ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಪ್ರಕೃತಿ ರಮಣೀಯ ತಾಣ ಹೊದಿರುವ ದಕ್ಷಿಣ ಕಾಶ್ಮೀರ ಕೊಡಗಿನಲ್ಲಿ ಪ್ರವಾಸೋದ್ಯಮ ಮತ್ತಷ್ಟು ಉತ್ತೇಜಿಸುವ ಅಗತ್ಯವಿದೆ. ಸರ್ಕಾರ ಕೊಡಗು ಉತ್ಸವ ಆಯೋಜಿಸುವ ಮೂಲಕ ಪ್ರವಾಸಿ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡಬೇಕೆಂದು ಕಾಂಗ್ರೆಸ್ ಯುವ ಮುಖಂಡ ಡಾ.ಮಂಥರ್ ಗೌಡ ಒತ್ತಾಯಿಸಿದ್ದಾರೆ.
ಕಳೆದ ಅನೇಕ ವರ್ಷಗಳಿಂದ ಲಕ್ಷಾಂತರ ಪ್ರವಾಸಿಗರನ್ನು ಕೊಡಗು ಆಕರ್ಷಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಜಿಲ್ಲೆಗೆ ಆಗುಸುತ್ತಿರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಪ್ರವಾಸೋದ್ಯಮದ ಬೆಳವಣಿಗೆ ಮತ್ತು ಪ್ರವಾಸಿತಾಣಗಳ ಅಭಿವೃದ್ಧಿಗೆ ಸರ್ಕಾರ ಹೆಚ್ಚು ಆಸಕ್ತಿ ತೋರುತ್ತಿಲ್ಲವೆಂದು ಹೇಳಿಕೆಯಲ್ಲಿ ಟೀಕಿಸಿದ್ದಾರೆ.
ಕೊಡಗಿನಲ್ಲಿ ಪ್ರವಾಸೋದ್ಯಮದಲ್ಲಿ ತೊಡಗಿರುವವರು ಪ್ರವಾಸಿಗರಿಗೆ ಆತಿಥ್ಯ ನೀಡುವ ಮೂಲಕ ಪ್ರವಾಸಿಕ್ಷೇತ್ರವನ್ನು ಜೀವಂತವಾಗಿರಿಸಿ ದ್ದಾರೆ. ಉದ್ಯೋಗ ಸೃಷ್ಟಿಸಿ ಸ್ಥಳೀಯ ಯುವ ಸಮೂಹಕ್ಕೆ ಉದ್ಯೋಗ ನೀಡುತ್ತಿದ್ದಾರೆ. ಅಧಿಕ ತೆರಿಗೆ ಪಾವತಿಸಿ ಸರ್ಕಾರದ ಬೊಕ್ಕಸ ತುಂಬುತ್ತಿ
ದ್ದಾರೆ. ಆದರೆ, ಸರ್ಕಾರ ಮಾತ್ರ ಕೊಡಗು ಪ್ರವಾಸಿಕ್ಷೇತ್ರವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಹೆಸರಿಗೆ ಮಾತ್ರ ಪ್ರವಾಸೋದ್ಯಮ ಇಲಾಖೆ ಇದೆ. ಈ ಇಲಾಖೆಯಿಂದ ಜಿಲ್ಲೆಯ ಪ್ರವಾಸಿ ಕ್ಷೇತ್ರಕ್ಕೆ ಏನು ಲಾಭವಾಗಿದೆ ಎನ್ನುವ ಬಗ್ಗೆ ಸರ್ಕಾರವೇ ಉತ್ತರಿಸಬೇಕೆಂದರು.
