ಜಿಲ್ಲೆ

ಸದೃಢ ಸಮಾಜ ಸೃಷ್ಠಿಗೆ ಆರೋಗ್ಯವಂತ ಸಮಾಜ ನಿರ್ಮಾಣ ಮುಖ್ಯ; ತೇಜಸ್ವಿನಿ ರಮೇಶ್

reportermys

ಮಡಿಕೇರಿ: ಬಲಿಷ್ಟ, ಸದೃಢ ಸಮಾಜ ಸೃಷ್ಟಿಯಾಗಬೇಕಾದರೆ ಮೊದಲು ಆರೋಗ್ಯವಂತ ಸಮಾಜ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಜನೌಷಧಿ ಯೋಜನೆ ಸಹಕಾರಿಯಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ, ರಾಜ್ಯ ಬಿ.ಜೆ.ಪಿ. ವಕ್ತಾರರಾದ ತೇಜಸ್ವಿನಿ ರಮೇಶ್ ತಿಳಿಸಿದರು.

ನಗರದ ಕಾವೇರಿ ಕಲಾಕ್ಷೇತ್ರ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಜನೌಷಧಿ ಕೇಂದ್ರ ಮಾಲೀಕರ ಒಕ್ಕೂಟದ ವತಿಯಿಂದ ಶನಿವಾರ ಆಯೋಜಿಸಿದ್ದ ಜನೌಷಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ವೈದ್ಯಕೀಯ ಸೇವೆ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವುದು ಸವಾಲಿನ ಕೆಲಸ. ವೈದ್ಯಕೀಯ ಕ್ಷೇತ್ರ ಕೇವಲ ಹಣ ಮಾಡುವುದಲ್ಲ. ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸುವ ಮನಸ್ಸಿರಬೇಕು. ಕರೊನಾ ಪರಿಸ್ಥಿತಿಯಲ್ಲಿ ತನ್ನ ಪ್ರಾಣ ಪಣಕಿಟ್ಟು ವೈದ್ಯರು ಮಾಡಿರುವ ಸೇವೆ ನಿಜಕ್ಕೂ ಶ್ಲಾಘನೀಯ. ಪ್ರಧಾನಿ ನರೇಂದ್ರ ಮೋದಿ ಅವರು ಶ್ರೇಷ್ಠ, ಸಮರ್ಥ, ಬಲಿಷ್ಟ ಹಾಗೂ ಆರೋಗ್ಯವಂತ ಭಾರತ ನಿರ್ಮಿಸುವ ಕನಸನ್ನು ಹೊತ್ತಿದ್ದಾರೆ. ಆದರೆ, ಜನೌಷಧಿ ಕಾರ್ಯಕ್ರಮದ ಬಗ್ಗೆ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಹಿರಿಯ ವೈದ್ಯ ಡಾ.ಮನೋಹರ್ ಜಿ.ಪಾಟ್ಕರ್ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ನಗರದ ಚೌಡೇಶ್ವರಿ ದೇವಾಲಯದಿಂದ ಜನರಲ್ ತಿಮ್ಮಯ್ಯ ವೃತ್ತದ ತನಕ ಮೆರವಣಿಗೆ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ, ಬಿಜೆಪಿ ಕೃಷಿ ಮೋರ್ಚಾದ ರಾಜ್ಯ ಕಾರ್ಯದರ್ಶಿ ಹಾಗೂ ಮಕ್ಕಳ ತಜ್ಞ ಡಾ.ಬಿ.ಸಿ. ನವೀನ್ ಕುಮಾರ್, ಮೆಡಿಕಲ್ ಕಾಲೇಜು ಪ್ರಾಂಶುಪಾಲ ವಿಶಾಲ್ ಕಾರ್ಯಪ್ಪ ಇದ್ದರು.