ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಮೂರ‌್ನಾಲ್ಕು ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಎದುರಿಸಲು ರಾಜಕೀಯ ಪಕ್ಷಗಳು ಸಿದ್ಧತಾ ಕಾರ್ಯ ಪ್ರಾರಂಭಿಸಿವೆ. ಏತನ್ಮಧ್ಯೆ, ವಿರಾಜಪೇಟೆ ಕ್ಷೇತ್ರದಿಂದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಮಡಿಕೇರಿ ಕ್ಷೇತ್ರದಿಂದ ಸೋಷಿಯಲ್ ಡೆಮೋಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸ್ಪರ್ಧಿಸಲು ನಿರ್ಧರಿಸಿದೆ.
ರೈತ ಸಂಘ ಹಾಗೂ ಎಸ್‌ಡಿಪಿಐ ಸ್ಪರ್ಧೆ ಸೋಲು- ಗೆಲುವಿನ ಮೇಲೆ ಪರಿಣಾಮ ಬೀರುವುದು ನಿಶ್ಚಿತ. ಗೆಲ್ಲುವ ಸಾಧ್ಯತೆ ಸದ್ಯದ ಲೆಕ್ಕಚಾರದಲ್ಲಿ ವಿರಳವಾಗಿದ್ದರೂ, ಫಲಿತಾಂಶದ ಏರುಪೇರಿಗೆ ಕಾರಣವಾಗುವುದು ನಿಶ್ಚಿತ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಾಲಿಗೆ ಇದು ಸಂಚಲನ ಮೂಡಿಸುವ ಸುದ್ದಿ.
ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ರೈತ ಸಂಘದ ಅಭ್ಯರ್ಥಿಯಾಗಿ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಸ್ಪರ್ಧಿಸಲಿದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಿಂದ ಎಸ್‌ಡಿಪಿಐ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆಂದು ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಬಹಿರಂಗ ಪಡಿಸಿದ್ದಾರೆ.
೨೦೧೩ರ ಚುನಾವಣೆಯಲ್ಲಿ ವಿರಾಜಪೇಟೆ ಕ್ಷೇತ್ರದಲ್ಲಿ ಎಸ್‌ಡಿಪಿಐ ಅಭ್ಯರ್ಥಿಯಾಗಿ ಕೆ.ಎ. ಉಸ್ಮಾನ್ ಸ್ಪರ್ಧಿಸಿದ್ದರು. ಆ ಸಂದರ್ಭದಲ್ಲಿ ಕೇವಲ ೫೨೭ (ಶೇ.೦.೩೭) ಮತ ಪಡೆದಿದ್ದರು. ಆ ಸಂದರ್ಭಕ್ಕೂ ಪ್ರಸ್ತುತ ಸಂದರ್ಭಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ರಾಜಕೀಯ ನೆಲೆಗಟ್ಟಿನಲ್ಲಿ ಎಸ್‌ಡಿಪಿಐ ಸಂಘಟನಾತ್ಮಕವಾಗಿ ಬೆಳೆದಿದೆ.
ಏತನ್ಮಧ್ಯೆ, ರಾಜಕೀಯೇತರವಾಗಿ ರೈತ ಸಂಘ ಜಿಲ್ಲೆಯಲ್ಲಿ ಪ್ರಬಲವಾಗಿ ಬೆಳೆದಿದೆ. ಅದರಲ್ಲೂ ವಿರಾಜಪೇಟೆ, ಪೊನ್ನಂಪೇಟೆ ತಾಲೂಕು ವ್ಯಾಪ್ತಿಯಲ್ಲಿ ರೈತ ಸಂಘದ ಚಟುವಟಿಕೆ ಹೆಚ್ಚಾಗಿ ನಡೆದಿದೆ. ರೈತ ಸಂಘದಲ್ಲಿ ವಿವಿಧ ರಾಜಕೀಯ ಪಕ್ಷದ ನೇತಾರರು, ಕಾರ್ಯಕರ್ತರು ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ.
