ಜಿಲ್ಲೆ

ಕೊಡಗಿನ ಜನತೆಗೆ ವನ್ಯಪ್ರಾಣಿ ಉಪಟಳದಿಂದ ಶಾಶ್ವತ ಪರಿಹಾರಕ್ಕೆ ದೊಡ್ಡ ಅಭಿಯಾನಕ್ಕೆ ಅಂತಾರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಕರೆ

ಮಡಿಕೇರಿ: ಕೊಡಗಿನಲ್ಲಿ ವನ್ಯಪ್ರಾಣಿಗಳಿಂದ ಆಗುತ್ತಿರುವ ಸಮಸ್ಯೆಗಳನ್ನು ಶಾಶ್ವತವಾಗಿ ಪರಿಹರಿಸಲು ದೊಡ್ಡಮಟ್ಟದ ಅಭಿಯಾನ ಹಮ್ಮಿಕೊಳ್ಳಬೇಕೆಂದು ಅಂತಾರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ತಿಮ್ಮಯ್ಯ ಕರೆ ನೀಡಿದ್ದಾರೆ.

ವಿಜಯವಾಣಿ ಮಾಧ್ಯಮ ಸಹಯೋಗದಲ್ಲಿ ವಿರಾಜಪೇಟೆ ಕಾವೇರಿ ಕಾಲೇಜು ಸಭಾಂಗಣದಲ್ಲಿ ಶನಿವಾರ ಕೊಡಗಿನಲ್ಲಿ ವನ್ಯಜೀವಿ ಮಾನವ ಸಂಘರ್ಷಕ್ಕೆ ಪರಿಹಾರಗಳು ವಿಷಯ ಕುರಿತು ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಮಾದಂಡ ತಿಮ್ಮಯ್ಯ ನೇತೃತ್ವದ ಕೊಡಗು ವೆಲ್ಫೇರ್ ಫೌಂಡೇಶನ್, ಕಾವೇರಿ ವಿದ್ಯಾಸಂಸ್ಥೆ, ಬೆಸ್ಟೀಸ್, ಚಾನಲ್ 24 ಸಂಯುಕ್ತಾಶ್ರಯದಲ್ಲಿ ಭಾಷಣ ಸ್ಪರ್ಧೆ ನಡೆಯಿತು. ಹಲವಾರು ಕಾರಣದಿಂದ ವನ್ಯಪ್ರಾಣಿಗಳು ನಾಡಿಗೆ ಬರುತ್ತಿವೆ. ರಾತ್ರಿ ವೇಳೆ ಮನೆಯಿಂದ ಹೊರ ಬರಲಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದರು.

ವಿರಾಜಪೇಟೆ ಕಾವೇರಿ ಕಾಲೇಜು ಪ್ರಾಂಶುಪಾಲರಾದ ಪ್ರೊ.ತೀತಿಮಾಡ ಪೂವಮ್ಮ ಮಾತನಾಡಿ, ವನ್ಯಪ್ರಾಣಿಗಳ ಸಮಸ್ಯೆಗೆ ನೈಜ ಕಾರಣ ಅರಿತುಕೊಂಡು ಸೂಕ್ತ ಪರಿಹಾರ ಕಂಡುಕೊಳ್ಳಬೇಕೆಂದರು. ವಿಜಯವಾಣಿ ಹಿರಿಯ ವರದಿಗಾರ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪತ್ರಿಕೋದ್ಯಮ ಉಪನ್ಯಾಸಕ ಐನಂಡ ಸೋಮಣ್ಣ ಇದ್ದರು.

ಭಾಷಣ ಸ್ಪರ್ಧೆಯಲ್ಲಿ ಕೆ.ಎಸ್. ಶೀತಲ್ ಪ್ರಥಮ, ಬಿ.ಬಿ. ಪೂವಮ್ಮದ್ವಿತೀಯ, ಕೆ.ಆರ್. ಅನುಷಾ ತೃತೀಯ ಬಹುಮಾನ ಪಡೆದರು.