ಜಿಲ್ಲೆ

ಮುಖ್ಯರಸ್ತೆ ಅಭಿವೃದ್ಧಿಗೆ ೧೦೦ ಕೋಟಿ ರೂಪಾಯಿ

reportermys

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ

ಕೊಡಗಿನ ಮುಖ್ಯರಸ್ತೆ ಅಭಿವೃದ್ಧಿಗೆ ೧೦೦ ಕೋಟಿ ರೂಪಾಯಿ ವಿಶೇಷ ಅನುದಾನವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಂಗಡ ಪತ್ರದಲ್ಲಿ ಘೋಷಿಸಿದ್ದಾರೆ. ಕೊಡಗಿನ ಜನತೆ ಬಯಸಿದ್ದಂತೆ ಒಳ್ಳೆಯ ರಸ್ತೆ ನಿರ್ಮಾಣಕ್ಕೆ ಈ ಅನುದಾನ ಸಹಕಾರಿ ಆಗಲಿದೆ. ಜನರ ಬಯಕೆಯಂತೆ ಅನುದಾನ ಘೋಷಣೆಯಾಗಿದೆ.

ಕೊಡಗಿನ ರಸ್ತೆ ದುಸ್ಥಿತಿ ಬಗ್ಗೆ ಜನವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಧಾರಾಕಾರವಾಗಿ ಸುರಿಯುವ ಮಳೆಯಿಂದ ರಸ್ತೆ ಪ್ರತಿವರ್ಷ ದುಸ್ಥಿತಿಗೆ ತಲುಪುತ್ತದೆ. ಮುಖ್ಯರಸ್ತೆ ನಿರ್ಮಾಣಕ್ಕೆ ವಿಶೇಷ ಅನುದಾನ ಘೋಷಣೆಯಾಗಿರುವುದು ಜನ ಮೆಚ್ಚುಗೆಗೆ ಭಾಜನ ವಾಗಿದೆ. ಶಾಸಕದ್ವಯರು ರಸ್ತೆ ಅಭಿವೃದ್ಧಿಗೆ ೧೫೦ ಕೋಟಿ ರೂ. ವಿಶೇಷ ಅನುದಾನ ಮುಂಗಡ ಪತ್ರದಲ್ಲಿ ಒದಗಿಸುವಂತೆ ಶಾಸಕದ್ವಯ ರು ಮುಖ್ಯಮಂತ್ರಿಗೆ ಲಿಖಿತ ಕೋರಿಕೆ ಸಲ್ಲಿಸಿದರು. ಇದಕ್ಕೆ ಸಿಎಂ ಸಕಾರತ್ಮಕವಾಗಿ ಸ್ಪಂದಿಸಿದ್ದಾರೆ.

ಶೂನ್ಯ ಬಡ್ಡಿ ದರದಲ್ಲಿ ೩ ಲಕ್ಷ ರೂಪಾಯಿವರೆಗೆ ನೀಡುತ್ತಿದ್ದ ಬೆಳೆ ಸಾಲವನ್ನು ೫ ಲಕ್ಷ ರೂಪಾಯಿಗೆ ಏರಿಕೆ ಮಾಡಿರುವುದು ಕೊಡಗಿನ ರೈತಾಪಿ ವರ್ಗಕ್ಕೆ ವರದಾನವಾಗಲಿದೆ. ಸಹಕಾರ ಸಂಘಗಳ ಮೂಲಕ ಕೊಡಗಿನ ರೈತರು ಹೆಚ್ಚಿನ ಪ್ರಮಾಣದಲ್ಲಿ ಸಾಲ ಪಡೆದುಕೊಳ್ಳು ತ್ತಾರೆ. ಮೊತ್ತ ಏರಿಕೆಯಿಂದ ಕೃಷಿಗೆ ಮತ್ತಷ್ಟು ಉತ್ತೇಜನ ನೀಡಿದ್ದಂತಾಗಿದೆ.

