ಮಡಿಕೇರಿ:
ಜಿಲ್ಲೆಯಲ್ಲಿ ಸುರಿದ ಮುಂಗಾರು ಪೂರ್ವ ಮಳೆ ಮತ್ತು ಈ ತಿಂಗಳ ಮೊದಲ ವಾರದಲ್ಲಿನ ವರುಣನ ಅಬ್ಬರಕ್ಕೆ ಕೊಡಗಿನಾದ್ಯಂತರ ರಸ್ತೆಗಳು ದುಸ್ಥಿತಿಗೆ ತಲುಪಿದೆ. ಗ್ರಾಮೀಣ ರಸ್ತೆಗಳು ಮಾತ್ರವಲ್ಲದೆ ಪ್ರಮುಖ ರಸ್ತೆಗಳೂ ಬಹುತೇಕ ಕಡೆಗಳಲ್ಲಿ ಹಾನಿಗೆ ಒಳಗಾಗಿವೆ. ಕೆಲವು ಭಾಗಗಳಲ್ಲಿ ವಾಹನ ಸಂಚಾರ ಇರಲಿ ನಡೆದಾಡಲು ಕೂಡ ಸಾಧ್ಯವಾಗದ ಸ್ಥಿತಿ ಇದೆ.
ಸಾಮಾನ್ಯವಾಗಿ ಮಳೆಗಾಲ ಆರಂಭಕ್ಕೂ ಮೊದಲು ವಿವಿಧ ಇಲಾಖೆಗಳಂತೆ ಲೋಕೋಪಯೋಗಿ ಇಲಾಖೆಯಿಂದಲೂ ಮುಂಗಾರು ಪೂರ್ವ ಸಿದ್ಧತೆಗಳನ್ನು ನಡೆಸಲಾಗುತ್ತದೆ. ಆದರೆ ಕಳೆದ ಮೂರು ವರ್ಷಗಳಿಂದ ಪಿಡಬ್ಯುಡಿ ಈ ಸಂಪ್ರದಾಯಕ್ಕೆ ವಿದಾಯ ಹೇಳಿದೆ ಎನ್ನಲಾಗುತ್ತಿದೆ. ರಸ್ತೆ ಬದಿಯ ಕುರುಚಲು ಕಾಡು ಸವರುವುದು, ಬೀಳುವ ಹಂತದಲ್ಲಿ ಇರುವ ಮರಗಳನ್ನು ತೆರವು ಮಾಡುವುದು, ರಸ್ತೆ ಕಡೆಗೆ ಅಪಾಯಕಾರಿಯಾಗಿ ಬಾಗಿರುವ ರೆಂಬೆ, ಕೊಂಬೆಗಳನ್ನು ಕತ್ತರಿಸುವುದು, ಮಳೆ ನೀರು ಸರಾಗವಾಗಿ ಹರಿದು ಹೋಗಲು ಚರಂಡಿಗಳನ್ನು ಮಾಡುವುದು ಹೀಗೆ ಹಲವು ರೀತಿಯ ಕೆಲಸಗಳನ್ನು ಮಾಡಲಾಗುತ್ತಿತ್ತು. ಇಂಥ ಕೆಲಸಗಳನ್ನು ಮಾಡುವುದರಿಂದ ಮಳೆಗಾಲದಲ್ಲಿ ರಸ್ತೆಗಳಿಗೆ ಸಂಭಾವ್ಯ ಹಾನಿ ತಪ್ಪಿಸಬಹುದಾಗಿದೆ.
ಆದರೆ ಇಂಥ ಯಾವುದೇ ಸಿದ್ಧತಾ ಕಾರ್ಯ ನಡೆಸದಿರುವುದೇ ಈಗಿನ ಈ ದುಸ್ಥಿತಿಗೆ ಕಾರಣ ಎನ್ನಲಾಗುತ್ತಿದೆ. ಕೆಲವು ಕಡೆಗಳಲ್ಲಿ ಕಳೆದ ವರ್ಷದ ಮಳೆಗಾಲದಲ್ಲಿ ಹಾಳಾದ ರಸ್ತೆಗಳ ದುರಸ್ತಿಯನ್ನೇ ಮಾಡಿರಲಿಲ್ಲ. ಈಗ ಈ ವರ್ಷದ ಮಳೆಗೆ ಈ ರಸ್ತೆಗಳಿಗೆ ಮತ್ತಷ್ಟು ಹಾನಿ ಆಗಿದೆ. ಮಡಿಕೇರಿ-ಭಾಗಮಂಡಲ ಸಂಪರ್ಕ ರಸ್ತೆ ದುರವಸ್ಥೆ ಬಗ್ಗೆ ಈ ಮಾರ್ಗದಲ್ಲಿ ಸಂಚರಿಸುವವರಿAದ ದೊಡ್ಡ ಮಟ್ಟದ ಆಕ್ರೋಶ ವ್ಯಕ್ತವಾಗುತ್ತಿದೆ. ಜಿಲ್ಲೆಯ ಪವಿತ್ರ ಕ್ಷೇತ್ರಕ್ಕೆ ತೆರಳುವ ರಸ್ತೆಯ ಕತೆಯೇ ಹೀಗಿರಬೇಕಾದರೆ ಉಳಿದೆಡೆ ಹೇಗಿರಬಹುದು ಎನ್ನುವ ಪ್ರಶ್ನೆ ಅವರದ್ದು. ಈ ಎಲ್ಲಾ ವಿಷಯಗಳ ಬಗ್ಗೆ ವಿಜಯವಾಣಿ ಓದುಗರು ಲೌಡ್ ಸ್ಪೀಕರ್‌ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊAಡಿದ್ದಾರೆ.
