ಮಡಿಕೇರಿ:
ತರಬೇತುದಾರರಾದ ದಿನೇಶ್ ಮತ್ತು ಪಾರ್ವತಿ ಮಾರ್ಗದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದ ಕೊಡಗು ವಿದ್ಯಾಲಯ ಬಾಲಕ ಮತ್ತು ಬಾಲಕಿಯರ ಹಾಕಿ ತಂಡ ಅ. ೨೮ ರಿಂದ ಬಾಗಲಕೋಟೆಯಲ್ಲಿ ನಡೆದ ದಕ್ಷಿಣ ವಲಯ ಸಬ್ ಜೂನಿಯರ್ ಹಾಕಿ ಪಂದ್ಯಾಟಗಳಲ್ಲಿ ಬೆಳ್ಳಿ ಪದಕ ಪಡೆದುಕೊಂಡಿದೆ. ನಾಯಕಿ ನೀತು ಚೌಧರಿ, ಉಪನಾಯಕಿ ಪರ್ಲಿನ್ ಪೂವಮ್ಮ ನೇತೃತ್ವದ ಸಬ್ ಜೂನಿಯರ್ ಬಾಲಕಿಯರ ಹಾಕಿ ತಂಡ ಹಾಗೂ ನಾಯಕ ಧವನ್, ಉಪನಾಯಕ ಆಯೂಷ್ ಶೆಟ್ಟಿ ನೇತೃತ್ವದ ಸಬ್ ಜೂನಿಯರ್ ಬಾಲಕರ ಹಾಕಿ ತಂಡ ಬಾಲಕ ಮತ್ತು ಬಾಲಕಿಯರ ವಿಭಾಗಗಳಲ್ಲಿ ಲೀಗ್ ಮತ್ತು ನಾಕೌಟ್ ಹಂತದಲ್ಲಿ ತಾನಾಡಿದ ಎಲ್ಲಾ ಪಂದ್ಯಾಟಗಳಲ್ಲೂ ಭರ್ಜರಿ ಗೆಲುವು ದಾಖಲಿಸುವ ಮೂಲಕ ಫೈನಲ್‌ಗೇರಿ ಅಂತಿಮ ನಿರ್ಣಾಯಕ ಫೈನಲ್ ಪಂದ್ಯದಲ್ಲಿ ವಿರೋಚಿತ ಸೋಲನ್ನನುಭವಿಸುವ ಮೂಲಕ ರನ್ನರ್ ಅಫ್ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಫೈನಲ್ ಪಂದ್ಯದಲ್ಲಿ ಕೊಡಗು ವಿದ್ಯಾಲಯ ಬಾಲಕಿಯರ ತಂಡ ೦-೧ ಗೋಲಿನಿಂದ ಮಹಾರಾಷ್ಟ್ರ ತಂಡದ ವಿರುದ್ಧ ಹಾಗೂ ಕೊಡಗು ವಿದ್ಯಾಲಯ ಬಾಲಕರ ತಂಡ ೦-೧ ಗೋಲಿನಿಂದ ಬಾಗಲಕೋಟೆ ತಂಡದ ವಿರುದ್ಧ ಸೊಲನ್ನನುಭವಿಸುವ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿತು. ಕೊಡಗು ವಿದ್ಯಾಲಯ ಬಾಲಕಿಯರ ತಂಡದ ನಾಯಕಿ ನೀತು ಚೌಧರಿ ಹಾಗೂ ಕೊಡಗು ವಿದ್ಯಾಲಯದ ಬಾಲಕರ ತಂಡದ ಮುನ್ನಡೆ ಆಟಗಾರ ನಮನ್ ಬೆಳ್ಯಪ್ಪ ಬೆಸ್ಟ್ ಫಾರ್ವರ್ಡ್ ಪ್ರಶಸ್ತಿಗೆ ಭಾಜನರಾದರು.