ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕೊಡಗು ಭೇಟಿ ರದ್ದುಗೊಂಡಿರುವುದರಿಂದ ಹೆಲಿಪ್ಯಾಡ್‌ನಲ್ಲಿ ಸ್ವಾಗತಕ್ಕೆ ತೆರಳಿದ ಕಾಂಗ್ರೆಸ್ ನಾಯಕರು ನಿರಾಸೆಯಲ್ಲಿ ತೆರಳುವಂತಾಯಿತು.
ಮೂರು ದಿನದ ವಿಶ್ರಾಂತಿಗಾಗಿ ಸೋನಿಯಾ ಗಾಂಧಿ ತಮ್ಮ ಪುತ್ರ ರಾಹುಲ್ ಗಾಂಧಿ ಜತೆ ಕೊಡಗಿಗೆ ಆಗಮಿಸುವ ಕಾರ್ಯಕ್ರಮ ನಿಗದಿ ಯಾಗಿತ್ತು. ನಿಗದಿತ ಕಾರ್ಯಕ್ರಮದಂತೆ ಮಧ್ಯಾಹ್ನ ೧.೧೫ ಕ್ಕೆ ಮಡಿಕೇರಿ ಹೊರ ವಲಯದಲ್ಲಿರುವ ಗಾಲ್ಫ್ ಮೈದಾನದ ಹೆಲಿಪ್ಯಾಡ್‌ಗೆ ಆಗಮಿಸಬೇಕಾಗಿತ್ತು.
ಮೈಸೂರಿಗೆ ಆಗಮಿಸಿದ ಸೋನಿಯಾಗಾಂಧಿ ಕೊಡಗು ಭೇಟಿ ರದ್ದುಗೊಳಿಸಿ, ಕಬಿನಿಯತ್ತ ತೆರಳಿದರು. ಹೆಲಿಪ್ಯಾಡ್‌ಗೆ ವರಿಷ್ಠ ನಾಯಕಿ ಯನ್ನು ಸ್ವಾಗತಿಸಲು ಉತ್ಸಾಹದಿಂದ ತೆರಳಿದ್ದ ಕಾಂಗ್ರೆಸ್ ನಾಯಕರು ಬೇಸರದಲ್ಲಿ ಹಿಂದಕ್ಕೆ ಬರುವಂತಾಯಿತು.
ಮಾಜಿ ಸಚಿವರಾದ ಬಿ.ಎ. ಜೀವಿಜಯ, ಸುಮಾ ವಸಂತ್, ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಎಸ್. ಚಂದ್ರಮೌಳಿ, ಕೆ.ಪಿ. ಚಂದ್ರಕಲಾ, ಕೆಪಿಸಿಸಿ ವಕ್ತಾರ ಟಿ.ಪಿ. ರಮೇಶ್, ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಪಿ. ಶಶಿಧರ್ (ಕುಶಾಲನಗರ), ರಂಜಿ ಪೂಣಚ್ಚ (ವಿರಾಜಪೇಟೆ), ಎಂಎಲ್ಸಿ ಚುನಾವಣೆ ಪರಾಜಿತ ಅಭ್ಯರ್ಥಿ ಡಾ.ಮಂಥರ್‌ಗೌಡ, ಮಡಿಕೇರಿ ನಗರ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಮತ್ತಿತರರು ಇದ್ದರು.
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೇಕೇರಿ ಗ್ರಾಮದಲ್ಲಿರುವ ಮಾಜಿ ಸಚಿವ ಟಿ. ಜಾನ್ ಒಡೆತನದ ಕೂರ್ಗ್ ವೈಲ್ಡರ್ನೆಸ್ ರೆಸಾರ್ಟ್ ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಪೊಲೀಸ್ ವರಿಷ್ಠಾಧಿಕಾರಿ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ ಸೋಮವಾರ ರೆಸಾರ್ಟ್‌ಗೆ ತೆರಳಿ ಬಂದೋ ಬಸ್ತ್ ಬಗ್ಗೆ ಪರಿಶೀಲಿಸಿದ್ದರು.