ಜಿಲ್ಲೆ

ಕೊಡಗು ವಿದ್ಯಾಲಯದ ಕ್ರೀಡಾ ದಿನಾಚರಣೆ

ಸುನಿಲ್ ಪೊನ್ನೇಟಿ

ಮಡಿಕೇರಿ:

ದುಶ್ಚಟಗಳಿಂದ ದೂರವಿರಲು ಸಹಕಾರಿಯಾಗಿರುವ ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲರಾಗಿ ಪಾಲ್ಗೊಳ್ಳುವ ಮೂಲಕ ದೈಹಿಕ ಆರೋಗ್ಯದೊಂದಿಗೆ ಮಾನಸಿಕ ಆರೋಗ್ಯವನ್ನೂ ರಕ್ಷಿಸಲು ಸಾಧ್ಯ ಎಂದು ಉದ್ಯಮ ತಜ್ಞ ಕೊಕ್ಕಲೇರ ಕುಮಾರ್ ಸುಬ್ಬಯ್ಯ ಹೇಳಿದರು. ಶನಿವಾರ ನಗರದ ಕೊಡಗು ವಿದ್ಯಾಲಯದ ಕ್ರೀಡಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಯಾವುದೇ ಶೈಕ್ಷಣಿಕ ಸಂಸ್ಥೆಗಳಲ್ಲಿಯೂ ಕ್ರೀಡೆ ರಹಿತವಾದ ಶಿಕ್ಷಣ ಪ್ರಯೋಜನಕಾರಿಯಾಗದು. ಕ್ರೀಡಾ ತರಬೇತಿಯೊಂದಿಗಿನ ವಿದ್ಯೆ ಶಿಕ್ಷಣವನ್ನು ಪರಿಪೂರ್ಣಗೊಳಿಸುತ್ತದೆ. ಹಿರಿಯರು ಹೇಗೆ ವರ್ತಿಸುತ್ತಾರೆ ಎಂಬುದನ್ನೇ ಕಿರಿಯರೂ ಅನುಕರಿಸುವುದರಿಂದಾಗಿ ಹಿರಿಯರ ನಡವಳಿಕೆ ಕಿರಿಯರ ಪಾಲಿಗೆ ಮಾರ್ಗದರ್ಶಿಯಾಗಿರಬೇಕು. ಕ್ರಿಕೆಟ್, ಹಣ ಮತ್ತು ಖ್ಯಾತಿ ತಂದುಕೊAಡುವ ಕ್ರೀಡೆಯಾಗಿದ್ದರೂ ಕ್ರಿಕೆಟ್‌ನಲ್ಲಿ ಸೀಮಿತ ಅವಕಾಶಗಳಿದೆ. ಹೀಗಾಗಿ ಭಾರತದಲ್ಲಿ ಇರುವ ಇತರ ಕ್ರೀಡೆಗಳಲ್ಲಿಯೂ ಪಾಲ್ಗೊಳ್ಳಲು ಕ್ರೀಡಾ ವಿದ್ಯಾರ್ಥಿಗಳು ಆಸಕ್ತಿ ತೋರುವ ಮೂಲಕ ಉತ್ತಮ ಕ್ರೀಡಾ ತಾರೆಗಳಾಗಿ ಹೊರಹೊಮ್ಮಲು ಸಾಧ್ಯವಿದೆ ಎಂದರು.