ಗ್ರಾಮೀಣ ರಸ್ತೆಗಳು ಅಭಿವೃದ್ಧಿಯಾಗಬೇಕಿದೆ. ಕೆಲವು ಗ್ರಾಮಗಳ ರಸ್ತೆ ಡಾಮರೀಕರಣಗೊಂಡಿಲ್ಲ. ಸರ್ಕಾರ ಗ್ರಾಮೀಣ ರಸ್ತೆಗಳಿಗೆ ವಿಶೇಷ ಪ್ಯಾಕೇಜ್ ನೀಡಬೇಕು. ಗ್ರಾಮಗಳಿಗೆ ಉತ್ತಮ ರಸ್ತೆಯಾದರೆ ರೈತರಿಗೂ ಉಪಯೋಗವಾಗಲಿದೆ. ಸಿಂಗನಳ್ಳಿ ಗ್ರಾಮಕ್ಕೆ ಒಳ್ಳೆಯ ರಸ್ತೆಯಾದರೆ ಪ್ರವಾಸಿ ತಾಣ ಅಭಿವೃದ್ಧಿಯಾಗಲಿದೆ.
ಅಶ್ವಿನಿ ಕೃಷ್ಣಕಾಂತ್, ಕಾಫಿ ಬೆಳೆಗಾರರು, ಸಿಂಗನಳ್ಳಿ ಗ್ರಾಮ
ಅತೀಯಾದ ಮಳೆಯಿಂದ ಗ್ರಾಮೀಣ ರಸ್ತೆಗಳು ಹಾಳಾಗಿವೆ. ಗ್ರಾಮೀಣ ರಸ್ತೆಗಳು ಕಾಂಕ್ರೀಟಿಕರಣಗೊAಡರೆ ಸಮಸ್ಯೆ ಬಗೆಹರಿಯುತ್ತದೆ. ಡಾಂಬರೀಕರಣಗೊAಡ ರಸ್ತೆಗಳು ಒಂದೆರಡು ವರ್ಷಕ್ಕೆ ಗುಂಡಿ ಬೀಳುತ್ತಿವೆ. ಮಳೆಗಾಲಕ್ಕೆ ಮೊದಲು ಗುಂಡಿಗಳಿಗೆ ವೆಟ್‌ಮಿಕ್ಸ್ ಹಾಕಿ ಮುಚ್ಚಬೇಕು. ಹೈವೆಗಳಲ್ಲಿ ಗುಂಡಿ ಮುಚ್ಚುತ್ತಾರೆ. ಆದರೆ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಗುಂಡಿ ಮುಚ್ಚುವುದಿಲ್ಲ. ಗುಂಡಿಯಲ್ಲಿ ನೀರು ಸಂಗ್ರಹವಾದರೆ ವಾಹನಗಳನ್ನು ಚಾಲಿಸಲು ಕಷ್ಟವಾಗುತ್ತದೆ.
ಪ್ರಕಾಶ್, ಕಾಫಿ ಬೆಳೆಗಾರ, ತಾಕೇರಿ ಗ್ರಾಮ.
