ಮಡಿಕೇರಿ: ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದ ಪರ್ಯಾಯ ರಸ್ತೆ ಮೇಕೇರಿಯಲ್ಲಿ ಬಿರುಕು ಮೂಡಿರುವುದರಿಂದ ಬೃಹತ್ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಮಧ್ಯೆ ಸೋಮವಾರ ರಾತ್ರಿ ಸಂಪಾಜೆ ಗೇಟ್ ಬಳಿ ತಡೆಯಲಾಗಿದ್ದ ವಾಹನಗಳನ್ನು ಮಂಗಳವಾರ ಮುಂಜಾನೆ ಕಳುಹಿಸಲಾಗಿದೆ.
ಈ ವಾಹನಗಳು ಪರ್ಯಾಯ ರಸ್ತೆ ವಿರಾಜಪೇಟೆ- ಹುಣಸೂರು ಮೂಲಕ ಸಂಚರಿಸಲು ಅವಕಾಶ ನೀಡಲಾಗಿದೆ. ರಾತ್ರಿಯಿಂದ ಬೆಳಗ್ಗಿನವರಗೆ ಸಂಪಾಜೆ ಗೇಟ್ ಬಳಿ ಸಾಲುಗಟ್ಟಿ ಬೃಹತ್ ಲಾರಿಗಳು ಸೇರಿದ್ದಂತೆ ಇತರೆ ವಾಹನಗಳು ನಿಂತಿದ್ದವು. ಎರಡು ದಿನ ಹಿಂದೆ ಜಿಲ್ಲಾಡಳಿತ ಭವನ ಎದುರಿನ ತಡೆಗೋಡೆಯ ಸ್ಲ್ಯಾಬ್‌ಗಳು ಹೊರ ಚಾಚಿದ್ದರಿಂದ ಇಲ್ಲಿ ಸಂಚಾರ ನಿಷೇಧಿಸಿ ಮಡಿಕೇರಿ - ಮೇಕೇರಿ- ಅಪ್ಪಂಗಲ- ತಾಳತ್ತಮನೆ ಮಾರ್ಗದಲ್ಲಿ ಅವಕಾಶ ಮಾಡಿಕೊಡಲಾಗಿತ್ತು. ಸೋಮವಾರ ರಾತ್ರಿ ಮೇಕೇರಿ ಸಮೀಪ ಭಾರಿ ಗಾತ್ರದ ಬಿರುಕು ಮೂಡಿದ್ದು, ರಸ್ತೆ ಕುಸಿಯುವ ಆತಂಕ ಮೂಡಿದೆ.