ಗೋಣಿಕೊಪ್ಪಲು: ಕೊಡಗು ಜಿಲ್ಲೆಯು ರಾಷ್ಟ್ರೀಯತೆಯ ಭದ್ರಕೋಟೆಯಾಗಿದ್ದು, ಸೇನೆಗೆ ಸಹಸ್ರಾರು ಸಂಖ್ಯೆಯಲ್ಲಿ ಸೈನಿಕರನ್ನು ನೀಡಿದ ಹೆಗ್ಗಳಿಕೆ ಜಿಲ್ಲೆಗೆ ಸಲ್ಲಬೇಕು ಎಂದು ಸಂಸದ ಯದವೀರ್ ಕೃಷ್ಣದತ್ತ ಒಡೆಯರ್ ಅಭಿಪ್ರಾಯಪಟ್ಟರು.
ಹುದಿಕೇರಿ ಪಟ್ಟಣದಲ್ಲಿ ಸೋಮವಾರ ಸ್ಥಳೀಯ ಗ್ರಾಮ ಪಂಚಾಯಿತಿ ಒದಗಿಸಿರುವ ನಿವೇಶನದಲ್ಲಿ ಮಾಜಿ ಯೋಧರು, ಸೈನಿಕರು ಒಗ್ಗೂಡಿ 13 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿರುವ ಅಮರ್ ಜವಾನ್ ಸ್ಮಾರಕವನ್ನು ವಿಧ್ಯುಕ್ತವಾಗಿ ಅನಾವರಣಗೊಳಿಸಿ ಮಾತನಾಡಿದರು. ಕೊಡಗು ಹಾಗೂ ಮೈಸೂರು ತನ್ನದೆ ಆದ ಪರಂಪರೆ ಹೊಂದಿದೆ. ಕೊಡಗು ಮೈಸೂರು ಅದ್ಭುತ ಕ್ಷೇತ್ರವಾಗಿದೆ ಎಂದರು.
ಗ್ರಾಮೀಣ ಭಾಗದಲ್ಲಿ ಸ್ಮಾರಕ ನಿರ್ಮಾಣ ಮಾಡಿರುವುದು ಶ್ಲಾಘನೀಯ. ಸ್ಮಾರಕದಿಂದ ಯೋಧರ ಸ್ಮರಿಸುವ ಕಾರ್ಯ ನಿರಂತರವಾಗಲಿದೆ ಎಂದರು.
ಅತ್ಯಂತ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಹೆಮ್ಮೆ ತಂದಿದೆ. ಗಡಿಯಲ್ಲಿ ಯೋಧರು ತಮ್ಮ ಜೀವನವನ್ನು ಪಣಕ್ಕಿಟ್ಟು ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಭಾರತೀಯರು ನೆಮ್ಮದಿಯಾಗಿದ್ದೇವೆ. ವಿಕಸಿತ ಭಾರತದಲ್ಲಿ ಹುದಿಕೇರಿ ಕ್ಷೇತ್ರವು ವಿಕ್ಷಿತ್ ಕ್ಷೇತ್ರವಾಗಲಿ. ಇದಕ್ಕೆ ಬೇಕಾದ ಸಹಕಾರಗಳನ್ನು ನೀಡುತ್ತೇನೆ ಎಂದು ಭರವಸೆ ನೀಡಿದರು.
ಸಂಸದರನ್ನು ನಿವೃತ್ತ ಯೋಧರು ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು. ಶ್ರೀಮಂಗಲ ಪೊಲೀಸ್ ಠಾಣೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಗೌರವ ವಂದನೆ ಸಲ್ಲಿಸಿದರು. ನಂತರ ಸಂಸದ ಯದುವೀರ್ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿದರು. ಪಟ್ಟಣದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ಮಾಜಿ ಸೈನಿಕರು ಸಮವಸ್ತ್ರದೊಂದಿಗೆ ಆಗಮಿಸಿ ಗಮನ ಸೆಳೆದರು. ಪಟ್ಟಣದ ಯುದ್ಧ ಸ್ಮಾರಕ ಸ್ಥಳದಿಂದ ಕೊಡಗಿನ ಸಾಂಪ್ರದಾಯಿಕ ವಾಲಗದೊಂದಿಗೆ ಸಂಸದರನ್ನು ಮೆರವಣಿಗೆಯ ಮೂಲಕ ಕೊಡವ ಸಮಾಜದ ಸಭಾಂಗಣಕ್ಕೆ ಕರೆ ತರಲಾಯಿತು.