ಜಿಲ್ಲೆಯಲ್ಲಿ ಮಳೆಗಾಲ ಈ ಬಾರಿ ಅವಧಿಗೂ ಮುಂಚಿತವಾಗಿ ಆರಂಭವಾಗಿದ್ದು ಕೊಡಗಿನ ಬಹುತೇಕ ರಸ್ತೆಗಳು, ಮುಖ್ಯ ರಸ್ತೆಗಳು ಕೂಡ ಹದಗೆಟ್ಟಿರುವುದಕ್ಕೆ ಕಾರಣವಾಗಿರುವುದು ನಿಜ. ಇದರೊಂದಿಗೆ ರಸ್ತೆ ಬದಿ ಚರಂಡಿಗಳ ನಿರ್ಮಾಣ ಕಾರ್ಯ ಕೂಡ ಮಳೆ ಬರುವ ಮುಂಚಿತವಾಗಿ ನಡೆಸಬೇಕಾಗುತ್ತದೆ. ಜನಪ್ರತಿನಿಧಿಗಳು ಸಾರ್ವಜನಿಕರ ಹಿತಾಸಕ್ತಿಯನ್ನು ಪರಿಗಣಿಸಿ ಸಂಬAಧಪಟ್ಟ ಇಲಾಖೆಗೆ ಜವಾಬ್ದಾರಿ ನೀಡಬೇಕು. ಹವಾಮಾನದ ಮುನ್ಸೂಚನೆಯನ್ನರಿತು ಕಾರ್ಯೋನ್ಮುಖರಾದಲ್ಲಿ ಇಂತಹ ಅವ್ಯವಸ್ಥೆಯನ್ನು ತಡೆಗಟ್ಟಬಹುದು.
ಕೂಡಕಂಡಿ ಸಬಿತಾ ಬಾಪೂಜಿ, ಬೇಂಗೂರು ಗ್ರಾಮ
ರಸ್ತೆಗಳ ಸಮಸ್ಯೆ ಇವತ್ತು ನಿನ್ನೆಯದಲ್ಲ. ಗ್ರಾಮೀಣ ಮಾತ್ರವಲ್ಲದೆ ನಗರ ಪ್ರದೇಶದಲ್ಲಿಯೂ ಅಲ್ಲಲ್ಲಿ ರಸ್ತೆಗಳು ಹಾಳಾಗಿ ಹೋಗಿದ್ದು ಸಂಚಾರಕ್ಕೆ ತೊಡಕು ಉಂಟಾಗಿದೆ. ಚುನಾವಣಾ ಪೂರ್ವದಲ್ಲಿ ಆಡಳಿತ ವರ್ಗದವರು ನೀಡುವ ಭರವಸೆ ಈಡೇರಿಲ್ಲ. ಚರಂಡಿ ನೀರು ಮಳೆಗಾಲದಲ್ಲಿ ರಸ್ತೆಯ ಮೇಲೆ ಹರಿಯುವುದು ರಸ್ತೆಯ ಅವ್ಯವಸ್ಥೆಗೆ ಪ್ರಮುಖ ಕಾರಣ. ಜತೆಗೆ ಕಳಪೆ ಗುಣಮಟ್ಟದ ಕಾಮಗಾರಿಯಿಂದ ರಸ್ತೆಗಳು ಅಧೋಗತಿಗೆ ತಲುಪಿವೆ.
ಎ.ಎನ್. ವಿನಯ್, ಕೆ. ಬೋಯಿಕೇರಿ, ವಿರಾಜಪೇಟೆ
ಜಿಲ್ಲೆಯಲ್ಲಿ ರಸ್ತೆಯ ಸ್ಥಿತಿ ಹೇಳತೀರದಂತಾಗಿದೆ. ನಗರ ಮಾತ್ರವಲ್ಲ ಗ್ರಾಮೀಣ ಭಾಗದ ರಸ್ತೆಗಳು ಸಂಪೂರ್ಣವಾಗಿ ನಿರ್ಲಕ್ಷö್ಯಕ್ಕ್ಕೆ ಒಳಗಾಗಿ ಹಾಳಾಗಿ ಹೋಗಿದೆ. ಸಂಚಾರವೇ ಬಲು ಕಷ್ಟವೆಂಬAತೆ ರಸ್ತೆಯ ಸ್ಥಿತಿ ಪರಿಣಮಿಸಿದೆ. ಸರ್ಕಾರ ಇತ್ತ ಗಮನಹರಿಸಿ ರಸ್ತೆಗಳನ್ನು ಉತ್ತಮ ಸ್ಥಿತಿಯಲ್ಲಿ ಸರಿಪಡಿಸಬೇಕು ಹಾಗೂ ಕಳಪೆ ಕಾಮಗಾರಿ ನಡೆಯದಂತೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು.