೨೦೧೯ ರಲ್ಲಿ ಅತಿವೃಷ್ಟಿ ಹಾನಿಯ ಕಹಿನೆನಪುಗಳನ್ನು ಮರೆಸಲು ಅಂದು ಮೈತ್ರಿ ಸರ್ಕಾರದಲ್ಲಿ ಉಸ್ತುವಾರಿ ಸಚಿವರಾಗಿದ್ದ ಸಾ.ರಾ.ಮಹೇಶ್ ಕೊಡಗು ಉತ್ಸವ ಆಯೋಜಿಸಿ ಹೊಸ ಮೆರಗು ನೀಡಿದ್ದರು. ಆದರೆ, ನಂತರ ಬಂದ ಸರ್ಕಾರ ಈ ರೀತಿಯ ಉತ್ಸವಗಳನ್ನೇ ಆಯೋಜಿಸಿಲ್ಲ. ಈಗಿನ ಉಸ್ತುವಾರಿ ಸಚಿವರು ಎಲ್ಲಿದ್ದಾರೆ ಎಂದೇ ತಿಳಿದಿಲ್ಲ. ಕನಿಷ್ಠ ಮಡಿಕೇರಿ, ಗೋಣಿಕೊಪ್ಪ ದಸರಾ ಅನುದಾನವನ್ನಾದರೂ ಸರ್ಕಾರ ಬಿಡುಗಡೆ ಮಾಡಬಹುದಿತ್ತು. ಹಣ ಸಿಗದೆ ಇಂದು ದಸರಾ ಸಮಿತಿಗಳು ಸಂಕಷ್ಟಕ್ಕೆ ಸಿಲುಕಿವೆ. ಈ ಬಗ್ಗೆ ಸ್ಥಳೀಯ ಶಾಸಕರಾದರು ಆಸಕ್ತಿ ತೋರಬೇಕಾಗಿದೆ.
ಅಕಾಲಿಕ ಮಳೆ, ವನ್ಯಜೀವಿಗಳ ದಾಳಿ, ಕೃಷಿ ನಿರ್ವಹಣಾ ವೆಚ್ಚ ದುಬಾರಿ, ನಿರುದ್ಯೋಗ ಸಮಸ್ಯೆ ಮತ್ತಿತರ ಕೊರತೆಗಳ ನಡುವೆ ಜಿಲ್ಲೆಯ ಕೃಷಿಕ ವರ್ಗ ಕೃಷಿ ಚಟುವಟಿಕೆ ಕೈಬಿಟ್ಟು ಹೋಂಸ್ಟೇ, ವ್ಯಾಪಾರದಂತಹ ಪ್ರವಾಸೋದ್ಯಮಕ್ಕೆ ಪೂರಕವಾದ ಕ್ಷೇತ್ರಗಳತ್ತ ಮುಖ ಮಾಡುತ್ತಿ
ದ್ದಾರೆ. ಪರಿಸ್ಥಿತಿ ಹೀಗಿರುವಾಗ ಸರ್ಕಾರ ಕೂಡ ಇದಕ್ಕೆ ಉತ್ತೇಜನ ನೀಡುವ ಕಾರ್ಯ ಕೈಗೊಳ್ಳಬೇಕು.
ಪ್ರವಾಸೋದ್ಯಮ ಬೆಳೆಸಲು ಮತ್ತು ಪ್ರೋತ್ಸಾಸಲು ಕೊಡಗು ಉತ್ಸವ ತುರ್ತಾಗಿ ಆಯೋಜಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು. ಕೊಡಗು ಪ್ರವಾಸೋದ್ಯಮದ ಅಭಿವೃದ್ಧಿಗೆ ಅನುದಾನ ಘೋಷಿಸಬೇಕು. ಜಿಲ್ಲೆಯ ಪ್ರತಿ ರಸ್ತೆಗಳ ಅಭಿವೃದ್ಧಿ ಕಾರ್ಯ ತಕ್ಷಣ ಆರಂಭಿಸಬೇಕೆಂದು ಡಾ.ಮಂಥರ್ ಗೌಡ ಒತ್ತಾಯಿಸಿದ್ದಾರೆ.