ಕಾರ್ಯಕ್ರಮದ ಅಂಗವಾಗಿ ಸೇನೆಯಲ್ಲಿ ಸೇವೆ ಸಲ್ಲಿಸಿ ಹುತಾತ್ಮರಾದ ಯೋಧರ ಕುಟುಂಬಸ್ಥರಾದ ಬಯವಂಡ ಬಿ.ಸುಬ್ಬಯ್ಯ, ಮಂಡೇರ ಪಿ.ಬೋಪಯ್ಯ, ಕೋಳೆರ ಎ.ಸವಿನಾ, ಮಂಡೇಚಂಡ ಕೆ.ಅಯ್ಯಪ್ಪ, ಕೇಚಮಾಡ ಪಿ.ತಿಲಕ್, ಮೇಜರ್ ಪೆಮ್ಮಂಡ ಎಂ.ಮಧು ಅವರನ್ನು ಗೌರವಿಸಲಾಯಿತು.
ಇದೇ ವೇಳೆ ಬೊಜ್ಜಂಗಡ ಅವನಿಜ ಜಗದೀಶ್ ಬರೆದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರ 2ನೇ ಆವೃತ್ತಿಯ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ನಿವೃತ್ತ ಕ್ಯಾಪ್ಟನ್ ಬೊಳ್ಳಿಮಾಡ ಧನು ದೇವಯ್ಯ ವೀರಗೀತೆ ಹಾಡಿದರು. ಯುದ್ಧ ಸ್ಮಾರಕಕ್ಕೆ ಗಣ್ಯರು ಪುಷ್ಪಾರ್ಚನೆ ನೆರವೇರಿಸಿದರು. ಸುತ್ತಮುತ್ತಲಿನ ಗ್ರಾಮಸ್ಥರು, ಹಿರಿಯರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಹುದಿಕೇರಿ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಲ್ಯಮೀದೇರಿರ ಎ.ಪ್ರಕಾಶ್ ಪ್ರಸ್ತಾವಿಕವಾಗಿ ಮಾತನಾಡಿ, ಹುದಿಕೇರಿ ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೈನಿಕರು ದೇಶಕ್ಕೆ ಸೇವೆ ಸಲ್ಲಿಸಿ ಇದೀಗ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ಸೈನಿಕರ ನೆನಪಿಗಾಗಿ ಕಳೆದ 6 ತಿಂಗಳ ಹಿಂದೆ ಸ್ಮಾರಕ ನಿರ್ಮಾಣದ ಯೋಜನೆ ರೂಪಿಸಲಾಯಿತು. ಹುದಿಕೇರಿ ಗ್ರಾಪಂ ಅಧ್ಯಕ್ಷರು ಹಾಗೂ ಆಡಳಿತ ಮಂಡಳಿ ಯುದ್ಧ ಸ್ಮಾರಕಕ್ಕೆ ಬೇಕಾದ ಸ್ಥಳವನ್ನು ನೀಡುವ ಮೂಲಕ ಹುದಿಕೇರಿಯಲ್ಲಿ ಅಮರ್ ಜವಾನ್ ಸ್ಮಾರಕ ನಿರ್ಮಾಣದ ನಿರ್ಧಾರ ಕೈಗೊಳ್ಳಲಾಯಿತು. ಮಾಜಿ ಸೈನಿಕರು ಸಹಕಾರವನ್ನು ನೀಡಿದ ಹಿನ್ನೆಲೆಯಲ್ಲಿ 13 ಲಕ್ಷ ರೂ. ವೆಚ್ಚದ ಯುದ್ಧ ಸ್ಮಾರಕವನ್ನು ಸ್ಥಾಪಿಸಲಾಗಿದೆ. ಇದರಿಂದ ಸೈನಿಕರಿಗೆ ಗೌರವ ನೀಡುವ ಕೆಲಸ ಆರಂಭವಾಗಿದೆ. ಈ ಕಾರ್ಯಕ್ಕೆ ನಾಗರಿಕರು ನೀಡಿದ ಸಹಕಾರ ಸ್ಮರಣೀಯ ಎಂದರು.