ಪಶ್ಚಿಮಘಟ್ಟಗಳ ವ್ಯಾಪ್ತಿಯ ಜಿಲ್ಲೆಗಳಲ್ಲಿ ಮಳೆಗಾಲದಲ್ಲಿ ರಭಸವಾಗಿ ಹರಿಯುವ ಹಳ್ಳ ತೊರೆಗಳನ್ನು ಸುರಕ್ಷಿತವಾಗಿ ದಾಟಲು ಸಂಪರ್ಕ ರಹಿತ ಜನ ವಸತಿ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸಲು ೫೦೦ ಕಾಲುಸಂಕ ನಿರ್ಮಾಣಕ್ಕೆ ೨೫೦ ಕೋಟಿ ರೂ. ಅನುದಾನ ಘೋಷಿಸಲಾಗಿದೆ. ಈ ಅನುದಾನದಲ್ಲಿ ಕೊಡಗಿನ ಕುಗ್ರಾಮಗಳಿಗೆ ಸಂಪರ್ಕ ಒದಗಿಸಲು ಕಾಲುಸಂಕ ನಿರ್ಮಾಣ ಆಗುವ ನಿರೀಕ್ಷೆ ಮೂಡಿಸಿದೆ.
ಉತ್ತರ ಕನ್ನಡ ಜಿಲ್ಲೆಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಘೋಷಿಸಲಾಗಿದೆ. ಆದರೆ, ಕೊಡಗಿನ ಜನರ ಬೇಡಿಕೆಗೆ ಸರ್ಕಾರ ಸ್ಪಂದಿಸದಿರುವುದು ನಿರಾಸೆ ಮೂಡಿಸಿದೆ.

ಕೊಡಗಿನ ಹಲವಾರು ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಿಲ್ಲ ಎಂಬ ಟೀಕೆಯೂ ವ್ಯಕ್ತವಾಗುತ್ತದೆ. ಚುನಾವಣೆ ಸನ್ನಿಹದಲ್ಲಿ ಮಂಡಿಸಿರುವ ಮುಂಗಡ ಪತ್ರ ಕಾರ್ಯರೂಪಕ್ಕೆ ಬರುವುದಿಲ್ಲ ಎಂಬ ಅನುಮಾನವೂ ವ್ಯಕ್ತವಾಗುತ್ತಿದೆ. ಶುಕ್ರವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಡಿಸಿದ ಮುಂಗಡ ಪತ್ರಕ್ಕೆ ಸಂಬಂಧಿಸಿದ್ದಂತೆ ಲೌಡ್ ಸ್ಪೀಕರ್‌ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ.

**
ರೈತರಿಗೆ ಬಡ್ಡಿ ರಹಿತ ಸಾಲದ ಮೊತ್ತವನ್ನು ೩ ಲಕ್ಷ ರೂಪಾಯಿಯಿಂದ ೫ ಲಕ್ಷ ರೂಪಾಯಿಗೆ ಏರಿಕೆ ಮಾಡಿರುವುದು ಉತ್ತಮ ಬೆಳವಣಿಗೆ. ಇದರಿಂದ ಸಣ್ಣ ರೈತರಿಗೆ ಹೆಚ್ಚಿನ ಪ್ರಯೋಜನವಾಗಲಿದೆ. ವರ್ಷಕ್ಕೆ ೧೦ ಸಾವಿರ ಸಹಾಯಧನ ನೀಡಲಾಗಿದೆ. ಕಾಡಾನೆಗಳಿಂದ ನಷ್ಟದ ಪರಿಹಾರ ಮೊತ್ತ ಹೆಚ್ಚಿಸಿರುವುದು ಜಿಲ್ಲೆಯ ಜನತೆಗೆ ಉಪಯುಕ್ತವಾಗಿದೆ. ಬಿ. ಆರ್. ಅನೂಪ್, ಉದ್ಯಮಿ, ಗೋಣಿಕೊಪ್ಪ.

**
ಕೊಡಗಿನ ಮುಖ್ಯರಸ್ತೆಗಳ ಅಭಿವೃದ್ಧಿಗೆ ೧೦೦ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಇದು ಮತದಾರರ ಬಾಯಿಗೆ ತುಪ್ಪ ಸವರುವ ಪ್ಯಾಕೇಜ್. ಈ ಹಣ ಸಹ ತಕ್ಷಣವೇ ರಸ್ತೆ ಅಭಿವೃದ್ಧಿಗೆ ಉಪಯೋಗವಂತೂ ಆಗೋದಿಲ್ಲ. ೨೦೨೩ ರ ಎಲೆಕ್ಷನ್ ಮುಗಿದು, ೨೦೨೮ ರಲ್ಲಿ ಮತ್ತೊಂದು ಎಲೆಕ್ಷನ್ ಬರುತ್ತಲ್ಲ. ಆಗ ರಸ್ತೆಗಳಿಗೆ ತೇಪೆ ಹಾಕಿ, ಮತದಾರರನ್ನು ಮಂಗ ಮಾಡಬೇಕಲ್ವಾ. ಅದಕ್ಕೇ ಘೋಷಣೆ ಆಗಿರೋ ಪ್ಯಾಕೇಜ್ ಅಷ್ಟೇ. ಬೊಳ್ಳಿಯಂಗಡ ಬೋಪಣ್ಣ, ಖಾಸಗಿ ಸಂಸ್ಥೆ ಉದ್ಯೋಗಿ, ಪಾಲಿಬೆಟ್ಟ.

