ಮಡಿಕೇರಿ: ಸ್ಥಳೀಯ ಸಂಸ್ಥೆಯಲ್ಲಿ ಅಸ್ತಿತ್ವದಲ್ಲಿರುವ ಜೀವ ವೈವಿಧ್ಯ ಸಮಿತಿ ತನ್ನ ಜವಾಬ್ದಾರಿ ನಿರ್ವಹಿಸುವಂತೆ ಮಾಡಲಾಗುವುದೆಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಹೇಳಿದರು.
ಕೊಡಗು ಪ್ರೆಸ್ ಕ್ಲಬ್ ವತಿಯಿಂದ ಮಂಗಳವಾರ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಮಾತುಕತೆ ಕಾರ್ಯಕ್ರಮದಲ್ಲಿ ಮುಖ್ಯಅತಿಥಿ ಯಾಗಿ ಪಾಲ್ಗೊಂಡು ಮಾತನಾಡಿದರು. ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ, ನಗರಸಭೆ, ಪಟ್ಟಣ ಪಂಚಾಯಿತಿ, ಪುರಸಭೆಯಲ್ಲಿ ರಚಿಸುವ ಜೀವ ವೈವಿಧ್ಯ ಸಮಿತಿಗೆ ಮಹತ್ವದ ಜವಾಬ್ದಾರಿ ಇದೆ. ಆದರೆ, ಬಹುತೇಕ ಸಮಿತಿಗಳು ಸದ್ಯದ ಮಟ್ಟಿಗೆ ನಾಮ್‌ಕಾವಸ್ಥೆಗೆ ಇದೆ ಎಂದು ವಿಷಾದ ವ್ಯಕ್ತ ಪಡಿಸಿದರು.
ಜೀವ ವೈವಿಧ್ಯ ಸಮಿತಿಗಳು ಸ್ಥಳೀಯ ಜೀವ ವೈವಿಧ್ಯದ ಬಗ್ಗೆ ದಾಖಲೀಕರಣ ಮಾಡುವ ಮಹತ್ವದ ಜವಾಬ್ದಾರಿ ಹೊಂದಿದೆ. ಜೀವ- ಜಂತು ಗಳ ಆವಾಸ ಸ್ಥಾನ ಸಂರಕ್ಷಣೆ, ನಾಟಿ ತಳಿ, ವನ್ಯ, ಕೃಷಿ ತಳಿ ರಕ್ಷಣೆ ಮಾಡುವುದು, ಸೂಕ್ಷ್ಮಣು ಜೀವಿಗಳ ರಕ್ಷಣೆ, ಜೈವಿಕ ಸಂಪನ್ಮೂಲದ ಜ್ಞಾನ ವಿಸ್ತರಣೆ ಮಾಡುವ ಜವಾಬ್ದಾರಿ ಸಮಿತಿಗೆ ಇದೆ ಎಂದರು.
ವಿಶ್ವ ವಿದ್ಯಾಲಯ ಮಟ್ಟದಲ್ಲಿ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗುವುದು. ಅಳಿವಿನಂಚಿನಲ್ಲಿರುವ ಜೀವ ಜಂತುಗಳ ಉಳಿವಿಗಾಗಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಹೆಚ್ಚು ಮುತುವರ್ಜಿ ವಹಿಸಲಿದೆ. ರಾಜ್ಯದ ಪ್ರತಿಯೊಂದು ಜಿಲ್ಲಾ ಪಂಚಾಯಿತಿ ಮಟ್ಟದಲ್ಲಿ ಸ್ಥಳೀಯ ಸಂಸ್ಥೆ ರಚಿಸುವ ಜೀವ ವೈವಿಧ್ಯ ಸಮಿತಿಗೆ ಇರುವ ಜವಾಬ್ದಾರಿ ಬಗ್ಗೆ ಅರಿವು ಮೂಡಿಸುವ ತರಬೇತಿ ಕಾರ್ಯಕ್ರಮ ಆಯೋಜಿಸಲಾಗುವು ದೆಂದರು.
