ಮಡಿಕೇರಿ: ಪಟ್ಟಭದ್ರ ಹಿತಾಸಕ್ತಿಗಳಿಂದ ವಕ್ಛ್ ಮಂಡಳಿಗೆ ಸೇರಿದ ರಾಜ್ಯವ್ಯಾಪಿ ಸಾವಿರಾರು ಕೋಟಿ ಮೌಲ್ಯದ ಆಸ್ತಿ ಕಬಳಿಕೆ ಆಗಿದ್ದು, ಕಾನೂನು ಹಾಗೂ ಸಂಘಟಿತ ಹೋರಾಟದಿಂದ ಮಾತ್ರ ನ್ಯಾಯ ದೊರಕುತ್ತದೆ ಎಂದು ಶಾಸಕರುಗಳಾದ ಕೆ.ಜಿ.ಬೋಪಯ್ಯ ಅಭಿಮತ ವ್ಯಕ್ತಪಡಿಸಿದರು.
ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿ ಕೊಡಗು ಜಿಲ್ಲಾ ವಕ್ಛ್ ಸಲಹಾ ಸಮಿತಿ ವತಿಯಿಂದ ಆಯೋಜಿಸಿದ್ದ ವಕ್ಛ್ ಸಮ್ಮಿಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಕರ್ನಾಟಕ ರಾಜ್ಯ ಸರಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷರು ಹಾಗೂ ವೀರಾಜಪೇಟೆ ಶಾಸಕರಾಗಿರುವ ಕೆ.ಜಿ.ಬೋಪಯ್ಯ, ರಾಜ್ಯವ್ಯಾಪಿ ವಕ್ಛ್‌ಗೆ ಸೇರಿದ ಸಾವಿರಾರು ಎಕರೆ ಜಾಗಗಳಿವೆ. ಆದರೆ, ಕೇವಲ ೬ ಕೋಟಿ ಆದಾಯ ಮಾತ್ರ ಬೊಕ್ಕಸಕ್ಕೆ ಬರುತಿತ್ತು. ಇತ್ತೀಚಿಗೆ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಸಭೆಯಲ್ಲಿ ಆಸ್ತಿಯ ಸಂರಕ್ಷಣೆ ಕುರಿತು ಕ್ರಮಕೈಗೊಳ್ಳಲು ಹಾಗೂ ಆದಾಯ ಮೂಲಗಳನ್ನು ವೃದ್ಧಿಸಲು ಸೂಚಿಸದ ನಂತರ ಆದಾಯ ರೂ. ೬೦ ಕೋಟಿ ಹೆಚ್ಚಳವಾಗಿದೆ. ಆಡಳಿತವನ್ನು ನಿಯಂತ್ರಿಸುವ ಪಟ್ಟಭದ್ರ ಹಿತಾಸಕ್ತಿಗಳಿಂದ ವಕ್ಛ್ ಆಸ್ತಿ ಒತ್ತುವರಿಯಾಗಿ ಅನ್ಯರ ಪಾಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವ ಕೆಲಸ ಮಾಡಲಾಗುತ್ತದೆ ಎಂದರು.
ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಯಿಂದ ಬಿಡಿಗಾಸು ಆದಾಯ ಬರುತ್ತಿರುವುದು ಅವ್ಯವಹಾರಕ್ಕೆ ನಿದರ್ಶನವಾಗಿದೆ. ಆಸ್ತಿಗಳು ಮರುವಶಕ್ಕೆ ಬಂದು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸಿದರೆ ಸರಕಾರದ ಹಣವೇ ವಕ್ಛ್‌ಗೆ ಬೇಡ. ಈ ಹಿನ್ನೆಲೆ ಕಾನೂನು ಹೋರಾಟ ಅಗತ್ಯ ಎಂದು ಹೇಳಿದ ಅವರು, ಅನ್ವರ್ ನಲಪಾಡಿ ವರದಿ ಜಾರಿಯಾದರೆ ಮುಸ್ಲಿಮರೆ ಪ್ರಯೋಜನವಾಗುತ್ತದೆ. ಸರ್ವರು ದೇಶದ ಪ್ರಗತಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ವಕ್ಛ್ ಸಲಹಾ ಸಮಿತಿ ಜಿಲ್ಲಾಧ್ಯಕ್ಷ ಅಬ್ದುಲ್ ಹಕೀಂ ಗೋಣಿಕೊಪ್ಪ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ವಕ್ಛ್ ಮಂಡಳಿ ಅಧ್ಯಕ್ಷ ಎನ್.ಕೆ.ಮುಹಮ್ಮದ್ ಶಾಫಿ ಸಅದಿ, ವಕ್ಛ್ ಸಲಹಾ ಸಮಿತಿ ಅಧಿಕಾರಿ ಮಹಮ್ಮದ್ ಇರ್ಫಾನ್, ಕೊಡಗು ಜಿಲ್ಲಾ ಸಹಾಯಕ ಖಾಝಿಗಳಾದ ಅಬ್ದುಲ್ಲಾ ಫೈಝಿ, ಶಾದುಲಿ ಫೈಝಿ ಪ್ರಾರ್ಥನೆ ನೆರವೇರಿಸಿದರು. ಸಲಹಾ ಸಮಿತಿ ಉಪಾಧ್ಯಕ್ಷರುಗಳಾದ ಮುಹಮ್ಮದ್ ನಾಸೀರ್, ಎಂ.ಜಿ.ನಝೀರ್, ಶಾಫಿ ಸಅದಿ, ಸದಸ್ಯರುಗಳಾದ ಕುಂಞ ಅಬ್ದುಲ್ಲಾ ಸೇರಿದಂತೆ ಇನ್ನಿತರರು ಹಾಜರಿದ್ದರು.