ಎನ್. ರಶೀದ, ವಿರಾಜಪೇಟೆ
ಮಳೆಗಾಲ ಪ್ರಾರಂಭದಲ್ಲೇ ಅನೇಕ ಗ್ರಾಮೀಣ ರಸ್ತೆ ಸೇರಿದಂತೆ ಮುಖ್ಯ ರಸ್ತೆಗಳು ಗುಂಡಿಮಯವಾಗಿದ್ದು, ಮಳೆ ನೀರೆಲ್ಲಾ ರಸ್ತೆ ಮೇಲೆ ಹರಿಯುತ್ತಿದೆ. ಇದರಿಂದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆ ಆಗುತ್ತಿದೆ. ಗುಂಡಿ ಬಿದ್ದ ರಸ್ತೆಯಿಂದಾಗಿ ಕೆಲ ವಾಹನಗಳು ರಸ್ತೆಯಲ್ಲೇ ಮಗುಚಿ ಬಿಳುತ್ತಿದೆ. ಸಂಬAಧ ಪಟ್ಟವರು ರಸ್ತೆ ಸರಿಪಡಿಸಲಿ. ಮುಂದಾಗುವ ಅನಾಹುತವನ್ನು ತಪ್ಪಿಸಲಿ.
ಧರ್ಮಯ್ಯ, ಕೃಷಿಕ ಹೊಣೆಕೊಪ್ಪಲು, ಮುಳ್ಳೂರು
ಕೊಡಗು ಜಿಲ್ಲೆಯಲ್ಲಿ ಎಲ್ಲಾ ರಸ್ತೆಗಳು ಹದಗೆಟ್ಟಿವೆ. ಮಳೆಗಾಲ ಆರಂಭಕ್ಕೂ ಮುನ್ನ ಗುಂಡಿಗಳನ್ನಾದರೂ ಮುಚ್ಚಿದ್ದರೆ ಒಳ್ಳೆಯದಿತ್ತು. ಆದರೆ ಅದೂ ಕೂಡ ಮಾಡಿಲ್ಲ. ಈಗ ಮಳೆಗೆ ಗುಂಡಿಗಳಲ್ಲಿ ನೀರು ತುಂಬಿ ಅಪಾಯವನ್ನು ಆಹ್ವಾನಿಸುತ್ತಿದೆ. ಇನ್ನಾದರೂ ಮಳೆ ಬಿಡುವಿನಲ್ಲಿ ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚಿದರೆ ಒಳ್ಳೆಯದು.
ಕೆ.ಎನ್. ಜಯಂತ್, ಗೋಣಿಕೊಪ್ಪಲು
ಗ್ರಾಮೀಣ ಭಾಗದ ರಸ್ತೆಗಳು ಸಾರ್ವಜನಿಕರಿಗೆ ಓಡಾಡಲು ಸಾಧ್ಯವಾಗದ ರೀತಿ ಇದೆ. ಜನಪ್ರತಿನಿಧಿಗಳು, ಸಂಬAಧ ಪಟ್ಟ ಇಲಾಖೆಯವರು ಇತ್ತ ಗಮನ ಹರಿಸಿದರೆ ಒಳ್ಳೆಯದು. ಮಳೆಗಾಲ ಆರಂಭದಲ್ಲೇ ರಸ್ತೆಯೆಲ್ಲಾ ಕೆಸರುಮಯವಾಗಿ ಓಡಾಡಲು ಆಗದಂತೆ ಆಗಿದೆ. ಇದಕ್ಕೆ ಕೂಡಲೇ ಪರಿಹಾರ ನೀಡಬೇಕು.
ಮಾಂಗೇರ ಕ್ವೀನ್, ಸಮಾಜ ಸೇವಕಿ, ಗೋಣಿಕೊಪ್ಪಲು
ರಸ್ತೆಗಳು ಹಲವೆಡೆ ಗುಂಡಿಮಯವಾಗಿದ್ದು, ಸಾರಿಗೆ ಸಂಚಾರಕ್ಕೆ ತುಂಬಾ ತೊಂದರೆಯಾಗಿದೆ. ಮೇ ಕೊನೆ ವಾರ ಮತ್ತು ಜೂನ್ ಮಧ್ಯದ ವರೆಗೆ ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿರುವುದರಿಂದ ಇಂಥ ಪರಿಸ್ಥಿತಿ ನಿರ್ಮಾಣ ಆಗಿದೆ. ಸದ್ಯ ಮಳೆಯಾಗುತ್ತಿರುವುದರಿಂದ ವೆಟ್ ಮಿಕ್ಸ್ ಅಳವಡಿಸಲು ಸಂಬAಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು ರಸ್ತೆ ಬದಿ ಹಳೆಯ ಹಾಗೂ ಬೀಳುವ ಹಂತದ ಮರ ತೆರವುಗೊಳಿಸಬೇಕಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇರುವುದರಿಂದ ಸಾಕಷ್ಟು ಮುನ್ನೆಚ್ಚರ ವಹಿಸುವಂತೆಯೂ ಸೂಚಿಸಲಾಗಿದೆ.
ಎ.ಎಸ್. ಪೊನ್ನಣ್ಣ, ವಿರಾಜಪೇಟೆ ಶಾಸಕ