ನೈಸರ್ಗಿಕ ಗಿಡಮೂಲಿಕೆ ಸಂರಕ್ಷಣೆ ಮಾಡಲು ಮಂಡಳಿಯಿಂದ ಸಂಶೋಧನೆ, ಅಧ್ಯಯನ ನಡೆಯುತ್ತಿದೆ. ಸಾಂಪ್ರಾದಾಯಿಕ ಕೃಷಿಗೆ ಹೆಚ್ಚಿನ ಒತ್ತು ನೀಡಲು ಜಾಗೃತಿ ಮೂಡಿಸಲಾಗುವುದು. ಜೀವ ವೈವಿಧ್ಯ ಮಂಡಳಿ ಪವರ್‌ಫುಲ್ ಬೋರ್ಡ್ ಆಗಿದೆ. ಮಂಡಳಿಯ ಮೂಲ ಉದ್ದೇಶಕ್ಕೆ ಪೂರಕವಾಗಿ ಜವಾಬ್ದಾರಿ ನಿರ್ವಹಿಸುತ್ತೇನೆಂದರು.
ಜೀವ ಸಂಕುಲ ಉಳಿಸಲು ಸಂಘರ್ಷದ ಹಾದಿ ಹಿಡಿಯುವುದಿಲ್ಲ. ಸ್ಥಳೀಯರೊಂದಿಗೆ ಚರ್ಚಿಸಿದ ಬಳಿಕವೇ ಮಂಡಳಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುವುದು. ಒತ್ತಾಯಪೂರಕವಾಗಿ ಯಾವುದೇ ಚಟುವಟಿಕೆ ಮಾಡುವಿಲ್ಲ. ಜನರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಜೀವ ಜಂತು ಉಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಲಾಗುವುದೆಂದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಇದ್ದರು. ಸುನಿಲ್ ಪೊನ್ನೆಟಿ ನಿರೂಪಿಸಿದರು. ಪ್ರಜ್ಞಾ ರಾಜೇಂದ್ರ ಪ್ರಾರ್ಥಿಸಿದರು. ಎಂ.ಎನ್. ಚಂದ್ರಮೋಹನ್ ಸ್ವಾಗತಿಸಿದರು. ಬೊಳ್ಳಜೀರ ಬಿ. ಅಯ್ಯಪ್ಪ ಅತಿಥಿ ಪರಿಚಯ ಮಾಡಿದರು. ಟಿ.ಆರ್. ಪ್ರಭುದೇವ್ ವಂದಿಸಿದರು.
ಮಂಡಳಿ ಬಗ್ಗೆ ಗೊತ್ತಿಲ್ಲ
ಅನೇಕರಿಗೆ ಜೀವ ವೈವಿಧ್ಯ ಮಂಡಳಿ ಬಗ್ಗೆ ಅರಿವಿಲ್ಲ. ನಾನು ಅಧ್ಯಕ್ಷನಾದ ಬಳಿಕ ಆ ಮಂಡಳಿಯಲ್ಲಿ ಏನ್ ಕೆಲಸ ಮಾಡ್ತೀಯಾ ಎಂದು ಪ್ರಶ್ನಿಸುತ್ತಿದ್ದಾರೆ. ಸೂಕ್ಷ್ಮಾಣು ಜೀವಿಯಿಂದ ಹಿಡಿದು ಪ್ರತಿಯೊಂದು ಜೀವ ಜಂತುಗಳಿಗೂ ಭೂಮಿಯಲ್ಲಿ ಬದುಕು ಹಕ್ಕಿದೆ. ಪರಿಸರದ ಸಮತೋಲನಕ್ಕೆ ಪ್ರತಿಯೊಂದು ಜೀವಿಯೂ ಉಳಿಯಬೇಕು. ಭವಿಷ್ಯದ ಪರಿಸರ ಬಗ್ಗೆ ಪ್ರತಿಯೊಬ್ಬರು ಯೋಚಿಸಬೇಕಾಗಿದೆ ಎಂದರು.