ಮನು ಸೋಮಯ್ಯ ಸ್ಪರ್ಧೆ
ಕೊಡಗಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಹೆಗ್ಗಳಿಕೆಗೆ ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಭಾಜನರಾಗಿದ್ದಾರೆ. ಕಾಡಾನೆ- ಹುಲಿ ದಾಳಿ ವೇಳೆ ಆಯೋಜಿಸಿದ್ದ ಪ್ರತಿಭಟನೆಗಳು, ಹೈಟೆಷನ್ ವಿದ್ಯುತ್ ಮಾರ್ಗ ವಿರುದ್ಧದ ಹೋರಾಟ ಸೇರಿದ್ದಂತೆ ರೈತ ಸಂಘದ ಚಟುವಟಿಕೆಗಳು ಜನಮನ ಗೆದ್ದಿವೆ.
ವಿವಿಧ ಗ್ರಾಮಗಳಲ್ಲಿ ರೈತ ಸಂಘದ ಸಭೆ ಆಯೋಜಿಸುವುದರ ಮೂಲಕ ಬಲಿಷ್ಠವಾಗಿ ಸಂಘಟಿಸಲಾಗಿದೆ. ರಾಜಕೀಯ ರಹಿತವಾಗಿ ವಿವಿಧ ರಾಜಕೀಯ ಪಕ್ಷದ ನೇತಾರರು, ಕಾರ್ಯಕರ್ತರು ರೈತ ಸಂಘದ ಹೋರಾಟ, ಸಭೆ- ಸಮಾರಂಭಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಾ ಬಂದಿದ್ದಾರೆ.
ಬಹುತೇಕ ಜನರಿಗೆ ಕರ್ನಾಟಕ ರಾಜ್ಯ ರೈತ ಸಂಘ ರಾಜಕೀಯ ಪಕ್ಷವಾಗಿಯೂ ಗುರುತಿಸಿಕೊಂಡಿರುವುದು ಗೊತ್ತಿಲ್ಲ. ಇದೀಗ ಕಾಡ್ಯಮಾಡ ಮನು ಸೋಮಯ್ಯ ವಿರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸುವ ನಿರ್ಧಾರಕ್ಕೆ ಬಂದಿರುವುದಕ್ಕೆ ರಾಜಕೀಯ ವಲಯದಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಬರಲಿದೆ ಎಂಬ ಕುತೂಹಲ ಮೂಡಿದೆ. ರೈತ ಸಂಘದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಹೆಚ್ಚಿನ ಮುಖಂಡರು, ಬೆಂಬಲಿಗರು ಕೊಡವ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಎಸ್‌ಡಿಪಿಐ ಸ್ಪರ್ಧೆ
ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಗ್ಗೆ ಕೊಡಗು ಜಿಲ್ಲಾ ಸಮಿತಿ ಆಕಾಂಕ್ಷಿಗಳ ಪಟ್ಟಿ ಸಿದ್ಧ ಪಡಿಸಿದೆ. ಮಡಿಕೇರಿಯಲ್ಲಿ ನಾಲ್ವರು, ವಿರಾಜಪೇಟೆಯಲ್ಲಿ ಮೂವರು ಆಕಾಂಕ್ಷಿಗಳಾಗಿದ್ದು, ರಾಜ್ಯ ಸಮಿತಿಗೆ ಶಿಫಾರಸ್ಸು ಮಾಡಿದೆ. ಈ ಪೈಕಿ ಮಡಿಕೇರಿ ಕ್ಷೇತ್ರದಲ್ಲಿ ಸ್ಪರ್ಧಿಸುವ ನಿರ್ಧಾರವನ್ನು ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಕೊಡ್ಲಿಪೇಟೆ ಪ್ರಕಟಿಸಿದ್ದಾರೆ.
ಮಡಿಕೇರಿ ನಗರಸಭೆಯಲ್ಲಿ ಐವರು ಸದಸ್ಯರನ್ನು ಹೊಂದಿರುವ ಎಸ್‌ಡಿಪಿಐ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಲ್ಪಸಂಖ್ಯಾತ ಮತ ಪ್ರಾಬಲ್ಯ ಹೊಂದಿದೆ. ಎಸ್‌ಡಿಪಿಐ ಸ್ಪರ್ಧೆ ಕಾಂಗ್ರೆಸ್‌ಗೆ ಹೊಡೆತ ಕೊಡಲಿದ್ದು, ಅದೇ ಸಮಯದಲ್ಲಿ ಬಿಜೆಪಿ ಗೆಲುವಿನ ಹಾದಿ ಸುಗಮ ಮಾಡಲಿದೆ.
