲಾಗಿದೆ. ಕೊಡವ ಪೀಠ, ಕನಕ ಪೀಠ, ಅಂಬಿಗರ ಚೌಡಯ್ಯ ಪೀಠ, ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಪೀಠ ಜತೆಗೆ ವಿವಿಧ ಧತ್ತಿನಿಧಿಗಳ ಮೂಲಕ ಧನಸಹಾಯ ಪಡೆದು ವಿಶ್ವವಿದ್ಯಾಲಯ ಅಭಿವೃದ್ಧಿಗೆ ಬಳಸಿಕೊಳ್ಳಲು ಪ್ರಯತ್ನ ನಡೆದಿದೆ.
ಕೊಡಗು ವಿಶ್ವವಿದ್ಯಾಲಯದ ಘಟಕ ಕಾಲೇಜು ಆಗಿರುವ ಮಡಿಕೇರಿ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ೭೫ನೇ ವರ್ಷಾಚರಣೆ ಸಂಭ್ರಮದಲ್ಲಿದೆ. ಈ ಹಿನ್ನೆಲೆಯಲ್ಲಿ ಕಾಲೇಜು ನವೀನ ರೀತಿಯಲ್ಲಿ ಉನ್ನತೀಕರಣಗೊಳಿಸುವುದು, ಕೊಠಡಿಗಳ ಸಂಖ್ಯೆ ಹೆಚ್ಚಿಸುವುದು, ನೂತನ ಕೋರ್ಸ್‌ಗಳನ್ನು ಪರಿಚಯಿಸುವುದು ಮತ್ತಿತರ ಯೋಜನೆಗಳನ್ನು ರೂಪಿಸಲಾಗುತ್ತಿದೆ.
ವಿಶ್ವವಿದ್ಯಾಲಯ ಕ್ಯಾಂಪಸ್‌ನಲ್ಲಿ ಅಟಲ್ ಇನೋವೇಷನ್ ಮಿಷನ್ ಆರಂಭಿಸುವ ಚಿಂತನೆಯನ್ನೂ ಕುಲಪತಿ ಹೊಂದಿದ್ದಾರೆ. ಇದರಿಂದ ನವೋದ್ಯಮಿಗಳಿಗೆ ಸಾಕಷ್ಟು ಅನುಕೂಲ ಆಗುತ್ತದೆ. ಪಠ್ಯಕ್ರಮ ಮತ್ತು ಕೈಗಾರಿಕೆಗಳ ಅಗತ್ಯತೆಯ ನಡುವಿನ ಅಂತರ ಕಡಿಮೆ ಮಾಡಲು ಕೂಡ ಸಹಕಾರಿ ಆಗುತ್ತದೆ. ಬದಲಾಗುತ್ತಿರುವ ಜಗತ್ತಿನಲ್ಲಿ ಪ್ರಸ್ತುತ ಅಗತ್ಯತೆಗೆ ತಕ್ಕ ಪಠ್ಯಕ್ರಮ ರಚನೆಯ ಅಗತ್ಯವಿದ್ದು, ಈ ಬಗ್ಗೆಯೂ ವಿಶ್ವವಿದ್ಯಾಲಯ ಗಮನಹರಿಸಲಿದೆ. ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುವವರಿಗಾಗಿ ಕೊಡಗು ಕೆರಿಯರ್ ಡೆವಲಪ್‌ಮೆಂಟ್ ಅಕಾಡೆಮಿ ಸ್ಥಾಪಿಸುವ ಚಿಂತನೆಯನ್ನೂ ಹೊಂದಲಾಗಿದೆ.
ಹೊಸ ವಿಶ್ವವಿದ್ಯಾಲಯ ಸ್ಥಾಪನೆ ಸಂದರ್ಭ ಸರ್ಕಾರದ ಆಶಯದಂತೆ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಅರ್ಥಪೂರ್ಣ ಕೆಲಸ ಮಾಡಲಾಗುವುದು. ಸ್ಥಳೀಯ ಶೈಕ್ಷಣಿಕ ಉದ್ದೇಶ ಈಡೇರಿಸುವ ಉದ್ದೇಶದಿಂದ ಸ್ಪಷ್ಟ ಧ್ಯೇಯೋದ್ದೇಶ, ಗುರಿ ಇಟ್ಟುಕೊಳ್ಳಲಾಗಿದೆ. ಸ್ಥಳೀಯರಿಗೆ ಮೊದಲ ಆದ್ಯತೆ ಕೊಡಲಾಗುವುದು. ನಾವೀನ್ಯತೆ, ಉದ್ಯಮಶೀಲತೆ ಮೂಲಕ ವಿಶ್ವವಿದ್ಯಾಲಯ ಕಟ್ಟುವ ಉದ್ದೇಶ ಹೊಂದಲಾಗಿದೆ. ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗುವುದು
ಅಶೋಕ ಸಂಗಪ್ಪ ಅಲೂರ, ಕುಲಪತಿ, ಕೊಡಗು ವಿಶ್ವವಿದ್ಯಾಲಯ
ಕೊಡಗು ವಿಶ್ವವಿದ್ಯಾಲಯವನ್ನು ರಾಜ್ಯದಲ್ಲೇ ಮಾದರಿ ವಿಶ್ವವಿದ್ಯಾಲಯ ಮಾಡುವ ಗುರಿ ಹೊಂದಲಾಗಿದೆ. ಈ ಗುರಿಯನ್ನು ಖಂಡಿತವಾಗಿಯೂ ಸಾಧಿಸುವ ಛಲ ನಮ್ಮಲ್ಲಿದೆ. ಉತ್ಸಾಹಿ ಕುಲಪತಿ ಮಾರ್ಗದರ್ಶನದಲ್ಲಿ ಎಲ್ಲಾ ಸಿಬ್ಬಂದಿ ಸಹಕಾರದಲ್ಲಿ ಇದು ಸಾಧ್ಯವಾಗಲಿದೆ.
ಡಾ. ಸೀನಪ್ಪ, ಮೌಲ್ಯಮಾಪನ ಕುಲಸಚಿವ, ಕೊಡಗು ವಿಶ್ವವಿದ್ಯಾಲಯ