೧೯೯೨ ರಲ್ಲಿ ಬ್ರೆಜಿಲ್‌ನಲ್ಲಿ ಆಯೋಜಿಸಲಾಗಿದ್ದ ಜೀವ ವೈವಿಧ್ಯ ಸಮಾವೇಶದಲ್ಲಿ ಭಾರತ ಪಾಲ್ಗೊಂಡಿತ್ತು. ದೇಶದಲ್ಲಿ ೨೦೦೨ ರಲ್ಲಿ ಜೀವ ವೈವಿಧ್ಯ ಸಂರಕ್ಷಣಾ ಕಾಯ್ದೆ ರೂಪಿಸಿದ್ದು, ೨೦೦೩ ರಿಂದ ಅನುಷ್ಠಾನಕ್ಕೆ ತರಲಾಗಿದೆ. ಈ ಕಾಯ್ದೆಯಡಿ ರಾಷ್ಟ್ರೀಯ ಜೀವ ವೈವಿಧ್ಯ ಪ್ರಾಧಿಕಾರ ರಚಿಸಲಾಯಿತು. ೨೦೦೪ ರಲ್ಲಿ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಸ್ತಿತ್ವಕ್ಕೆ ಬಂದಿದೆ. ಅರಣ್ಯ, ತೋಟಗಾರಿಕೆ, ಕೃಷಿ, ಪಶುಸಂಗೋಪನೆ, ಆಯುಷ್, ಆಯುರ್ವೇದಿಕ್ ಇಲಾಖೆ ನಮ್ಮ ಮಂಡಳಿ ವ್ಯಾಪ್ತಿಗೆ ಬರುತ್ತದೆ. ಅರಣ್ಯ ಇಲಾಖೆ ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ. ಮಂಡಳಿಯಲ್ಲಿ ೮ ಸದಸ್ಯರಿದ್ದಾರೆ. ಐಎಎಸ್, ಎಎಫ್‌ಎಸ್ ಅಧಿಕಾರಿಗಳು ಸದಸ್ಯರಾಗಿದ್ದು, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಕೂಡ ಸದಸ್ಯರಾಗಿದ್ದಾರೆ. ೩ ತಿಂಗಳಿಗೊಮ್ಮೆ ಮಂಡಳಿ ಸಭೆ ನಡೆಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.
ನಾಟಿ ವೈದ್ಯರ ಸಮಾವೇಶ
ಅಕ್ಟೋಬರ್ ೭ ರಂದು ಹಾಸನ ಜಿಲ್ಲೆಯಲ್ಲಿರುವ ಆದಿಚುಂಚನಗಿರಿ ಮಠದಲ್ಲಿ ರಾಜ್ಯಮಟ್ಟದ ನಾಟಿ ವೈದ್ಯರ ಸಮಾವೇಶ ಆಯೋಜಿಸ ಲಾಗಿದೆ. ನಾಟಿ ವೈದ್ಯರನ್ನು ಗುರುತು ಮಾಡಿ, ಸರ್ಕಾರದಿಂದ ಮಾನ್ಯತೆ ಕೊಡಲು ಉದ್ದೇಶಿಸಲಾಗಿದೆ. ರಾಜ್ಯಮಟ್ಟದ ಸಮಾವೇಶ ಮುಗಿದ ಬಳಿಕ ಕೊಡಗು ಜಿಲ್ಲೆಯಲ್ಲಿಯೂ ನಾಟಿ ವೈದ್ಯರ ಸಮಾವೇಶ ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ರವಿ ಕಾಳಪ್ಪ ಮಾಹಿತಿ ನೀಡಿ ದರು.
ದೇವರಕಾಡು- ದೇವದಾರ್ ರಕ್ಷಣೆ
ಪಾರಂಪಾರಿಕ ತಾಣವನ್ನಾಗಿ ಘೋಷಿಸುವ ಮೂಲಕ ಕೊಡಗಿನ ದೇವರಕಾಡು ಸಂರಕ್ಷಿಸಲು ಉದ್ದೇಶಿಸಲಾಗಿದೆ. ಹೀಗೆ ಮಾಡುವುದರಿಂದ ದೇವರಕಾಡಿನಲ್ಲಿ ಹಿಂದಿನಿಂದ ನಡೆದುಕೊಂಡು ಬಂದಿರುವ ಧಾರ್ಮಿಕ ಕೈಂಕರ್ಯಕ್ಕೆ ಅಡ್ಡಿಯಾಗದ್ದಂತೆ ಎಚ್ಚರ ವಹಿಸಲಾಗುವುದೆಂದರು.
ಬೆಲೆಬಾಳು ಮತ್ತು ಅತ್ಯಮೂಲ್ಯವಾದ ದೇವದಾರ್ ಮರ ಸಂರಕ್ಷಣೆಗೆ ಒತ್ತು ನೀಡಲಾಗುವುದು. ಶ್ರೀಗಂಧಕ್ಕಿಂತ ದೇವದಾರ್ ಮರ ಅಳಿವಿನಂಚಿನಲ್ಲಿದೆ. ಈ ಮರದ ಬಗ್ಗೆ ಮಂಡಳಿಯಿಂದ ಅಧ್ಯಯನ ಮಾಡಲು ಉದ್ದೇಶಿಸಲಾಗಿದೆ. ಕೊಡಗಿನ ದೇವರಕಾಡಿನ ಬಗ್ಗೆಯೂ ಮಂಡಳಿ ಮೂಲಕ ಅಧ್ಯಯನ ಮಾಡಿಸಲಾಗುವುದೆಂದರು.