ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಕೊಡಗಿಗೆ ಭೇಟಿ ನೀಡಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೆರಳುತ್ತಿದ್ದ ಕಾರಿಗೆ ಮೊಟ್ಟೆ ಎಸೆದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಮಲ್ಚೀರ ಎ. ಅಯ್ಯಪ್ಪ ಎತ್ತಂಗಡಿ ಆಗಲಿದ್ದಾರೆಂಬ ವಿಚಾರದ ಚರ್ಚೆಗೆ ಸಾಮಾಜಿಕ ಜಾಲತಾಣ ದೊಡ್ಡ ವೇದಿಕೆಯಾಗಿದೆ.
ಕಪ್ಪುಬಾವುಟ ಪ್ರದರ್ಶನ, ಮೊಟ್ಟೆ ಎಸೆತ, ಕಾರಿಗೆ ಒದ್ದಿರುವುದು ಸೇರಿದ್ದಂತೆ ಸಿದ್ದರಾಮಯ್ಯ ತೆರಳುತ್ತಿದ್ದ ವಿವಿಧೆಡೆಯಲ್ಲಿ ಸಂಘ ಪರಿವಾರದ ಸಂಘಟನೆ ಮುಖಂಡರು- ಕಾರ್ಯಕರ್ತರು ಅಡ್ಡಿ ಪಡಿಸಿದರು. ಸರ್ಕಾರದ ಭಾಗವಾಗಿರುವ ಪ್ರತಿಪಕ್ಷ ನಾಯಕನಿಗೆ ಕೊಡಗು ಪೊಲೀಸರು ಸೂಕ್ತ ರಕ್ಷಣೆ ನೀಡಲಿಲ್ಲ ಎಂಬ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.
ಏತನ್ಮಧ್ಯೆ, ಮೊಟ್ಟೆ ಎಸೆತ ಪ್ರಕರಣದಲ್ಲಿ ಎಸ್ಪಿ ಅಯ್ಯಪ್ಪ ಅವರನ್ನು ಬಲಿಪಶು ಮಾಡುವ ಹುನ್ನಾರ ನಡೆದಿದೆ ಎಂಬ ಅನುಮಾನ ಕಾಡಲಾ ರಂಭಿಸಿದೆ. ಪ್ರತಿಪಕ್ಷ ನಾಯಕ ರಕ್ಷಣಾ ವೈಫಲ್ಯ ಬಳಸಿಕೊಂಡು ಆಡಳಿತಾರೂಢ ಬಿಜೆಪಿ ಜನಪ್ರತಿನಿಧಿಗಳು ಎಸ್ಪಿ ಎತ್ತಂಗಡಿಗೆ ಹುನ್ನಾರ ನಡೆಸಿ ದ್ದಾರೆಂಬ ಸಂಶಯ ಎಲ್ಲೆಡೆ ಕಾಡಲಾರಂಭಿಸಿದೆ.
ಎಸ್ಪಿ ಅಯ್ಯಪ್ಪಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ತಮ್ಮ ಡಿಪಿ, ಫೇಸ್ ಬುಕ್ ಅಕೌಂಟ್‌ಗಳಲ್ಲಿ ಅಯ್ಯಪ್ಪ ಭಾವಚಿತ್ರ ಹಾಕಿಕೊಳ್ಳುವುದರ ಮೂಲಕ ಬೆಂಬಲ ವ್ಯಕ್ತ ಪಡಿಸಲಾಗುತ್ತಿದೆ. ಐ ಸಪೋರ್ಟ್ ಕೊಡಗು ಎಸ್ಪಿ (ನಾನು ಕೊಡಗು ಎಸ್ಪಿಗೆ ಬೆಂಬಲಿವಾಗಿದ್ದೇನೆ) ಎಂಬ ಟ್ಯಾಗ್‌ಲೈನ್ ವೈರಲ್ ಆಗಿದೆ.
ವಾಟ್ಸಾಪ್ ಗ್ರೂಪ್‌ಗಳಲ್ಲಿ ಶುಕ್ರವಾರ, ಶನಿವಾರ ಎಸ್ಪಿ ಬೆಂಬಲಿವಾಗಿ ಚರ್ಚೆ ನಡೆದಿದೆ. ಬಹುತೇಕರು ಅಯ್ಯಪ್ಪ ಕೊಡಗಿನಲ್ಲಿಯೇ ಮುಂದುವರಿಯಬೇಕೆಂದು ಬೆಂಬಲ ವ್ಯಕ್ತ ಪಡಿಸುತ್ತಿದ್ದಾರೆ. ಆಡಳಿತಾರೂಢ ಬಿಜೆಪಿ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಬೆಂಬಲ ನೀಡುತ್ತಿ
ರುವುದು ವಿಶೇಷ.
ಎಸ್ಪಿ ವರ್ಗಾವಣೆಗೆ ಕಾಂಗ್ರೆಸ್ ಪ್ರಯತ್ನಿಸುತ್ತಿಲ್ಲ. ಪ್ರತಿಪಕ್ಷವಾಗಿರುವ ನಮಗೆ ವರ್ಗಾವಣೆ ಮಾಡಿಸುವ ಶಕ್ತಿಯೂ ಇಲ್ಲ. ನಾವು ವರ್ಗಾವಣೆ ಮಾಡಲು ಕೇಳದಿ ದ್ದರೂ ನಮ್ಮ ಮೇಲೆ ಗೂಬೆ ಕೂರಿಸಲಾಗುತ್ತದೆ. ಕಾಂಗ್ರೆಸ್ ಹೆಸರಿನಲ್ಲಿ ಬಿಜೆಪಿ ಜನಪ್ರತಿನಿಧಿಗಳು ಎಸ್ಪಿ ಎತ್ತಂಗಡಿ ಮಾಡ ಲು ಷಡ್ಯಂತ್ರ ರೂಪಿಸಿದ್ದಾರೆಂಬ ಟೀಕೆ ವ್ಯಕ್ತವಾಗಿದೆ.
