ಮಡಿಕೇರಿ: ಕೊಡಗಿಗೆ ಬರಬೇಕಾದ ಕ್ರೀಡಾ ವಿಶ್ವ ವಿದ್ಯಾನಿಲಯ ಬೆಂಗಳೂರಿಗೆ ವರ್ಗಾಯಿಸುವ ಪ್ರಯತ್ನ ನಡೆಯುತ್ತಿದೆ. ಕೊಡಗಿನಲ್ಲೇ ಕ್ರೀಡಾ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಲು ಒತ್ತಡ ಹೇರಬೇಕಾದ ಅನಿವಾರ್ಯತೆ ಇದೆ ಎಂದು ಸಮಾಜ ಸೇವಕ ತೇಲಪಂಡ ಶಿವಕುಮಾರ್ ನಾಣಯ್ಯ ಹೇಳಿದರು.
ಕೊಡಗು ಪ್ರೆಸ್ ಕ್ಲಬ್ ವತಿಯಿಂದ ನಗರದ ಜನರಲ್ ಕೆ.ಎಸ್. ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಪತ್ರಕರ್ತರಿಗೆ ಭಾನುವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಕೊಡಗು ಸಣ್ಣ ಜಿಲ್ಲೆಯಾದರೂ ವಿವಿಧ ಕ್ರೀಡೆಗಳಲ್ಲಿ ಜಿಲ್ಲೆಯ ಕ್ರೀಡಾಪಟುಗಳು ಸಾಧನೆ ಮಾಡಿದ್ದಾರೆ. ದೇಶಕ್ಕೆ ಹೆಚ್ಚಿನ ಕ್ರೀಡಾಪಟುಗಳನ್ನು ನೀಡುವುದರೊಂದಿಗೆ ಹೆಚ್ಚಿನ ಸಂಖ್ಯೆಯ ಪ್ರಶಸ್ತಿ ಬರುವಂತಾಗಲು ಕಾರಣಕರ್ತರಾಗಿದ್ದಾರೆ. ಕ್ರೀಡೆ ಕೊಡಗಿನ ಶಕ್ತಿಯಾಗಿದ್ದು, ಜಿಲ್ಲೆಯಲ್ಲಿ ಯೇ ವಿಶ್ವವಿದ್ಯಾನಿಲಯ ಸ್ಥಾಪನೆಯಾಗಬೇಕು. ಆದರೆ, ಕೆಲವರು ಅದನ್ನು ಬೆಂಗಳೂರಿಗೆ ವರ್ಗಾಹಿಸುವ ಹುನ್ನಾರ ಮಾಡಿದ್ದಾರೆ. ಆದ್ದರಿಂದ ಕೊಡಗಿನಲ್ಲೇ ಕ್ರೀಡಾ ವಿವಿ ಆಗಬೇಕೆನ್ನುವ ಒತ್ತಾಯಕ್ಕೆ ಸರ್ಕಾರದ ಮೇಲೆ ಒತ್ತಡ ಹೇರಬೇಕೆಂದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕ್ರೀಡೆಗೆ ಉತ್ತೇಜನ ನೀಡುತ್ತಿದೆ. ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಆಟವಾಡಿದವರಿಗೆ ಶೇ.೨ರ ಮೀಸಲಾತಿ ನೀಡಲಾಗುತ್ತಿದೆ. ಸೋತವನಿಗೆ ಬೆನ್ನುತಟ್ಟುವ ಕೆಲಸ, ಗೆದ್ದವರಿಗೆ ಪ್ರೋತ್ಸಾಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಕ್ರೀಡಾಪಟುಗಳಿಗೆ ಉದ್ಯೋಗ ಕೂಡ ಕಲ್ಪಿಸಲಾಗುತ್ತಿದೆ. ಕೊಡಗು ಜಿಲ್ಲೆಗೂ ಸರ್ಕಾರದಿಂದ ಉತ್ತಮ ಅನುದಾನ ದೊರೆಯುತ್ತಿರುವುದರಿಂದ ಕ್ರೀಡಾ ಚಟುವಟಿಕೆಗೆ ಪೂರಕ ವಾತವರಣ ಸೃಷ್ಟಿಯಾಗುತ್ತಿದೆ ಎಂದರು.
ಅಂತಾರಾಷ್ಟ್ರೀಯ ಹಿರಿಯ ಶಟಲ್ ಬ್ಯಾಡ್ಮಿಂಟನ್ ಆಟಗಾರ್ತಿ ತಾತಪಂಡ ಜ್ಯೋತಿ ಸೋಮಯ್ಯ ಮಾತನಾಡಿ, ಕರೊನಾ ಬಳಿಕ ಕಳೆದೆರಡು ವರ್ಷದಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ಕ್ರೀಡಾಕೂಟ ನಡೆದಿದೆ. ಕ್ರೀಡಾಕೂಟಗಳು ವಿದ್ಯಾರ್ಥಿಗಳಿಗೆ ಪರೀಕ್ಷೆ ಇದ್ದ ರೀತಿಯಾಗಿದ್ದು, ತಮ್ಮ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸತಾ ರೈ ಮಾತನಾಡಿ, ಸದಾ ಸುದ್ದಿಯ ಜಂಜಾಟದಲ್ಲಿರುವ ಪತ್ರಕರ್ತರು ಒತ್ತಡದಿಂದ ಹೊರಬರಲು ಕ್ರೀಡಾಕೂಟಗಳು ಸಹಕಾರಿಯಾಗಿದೆ. ಜಿಲ್ಲೆಯ ಪತ್ರಕರ್ತರು ಕ್ರಿಕೆಟ್ ಜೊತೆಗೆ ಬ್ಯಾಡ್ಮಿಂಟನ್‌ನಲ್ಲೂ ಉತ್ತಮ ಪ್ರದರ್ಶನ ನೀಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪತ್ರಕರ್ತರು ವೃತ್ತಿಯ ಜೊತೆಗೆ ಕ್ರೀಡೆಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು. ಸಿಕ್ಕ ಅವಕಾಶ ಬಳಸಿಕೊಳ್ಳುವಂತಾಗಬೇಕೆಂದರು.
ಸಮಾಜ ಸೇವಕ ತೇಲಪಂಡ ಶಿವಕುಮಾರ್ ನಾಣಯ್ಯ ಅವರನ್ನು ಸನ್ಮಾನಿಸಿ, ಒಡಿಕತ್ತಿ ನೀಡಿ ಗೌರಸಲಾಯಿತು. ವೇದಿಕೆಯಲ್ಲಿ ಕೊಡಗು
ಪ್ರೆಸ್ ಕ್ಲಬ್ ಹಿರಿಯ ಉಪಾಧ್ಯಕ್ಷ ಆರ್. ಸುಬ್ರಮಣಿ, ಕ್ರೀಡಾ ಸಂಚಾಲಕ ನವೀನ್ ಡಿಸೋಜ ಇದ್ದರು. ಬೊಳ್ಳಜೀರ ಬಿ. ಅಯ್ಯಪ್ಪ ನಿರೂಪಿಸಿದರು. ಪ್ರಜ್ಞಾ ರಾಜೇಂದ್ರ ಪ್ರಾರ್ಥಿಸಿದರು. ಪ್ರಸಿನ್ ಗೌಡ ಸ್ವಾಗತಿಸಿದರು.