**
ಕೊಡಗಿನ ಪಾಲಿಗೆ ಜನರ ಮೂಗಿಗೆ ತುಪ್ಪ ಸವರಿದ್ದಾರೆ. ಜಿಲ್ಲಾ ಮುಖ್ಯರಸ್ತೆಗಳಿಗೆ ೧೦೦ ಕೋಟಿ ರೂ. ಅಂಕಿ- ಅಂಶ ನೀಡಿ ಕೊಡಗಿನ ಜನತೆಯನ್ನು ವಂಚಿಸಿದ್ದಾರೆ. ಜಿಲ್ಲಾ ಮುಖ್ಯರಸ್ತೆಗಳು ಹಾಗೂ ರಾಜ್ಯ ಹೆದ್ದಾರಿ ನಿರ್ವಹಣೆಗೆ ಪ್ರತಿವರ್ಷ ಹಣ ಬಿಡುಗಡೆಯಾಗುತ್ತದೆ. ಕೊಡಗಿಗೆ ಸಂದಾಯವಾಗುವ ಅನುದಾನವನ್ನು ಪ್ರತ್ಯೇಕವಾಗಿ ನಮೂದಿಸಿ, ಪ್ಯಾಕೇಜ್ ಹೆಸರಿನಲ್ಲಿ ಘೋಷಿಸಲಾಗಿದೆ. ಕೊಡಗಿನ ಗ್ರಾಮೀಣ ರಸ್ತೆ ಅಭಿವೃದ್ಧಿಗೆ ಕನಿಷ್ಠ ೨ ಸಾವಿರ ಕೋಟಿ ನೀಡಬೇಕಿತ್ತು. ತೆನ್ನೀರ ಮೈನಾ, ಕಾಂಗ್ರೆಸ್ ಜಿಲ್ಲಾ ವಕ್ತಾರ.

**
ಸಾರ್ವಜನಿಕ ಶಿಕ್ಷಣ ಉಳಿಸಿ ಹೋರಾಟದ ಹಲವು ಬೇಡಿಕೆಗಳಿಗೆ ರಾಜ್ಯ ಬಜೆಟ್‌ನಲ್ಲಿ ಮನ್ನಣೆ ಸಿಕ್ಕಿದೆ. ವಿದ್ಯಾರ್ಥಿಗಳ ಹೋರಾಟಕ್ಕೆ ಸಂದ ಜಯ. ಸರ್ಕಾರಿ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ಸರ್ಕಾರಿ ಶಾಲೆಗಳ ನವೀಕರಣ, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್, ಸರ್ಕಾರಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಸೇರಿದಂತೆ ಹಲವು ಬೇಡಿಕೆ ಈಡೇರಿಸಲಾಗಿದೆ. ಸುಭಾಷ್, ಜಿಲ್ಲಾ ಸಂಚಾಲಕರು, ಅಖಿಲ ಭಾರತೀಯ ಪ್ರಜಾಸತ್ತಾತ್ಮಾಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್‌ಒ), ಕೊಡಗು.

**
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ದೇವಾಟ್‌ಪರಂಬು ಸ್ಮಾರಕ, ಕ್ರೀಡಾ ವಿಶ್ವ ವಿದ್ಯಾಲಯ, ಕೊಡವ ಅಭಿವೃದ್ಧಿ ನಿಗಮ, ಕೊಡವ ಬುಡಕಟ್ಟು ವಿಶೇಷ ಸ್ಥಾನಮಾನ, ಕಾಫಿ ಬೆಳೆಗಾರರ ಸಮಸ್ಯೆ ಪರಿಹಾರ ಬೇಡಿಕೆಗೆ ಸರ್ಕಾರ ಸ್ಪಂದಿಸಿಲ್ಲ. ಇದು ೨೫-೩೦ ವರ್ಷದಿಂದ ಬಿಜೆಪಿಗೆ ಬೆಂಬಲ ನೀಡುತ್ತಾ ಬಂದಿರುವ ಬೆಂಬಲಕ್ಕೆ ಸಿಕ್ಕ ಪ್ರತಿಫಲ. ಚಾಮೇರ ದಿನೇಶ್ ಬೆಳ್ಯಪ್ಪ, ಅಧ್ಯಕ್ಷರು, ಕೊಡವಾಮೆರ ಕೊಂಡಾಟ.