ಜಾತಿ ಬಣ್ಣ
ಕೊಡಗು ಪೊಲೀಸರ ವೈಫಲ್ಯದ ಚರ್ಚೆ ನಡೆಯುವೆ ಕೊಡವ ಜಾತಿ ಬಣ್ಣ ಪಡೆದುಕೊಂಡಿದೆ. ಕೊಡವ ಜನಾಂಗಕ್ಕೆ ಸೇರಿದ ಎಂ.ಎ. ಅಯ್ಯಪ್ಪ ಎತ್ತಂಗಡಿ ಮಾಡಲು ಕೊಡವ ವಿರೋಧಿ ಬಿಜೆಪಿ ಜನಪ್ರತಿನಿಧಿಗಳು ಪ್ರಯತ್ನಿಸುತ್ತಿದ್ದಾರೆಂಬ ಟೀಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾಗುತ್ತಿದೆ.
ಪ್ರತಿಭಟನೆ ಎಚ್ಚರಿಕೆ
ಸೇನೆಯಲ್ಲಿ ಸೇವೆ ಸಲ್ಲಿಸಿ, ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯನಿರ್ವಹಿಸುತ್ತಿರುವ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ ಅವರನ್ನು ವರ್ಗಾವಣೆ ಮಾಡಲು ಹುನ್ನಾರ ನಡೆಯುತ್ತಿದೆ. ನಿಷ್ಠಾವಂತ ಅಧಿಕಾರಿಯನ್ನು ವರ್ಗಾವಣೆ ಮಾಡಿದರೆ ಕುಟ್ಟದಿಂದ ಮಡಿಕೇರಿವರೆಗೆ ಪ್ರತಿಭಟನಾ ಜಾಥಾ ಮಾಡಲಾಗುವುದು ಕೊಡಗು ಸಂರಕ್ಷಣಾ ವೇದಿಕೆ ಸಂಚಾಲಕ ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ ಎಚ್ಚರಿಕೆ ನೀಡಿದ್ದಾರೆ.
ಅಯ್ಯಪ್ಪ ಜಿಲ್ಲೆಗೆ ಬಂದ ಮೇಲೆ ತಮ್ಮ ಗಾಂಜಾ, ಅಕ್ರಮ ಮರಳು-ಮರ ದಂಧೆ ನಿಯಂತ್ರಿಸಿದ್ದಾರೆ. ಕಾವೇರಿ ಮತ್ತು ಕೊಡವ ಸಮುದಾಯವನ್ನು ನಿಂದಿಸಿದ ನೈಜ ಆರೋಪಿ ಬಂಧಿಸಿ ರಾಜ್ಯ-ರಾಷ್ಟ್ರ ಮಟ್ಟದಲ್ಲಿ ಪ್ರಸಂಶೆಗೆ ಪಾತ್ರರಾಗಿದ್ದಾರೆ. ಕೊಡವ ಜನಾಂಗ ಯುವಕ ನನ್ನೇ ಬಂಧಿಸಿ ತಮ್ಮ ಕರ್ತವ್ಯ ನಿಷ್ಠೆ ತೋರಿದ್ದಾರೆ.
ಈ ಪ್ರಕರಣದಲ್ಲಿ ರಾಜಕಾರಣಿಗಳ ನಿರ್ದೇಶನದಂತೆ, ಕೈಗೊಂಬೆಯಾಗಿ ನಡೆಯಲಿಲ್ಲ ಎಂಬ ಕಾರಣಕ್ಕೆ ೨ ತಿಂಗಳ ಹಿಂದೆಯೇ ಕೆಲವು ಜನಪ್ರತಿನಿಧಿಗಳು ವರ್ಗಾವಣೆಗೆ ಹವಣಿಸುತ್ತಿದ್ದು, ಇದೀಗ ಮೊಟ್ಟೆ ಎಸೆದಿರುವ ಪ್ರಕರಣ ಮುಂದಿಟ್ಟುಕೊಂಡು ವರ್ಗಾವಣೆ ಮಾಡಿಸಲು ಪ್ರಯತ್ನಿಸುತ್ತಿರುವುದು ಖಂಡನೀಯ ಎಂದಿದ್ದಾರೆ.
**
ಕೊಡಗು ಎಸ್ಪಿ ಗಟ್ಟಿಯಾಗಿ ಕೆಲಸ ಮಾಉತ್ತಿದ್ದಾರೆ. ನಾವು ವರ್ಗಾವಣೆ ದಂಧೆಯಲ್ಲಿ ಇಲ್ಲ. ಅವರ ವರ್ಗಾವಣೆಗೂ ಪ್ರಯತ್ನಿಸುತ್ತಿಲ್ಲ. ನನ್ನ ಮೇಲೆ ಸುಮ್ಮನೆ ಏನೇನೊ ಹೇಳುವುದು ಬೇಡ. ಎಸ್ಪಿ ವರ್ಗಾವಣೆ ಮಾಡಲಾಗುತ್ತದೆ ಎಂದು ಆಧಾರ ರಹಿತ ಆರೋಪ ಮಾಡುವುದರಲ್ಲಿ ಟಿಪ್ಪು ಸಂತತಿ ಸಿದ್ಧ ಹಸ್ತರಾಗಿದ್ದಾರೆ. ಕೆ.ಜಿ. ಬೋಪಯ್ಯ, ವಿರಾಜಪೇಟೆ ಶಾಸಕರು.