ವೇದಿಕೆಯಲ್ಲಿ ಹುದಿಕೇರಿ ಗಾಪಂ ಅಧ್ಯಕ್ಷ ಕುಪ್ಪಣಮಾಡ ನಿವ್ಯ ಕಾವೇರಮ್ಮ, ಸೈನಿಕ ಸಂಘದ ಗೌರವ ಅಧ್ಯಕ್ಷ ಕೊಟ್ಟುಕತ್ತಿರ ಪಿ.ಸೋಮಣ್ಣ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಐನಂಡ ಕೆ.ಮಂದಣ್ಣ, ಹುದಿಕೇರಿ ಮಾಜಿ ಸೈನಿಕ ಸಂಘದ ಗೌರವ ಅಧ್ಯಕ್ಷ ಬಯವಂಡ ಯು.ಕಾಳಪ್ಪ, ಹಿರಿಯ ಸಲಹೆಗಾರ ಮಂಡೆಚಂಡ ದಿನೇಶ್ ಚಿಟ್ಟಿಯಪ್ಪ, ನಿವೃತ್ತ ಕರ್ನಲ್ ಕಾವೇರಪ್ಪ ಮತ್ತಿತರರು ಇದ್ದರು.
ಕಾರ್ಯಕ್ರಮದಲ್ಲಿ ಹುದಿಕೇರಿ ಮಾಜಿ ಸೈನಿಕರ ಸಂಘದ ಉಪಾಧ್ಯಕ್ಷ ಚೆಕ್ಕೆರ ಎಂ.ರಮೇಶ್, ಕಾರ್ಯದರ್ಶಿ ಬೊಜ್ಜಂಗಡ ಎಂ.ತಿಮ್ಮಯ್ಯ, ಕಿರಿಯಮಾಡ ಎ.ಗಣಪತಿ ಮಿಲನ್, ಖಜಾಂಚಿ ಬೊಳ್ಳಜಿರ ಪಿ.ಕಿಶೋರ್, ಜಂಟಿ ಕಾರ್ಯದರ್ಶಿ ಬೊಳ್ಳಿಮಾಡ ಪಿ.ಬಿನುಕುಮಾರ್, ಬೊಜ್ಜಂಗಡ ಸುನೀಲ್ ಕುಮಾರ್, ನಿರ್ದೇಶಕ ಮಲ್ಲೆಂಗಡ ಜಯ ಉತ್ತಯ್ಯ, ಹಿರಿಯ ಸಲಹೆಗಾರರಾದ ಬಯವಂಡ ಯು.ಕಾಳಪ್ಪ, ಮಂಡಚಂಡ ದಿನೇಶ್ ಚಿಟ್ಟಿಯಪ್ಪ ಉಪಸ್ಥಿತರಿದ್ದರು. ಎನ್‌ಸಿಸಿ ವಿದ್ಯಾರ್ಥಿಗಳು, ವಿವಿಧ ಸಂಘ ಸಂಸ್ಥೆ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ಸೈನಿಕರ ಬೀಡೆಂದು ಹೆಸರುವಾಸಿಯಾಗಿರುವ ದ.ಕೊಡಗಿನ ಹುದಿಕೇರಿ ಪಟ್ಟಣದಲ್ಲಿ ವಿಶೇಷ ರೀತಿಯಲ್ಲಿ ಅಮರ್ ಜವಾನ್ ಸ್ಮಾರಕ ನಿರ್ಮಾಣಗೊಂಡಿದೆ. ಮುಖ್ಯ ರಸ್ತೆಯ ಬದಿಯಲ್ಲಿಯೇ ಈ ಸ್ಮಾರಕವು ಸಾರ್ವಜನಿಕರ ಗಮನ ಸೆಳೆಯುತ್ತಿದೆ. ನಿವೃತ್ತ ಸೈನಿಕರು ಒಟ್ಟಾಗಿ ಸೇರಿ ಯುದ್ಧ್ದ ಸ್ಮಾರಕ ನಿರ್ಮಾಣ ಮಾಡಿದ್ದಾರೆ. ಉದ್ಘಾಟನಾ ಕಾರ್ಯಕ್ರಮಕ್ಕೆ ಗ್ರಾಮಸ್ಥರು ಮುಂಜಾಾನೆಯಿಂದಲೇ ಆಗಮಿಸಿ ಗಮನ ಸೆಳೆದರು. ಯುದ್ದ ಸ್ಮಾರಕದ ಸ್ಥಳದ ಸಮೀಪ ಚಿಕ್ಕ ಸಭಾಂಗಣವನ್ನೂ ನಿರ್ಮಿಸಲಾಗಿದೆ.