ಜಿಲ್ಲೆ

ವಿದ್ಯುತ್ ಸ್ಪರ್ಶಕ್ಕೆ ಕೊಡಗಿನಲ್ಲಿ ಎರಡು ಕಾಡಾನೆ ಬಲಿ

reportermys

ಸಿದ್ದಾಪುರ: ವಿದ್ಯುತ್ ಸ್ಪರ್ಶಕ್ಕೆ ಎರಡು ಕಾಡಾನೆಗಳು ಧಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತಿಮಂಗಲ ಗ್ರಾಮದಲ್ಲಿ ಸೋಮವಾರ ನಸುಕಿನ ವೇಳೆ ನಡೆದಿದೆ.ಅತ್ತಿಮಂಗಲ ಗ್ರಾಮದಲ್ಲಿರುವ ಕೋಣೇರಿರ ಪ್ರಕಾಶ್ ಮಂದಣ್ಣ ಹಾಗೂ ಮಂಡೆಪಂಡ ಸುಮಂತ್ ಚಂಗಪ್ಪ ಕಾಫಿ ತೋಟದಲ್ಲಿ ಕಾಡಾನೆ ಗಳು ಸಾವನ್ನಪ್ಪಿವೆ. ಅಂದಾಜು ೧೪ ವರ್ಷ ಪ್ರಾಯದ ಗಂಡಾನೆ ಹಾಗೂ ೧೨ ವರ್ಷ ಪ್ರಾಯದ ಹೆಣ್ಣಾನೆ ಸಾವನ್ನಪ್ಪಿವೆ.

ಪ್ರಕಾಶ್ ಮಂದಣ್ಣ, ಸುಮಂತ್ ಚಂಗಪ್ಪ ಅವರ ಕಾಫಿ ತೋಟದ ಒಳಗೆ ೧೧ ಕೆವಿ ವಿದ್ಯುತ್ ಮಾರ್ಗ ಹಾದು ಹೋಗಿದೆ. ಈ ಮಾರ್ಗದ ಮೇಲೆ ಮರದ ಕೊಂಬೆ ಬಿದ್ದಿದ್ದರಿಂದ ವಿದ್ಯುತ್ ತಂತಿಗಳು ಕೆಳಕ್ಕೆ ಬಾಗಿವೆ. ತೋಟದಲ್ಲಿ ಕಾಡಾನೆಗಳು ಹಾದು ಹೋಗುವ ವೇಳೆ ವಿದ್ಯುತ್ ತಂತಿ ಸ್ಪರ್ಶದಿಂದ ಕಾಡಾನೆಗಳು ಸಾವನ್ನಪ್ಪಿವೆ. ಅರಣ್ಯಾಧಿಕಾರಿಗಳು ಸಿಬ್ಬಂದಿ ಸಹಿತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಅತ್ತಿಮಂಗಲ ಭಾಗದಲ್ಲಿರುವ ಕಾಫಿ ತೋಟದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಡಾನೆಗಳ ಬೀಡುಬಿಟ್ಟಿವೆ. ಬೆಳೆಗಾರರಿಗೆ ತೋಟಕ್ಕೆ ಹೋಗಲು ಕಷ್ಟಕರವಾಗಿದೆ. ಜೀವಭಯದಲ್ಲಿ ಕಾರ್ಮಿಕರು ಕೆಲಸ ಮಾಡುವಂತಾಗಿದೆ. ಕಾಡಾನೆ ಭಯದಿಂದ ರಾತ್ರಿ ಹೊತ್ತಿನಲ್ಲಿ ಅತ್ತಿಮಂಗಲ ಮಾರ್ಗ ದಲ್ಲಿ ತೆರಳುವುದು ಅಪಾಯಕಾರಿ ಎಂಬಂತಾಗಿದೆ.