**
ಪ್ರತಿಯಂತೆ ರಸ್ತೆಗೆಂದು ಒಂದಷ್ಟು ಅನುದಾನ ದೊರೆತ್ತಿದೆ. ಆದರೆ, ಕೊಡಗಿನ ರಸ್ತೆಗಳ ಸ್ಥಿತಿ ಮಾತ್ರ ಸುಧಾರಿಸುತ್ತಿಲ್ಲ. ಕೊಡಗಿಗೆ ಸಿಮೀತವಾಗಿ ವಿಶೇಷ ಯೋಜನೆ ಇಲ್ಲವಾಗಿದ್ದು, ಮತ್ತೆ ಕೊಡಗಿನ ಬಗ್ಗೆ ನಿರ್ಲಕ್ಷ್ಯ ಧೋರಣೆ ಮುಂದುವರೆದಿದೆ. ಜನಪ್ರತಿನಿಧಿಗಳು ಜಿಲ್ಲೆಯ ಅಗತ್ಯತೆಯನ್ನು ಸರ್ಕಾರಕ್ಕೆ ಮುಟ್ಟಿಸುವಲ್ಲಿ ವಿಫಲತೆ ಕಂಡಿದ್ದಾರೆ. ಪೇರಿಯಂಡ ಜಯಂತಿ ಉತ್ತಪ್ಪ, ಗೃಹಿಣಿ, ಬಲಮುರಿ.

**
ಚುನಾವಣಾ ಗಿಮಿಕ್ ಬಜೆಟ್. ಕೇವಲ ಮತ ಬ್ಯಾಂಕ್ ಸೃಷ್ಟಿಸಲು ತಯಾರಾದ ಬಜೆಟ್. ಬಜೆಟ್ ಘೋಷಣೆಗಳು ಅನುಷ್ಠಾನವಾಗು ವುದಿಲ್ಲ. ಕೊಡಗಿನಲ್ಲಿ ನಿವೇಶನ ರಹಿತ ಕಾರ್ಮಿಕರು ಸಾವಿರಾರು ಸಂಖ್ಯೆಯಲ್ಲಿದ್ದಾರೆ. ಕಾರ್ಮಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ, ನಿವೇಶನ ಕಲ್ಪಿಸಿ, ಮನೆ ಕಟ್ಟಿಕೊಡುವಂತ ಯೋಜನೆಗಳನ್ನು ಸರ್ಕಾರ ಮಾಡಿಲ್ಲ. ಕಾರ್ಮಿಕರನ್ನು ದ್ವಿತೀಯ ದರ್ಜೆ ಪ್ರಜೆಗಳೆಂದು ಸರ್ಕಾರಗಳು ಗುರುತಿಸಿವೆ. ಇನ್ನು ಬಜೆಟ್‌ನಲ್ಲಿ ನಾವೇನು ನಿರೀಕ್ಷೆ ಮಾಡುವುದು. ಎಚ್.ಎಂ. ಸೋಮಪ್ಪ, ಜಿಲ್ಲಾಧ್ಯಕ್ಷರು, ಎಐಟಿಯುಸಿ.

**
ಕೊಡಗಿನ ರೈತರಿಗೆ, ಕಾಫಿ ಬೆಳೆಗಾರರಿಗೆ ಏನೂ ಕೊಟ್ಟಿಲ್ಲ. ಕಾಫಿ ಬೆಳೆಗಾರರ ೧೦ ಎಚ್‌ಪಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಹಾಗೂ ಬಾಕಿಯಿರುವ ವಿದ್ಯುತ್ ಬಿಲ್ ಮನ್ನಾ ಬೇಡಿಕೆ ಯಾವುದೇ ಸ್ಪಂದನ ನೀಡಿಲ್ಲ. ರೈತರಿಗೆ ಅನ್ಯಾಯ ಮಾಡಿದ ಯಾವುದೇ ಸರ್ಕಾರಗಳು ಉಳಿದಿಲ್ಲ. ರೈತರು, ಕಾಫಿ ಬೆಳೆಗಾರರು ಸರ್ಕಾರಕ್ಕೆ ತಕ್ಕ ಪಾಠ ಕಲಿಸುತ್ತೇವೆ. ಜಿ.ಎಂ. ಹೂವಯ್ಯ, ಉಪಾಧ್ಯಕ್ಷರು, ರೈತ ಸಂಘ, ಸೋಮವಾರಪೇಟೆ ತಾಲೂಕು.