ಎರಡು ಅಥವಾ ಒಂದು ಕ್ಷೇತ್ರದಲ್ಲಿ ಸ್ಪರ್ಧಿಸುವ ಬಗ್ಗೆ ಎಸ್‌ಡಿಪಿಐ ಕೇಂದ್ರೀಯ ಚುನಾವಣಾ ಸಮಿತಿ ಅಂತಿಮ ನಿರ್ಧಾರ ತೆಗೆದು ಕೊಳ್ಳಲಿದೆ. ಕಾಂಗ್ರೆಸ್ಸಿನಿಂದ ಆಯ್ಕೆಯಾದ ಶಾಸಕರು ಕೋಮುವಾದಿಗಳೊಂದಿಗೆ ಕೈಜೋಡಿಸುತ್ತಾರೆ. ಈ ಹಿನ್ನೆಲೆಯಲ್ಲಿ ಕೋಮುವಾದಿ ಗಳ ವಿರುದ್ಧ ಶಾಸನ ಸಭೆಯ ಒಳಗೆ ಪ್ರಬಲವಾಗಿ ಪ್ರತಿರೋಧ ವ್ಯಕ್ತ ಪಡಿಸಲು ಎಸ್‌ಡಿಪಿಐ ಶಾಸಕರ ಅಗತ್ಯತೆ ಇದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಬಿ. ಅಫ್ಸರ್ ಕೊಡ್ಲಿಪೇಟೆ ಹೇಳುತ್ತಾರೆ.
**
ಈ ಬಾರಿಯ ಚುನಾವಣೆಯಲ್ಲಿ ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕರ್ನಾಟಕ ರಾಜ್ಯ ರೈತ ಸಂಘದ ಕೊಡಗು ಜಿಲ್ಲಾಧ್ಯಕ್ಷ ಕಾಡ್ಯಮಾಡ ಮನು ಸೋಮಯ್ಯ ಸ್ಪರ್ಧಿಸುತ್ತಾರೆ. ರಾಜಕೀಯ ಪಕ್ಷಗಳ ನಿಷ್ಠಾವಂತ ಕಾರ್ಯಕರ್ತರು ಭ್ರಷ್ಟಾಚಾರ, ರಾಜಕೀಯ ಅರಾಜಕತೆಗೆ ಬೇಸತ್ತು ಈ ಬಾರಿ ರೈತ ಸಂಘದ ಅಭ್ಯರ್ಥಿಗೆ ಬೆಂಬಲ ನೀಡಲಿದ್ದಾರೆ. ಅಜ್ಜಮಾಡ ಚಂಗಪ್ಪ, ಜಿಲ್ಲಾ ಕಾರ್ಯದರ್ಶಿ, ಕರ್ನಾಟಕ ರಾಜ್ಯ ರೈತ ಸಂಘ.
**
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೇ.೯೫ ರಷ್ಟು ಮುಸ್ಲಿಂ ಮತದಾರರು ಕಾಂಗ್ರೆಸ್ಸಿಗೆ ಬೆಂಬಲ ನೀಡಿದ್ದರು. ಆದರೆ, ಕಾಂಗ್ರೆಸ್ ಶಾಸಕರು ಮಾರಾಟವಾದ್ದರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಎಸ್‌ಡಿಪಿಐ ಸ್ಪರ್ಧೆಯಿಂದ ಮತ ವಿಜಭನೆ ಆಗುತ್ತದೆ ಎಂದು ಹೇಳುತ್ತಾ ಕಾಂಗ್ರೆಸ್ ಮುಸ್ಲಿಂ ಮತ ಪಡೆಯುವ ಪ್ರಯತ್ನ ನಡೆಸುತ್ತಾ ಬಂದಿದೆ. ಈಗ ಮತ ವಿಭಜನೆ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಕಳೆದುಕೊಂಡಿದೆ. ಕೆ.ಬಿ. ಅಫ್ಸರ್, ರಾಜ್ಯ ಪ್ರಧಾನ ಕಾರ್ಯದರ್ಶಿ, ಎಸ್‌ಡಿಪಿಐ.