ಕೊಡಗು ವಿದ್ಯಾಲಯದ ಆಡಳಿತ ಮಂಡಳಿ ಉಪಾಧ್ಯಕ್ಷೆ ಊರ್ವಶಿ ಮುದ್ದಯ್ಯ ಮಾತನಾಡಿ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಕನಸಿನ ಕೂಸಾಗಿ ಪ್ರಾರಂಭವಾದ ಕೊಡಗು ವಿದ್ಯಾಲಯ 40 ವರ್ಷಗಳಲ್ಲಿ ಸಾಕಷ್ಟು ಸಾಧನೆಗಳನ್ನು ಮಾಡಿದೆ. ಕೋವಿಡ್ ಲಾಕ್ ಡೌನ್ ದಿನಗಳು, ಪ್ರಾಕೃತ್ತಿಕ ವಿಕೋಪದಂಥ ಸವಾಲುಗಳನ್ನೂ ಸಂಸ್ಥೆ ಸಮರ್ಥವಾಗಿ ಎದುರಿಸಿ ಉತ್ತಮ ಶಿಕ್ಷಣ ನೀಡಿದೆ. ವಿದ್ಯಾರ್ಥಿಗಳು ಕಲಿತ ವಿದ್ಯೆಜತೆಗೇ ಕ್ರೀಡಾ, ಸಾಂಸ್ಕೃತಿಕ ಪ್ರತಿಭೆಗಳನ್ನು ಅನಾವರಣಗೊಳಿಸುವಲ್ಲಿ ಕ್ರೀಡಾದಿನಾಚರಣೆ ಮಹತ್ವ ಪಡೆಯುತ್ತದೆ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕೊಡಗು ವಿದ್ಯಾಲಯದ ಹಾಕಿ ಮತ್ತು ಕ್ರೀಡಾರಂಗದಲ್ಲಿ ರಾಷ್ಟ್ರೀಯ ಸಾಧನೆಗೆ ಕಾರಣವಾಗಿರುವ ಶಾಲೆಯ ಕ್ರೀಡಾ ತರೇತುದಾರ ದೀನಾ, ಪಾರ್ವತಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಶೈಕ್ಷಣಿಕ ಹಾಗೂ ಕ್ರೀಡಾ ಸಾಧಕ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಕೊಡಗು ವಿದ್ಯಾಲಯದ ಪ್ರಾಂಶುಪಾಲೆ ಕೆ.ಎಸ್. ಸುಮಿತ್ರಾ, ಆಡಳಿತಾಧಿಕಾರಿ ರವಿ ಪಿ., ನಿರ್ದೇಶಕರಾದ ಸಿ.ಎಸ್. ಗುರುದತ್, ಪವಿತ್ರ ಅಪ್ಪಯ್ಯ, ನಿಯತ ದೇವಯ್ಯ ಸೋಮಯ್ಯ, ರಘುಮಾದಪ್ಪ, ಪಿ. ಈ. ಕಾಳಯ್ಯ, ವಿಶೇಷ ಚೇತನ ಮಕ್ಕಳ ಶಾಲಾ ಮುಖ್ಯ ಶಿಕ್ಷಕಿ ಗೀತಾ ಶ್ರೀಧರ್, ಶಾಂತಿ ಶಂಕರ್, ಶಿಕ್ಷಕಿ ಅಲೆಮಾಡ ಚಿತ್ರಾ ನಂಜಪ್ಪ, ಸಂಗೀನ್ ಕುಶಾಲಪ್ಪ ಮತ್ತಿತರರು ಇದ್ದರು.

ಶಾಲೆಯ ನೂರಾರು ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಕ್ರೀಡಾಟುವಟಿಕೆಗಳು ಗಮನ ಸೆಳೆದವು, ಕೊಡಗು ವಿದ್ಯಾಲಯದ ವಿಶೇಷ ಚೇತನ ಮಕ್ಕಳು ಪ್ರಸ್ತುತ ಪಡಿಸಿದ ಹಂ ಹೋಂಗೇ ಕಾಮಿಯಾಬ್ ..ಏಕ್ ದಿನ್ ಎಂಬ ನೃತ್ಯ ಪ್ರೇಕ್ಷಕರ ಮೆಚ್ಚಗೆಗೆ ಕಾರಣವಾಯಿತು. ಗಣರಾಜ್ಯೋತವ ಪೆರೇಡ್ ನಲ್ಲಿ ಪಾಲ್ಗೊಂಡಿದ್ದ ಶಾಲೆಯ ಎನ್.ಸಿ.ಸಿ. ಕೆಡೆಟ್ ರಘುವಂಶಿ ಶಿವಕುಮಾರ್ ನೇತೃತ್ವದಲ್ಲಿ ನಡೆದ ವಿದ್ಯಾರ್ಥಿಗಳ ಪಥಸಂಚಲನ ಆಕರ್ಷಕವಾಗಿತ್ತು.