ಜಿಲ್ಲೆ

ಕರುಣ್ ಕಾಳಯ್ಯ ಬೆಸ್ಟ್ ಫೋಟೋಗ್ರಾಫರ್; ಸಂತೋಷ್ ರೈ ಬೆಸ್ಟ್ ವಿಡಿಯೋಗ್ರಾಫರ್

ಮಡಿಕೇರಿ: ವಿಶ್ವ ಛಾಯಾಗ್ರಾಹಣ ದಿನಾಚರಣೆ ಪ್ರಯುಕ್ತ ವನ್ಯಜೀವಿಗಳ ಬದುಕಿನ ಚಿತ್ರಣದ ಬಗ್ಗೆ ಕೊಡಗು ಪ್ರೆಸ್ ಕ್ಲಬ್ ಸದಸ್ಯರಿಗೆ ಆಯೋಜಿಸಿದ್ದ ಬೆಸ್ಟ್ ಫೋಟೋಗ್ರಫಿ ಸ್ಪರ್ಧೆಯಲ್ಲಿ ಶಕ್ತಿ ಪತ್ರಿಕೆಯ ಪುತ್ತರಿರ ಕರುಣ್ ಕಾಳಯ್ಯ ಹಾಗೂ ಬೆಸ್ಟ್ ವಿಡಿಯೋಗ್ರಫಿ ಸ್ಪರ್ಧೆಯಲ್ಲಿ ಚಿತ್ತಾರ ದೃಶ್ಯ ವಾಹಿನಿಯ ಸಂತೋಷ್ ರೈ ಪ್ರಥಮ ಸ್ಥಾನ ಪಡೆದಿದ್ದಾರೆ.

ಮಡಿಕೇರಿಯ ಲಾಲಿ ಪೆಟಲ್ಸ್ ಹೋಟೆಲ್ ಸಭಾಂಗಣದಲ್ಲಿ ಗುರುವಾರ ವಿಶ್ವ ಛಾಯಾಗ್ರಹಣ ದಿನಾಚರಣೆ ಆಯೋಜಿಸಲಾಗಿತ್ತು. ಕರುಣ್ ಕಾಳಯ್ಯ ತೆಗೆದ ಬಸವನಹುಳುವಿನ ಛಾಯಾಚಿತ್ರ ಬೆಸ್ಟ್ ಫೋಟೋಗ್ರಫಿ ವಿಭಾಗದಲ್ಲಿ ಹಾಗೂ ಸಂತೋಷ್ ರೈ ಚಿತ್ರೀಕರಿಸಿದ ಕೆಂಪು ಇರುವೆ ಬದುಕಿನ ಚಿತ್ರಣ ಬೆಸ್ಟ್ ವಿಡಿಯೋಗ್ರಫಿಗೆ ಆಯ್ಕೆಯಾಗಿದೆ. ವಿರಾಜಪೇಟೆಯ ಹಿರಿಯ ಛಾಯಾಗ್ರಾಹಕ ಶ್ರೀಕಾಂತ್ ರಾವ್ ತೀರ್ಪುಗಾರ ರಾಗಿ ಜವಾಬ್ದಾರಿ ನಿರ್ವಹಿಸಿದರು.

ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಉದ್ಯಮಿ ಮಾರ್ಟಿನ್ ತಲಾ ೫ ಸಾವಿರ ರೂಪಾಯಿ ನಗದು ಹಾಗೂ ವಾಟರ್ ಫ್ರೂಪ್ ಕ್ಯಾಮರಾ ಬ್ಯಾಗ್ ಬಹುಮಾನವಾಗಿ ನೀಡಿದರು.

ಫೋಟೋ ತೆಗೆಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಅಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಸಾವಿರ ಪದದಲ್ಲಿ ಹೇಳಲು ಸಾಧ್ಯವಾಗದ್ದನ್ನು ಒಂದು ಫೋಟೋ ಹೇಳುತ್ತದೆ. ಪತ್ರಕರ್ತರು ಕೂಡ ಉತ್ತಮ ಛಾಯಾಗ್ರಾಹಕರಾಗಿದ್ದಾರೆ. ಬದುಕಿನ ಬಣ್ಣವನ್ನು ಛಾಯಾಚಿತ್ರ ಬಿಂಬಿಸುತ್ತದೆ ಎಂದರು.

ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ವಕೀಲ ಡಾ.ಯಾಲದಾಳು ಮನೋಜ್ ಬೋಪಯ್ಯ, ಛಾಯಾಗ್ರಾಹಕರಲ್ಲಿ ಸಾಮಾಜಿಕ ಜವಾಬ್ದಾರಿ ಹೆಚ್ಚಿರುತ್ತದೆ. ಫೋಟೋ ಮತ್ತು ವಿಡಿಯೋ ಸಮಾಜದಲ್ಲಿ ನಡೆಯುವ ವಿದ್ಯಮಾನದ ಸಾಕ್ಷಿಯಾಗಿ ಉಳಿಯುತ್ತದೆ. ಬರಗಾಲ ದಲ್ಲಿ ಸೂಡನ್ ದೇಶದಲ್ಲಿ ಹಸಿವಿನ ಭೀಕರತೆ ಬಿಂಬಿಸುವ ಮಗು ಮತ್ತು ರಣಹದ್ದಿನ ಚಿತ್ರ ಇಂದಿಗೂ ಚರ್ಚೆಯಲ್ಲಿದೆ. ವಿವಾದಿತ ಛಾಯಾಗ್ರಾಹಕ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ, ಆ ದೇಶದ ಬಡತನದ ಚಿತ್ರಣವನ್ನು ವಿಶ್ವಕ್ಕೆ ಪರಿಚಯಿಸಿದ ಎಂದು ಹೇಳಿದರು.

ಮುಖ್ಯಅತಿಥಿಯಾಗಿ ಪಾಲ್ಗೊಂಡಿದ್ದ ಕೋನಿಕಾ ಲ್ಯಾಗ್ ಮಾಲೀಕರಾದ ಅಂಬೆಕಲ್ ನವೀನ್ ಕುಶಾಲಪ್ಪ ಮಾತನಾಡಿ, ಡಿಜಿಟಲ್ ಯುಗ ದಲ್ಲಿ ಪ್ರತಿಯೊಬ್ಬರು ಛಾಯಾಗ್ರಾಹಕರಗಿದ್ದಾರೆ. ಫೋಟೋಕ್ಕೆ ನೀಡುವ ನಗು ಜೀವನದಲ್ಲಿ ಶಾಶ್ವತವಾಗಿ ಇರಬೇಕೆಂದರು. ಒಂದು ಚಿತ್ರ ಜೀವನದಲ್ಲಿ ದೊಡ್ಡ ಬದಲಾವಣೆ ತರಬಹುದೆಂದು ಉದ್ಯಮಿ ಮಾರ್ಟಿನ್ ಹೇಳಿದರು.

ವಿಶ್ವ ಛಾಯಾಗ್ರಾಹಕ ದಿನಾಚರಣೆ ಸಂಚಾಲಕರಾದ ಕುಡಿಯರ ದಿವಾಕರ ಭೋಜಪ್ಪ ಮಾತನಾಡಿ, ಛಾಯಾಗ್ರಾಹಕರ ಒತ್ತಾಸೆಯಂತೆ ನಂದ ಗುಜ್ಜರ್ ಹಾಗೂ ಜೀವನ್ ಪಾಲೆಕ್ಕಾಡ್ ಸ್ಮಾರಣಾರ್ಥ ಬೆಸ್ಟ್ ವಿಡಿಯೋಗ್ರಫಿ ಹಾಗೂ ಬೆಸ್ಟ್ ಫೋಟೋಗ್ರಫಿ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.

೧೮ನೇ ಶತಮಾನದಲ್ಲಿ ಮಡಿಕೇರಿ ಹಾಗೂ ಕೊಡಗಿನ ಮೂಲನಿವಾಸಿಗಳ ಬಗ್ಗೆ ತೆಗೆದ ಛಾಯಾಚಿತ್ರವನ್ನು ಹಿರಿಯ ಛಾಯಾಗ್ರಾಹಕ ರಾಜ್ ಮುತ್ತಪ್ಪ ಪ್ರದರ್ಶಿಸಿದರು. ವಿಡಿಯೋಗ್ರಫಿ ಮತ್ತು ಫೋಟೋಗ್ರಫಿ ಸ್ಪರ್ಧೆಗೆ ಬಂದ ವಿಡಿಯೋಗ್ರಫಿ ಮತ್ತು ಛಾಯಾಚಿತ್ರದ ಸಾಧಕ ಬಾಧಕ ಕುರಿತು ವಿರಾಜಪೇಟೆಯ ಹಿರಿಯ ಛಾಯಾಗ್ರಾಹಕ ಶ್ರೀಕಾಂತ್ ರಾವ್ ವಿಶ್ಲೇಷಿಸಿದರು.

ಸರಿಯಾದ ಹೆಜ್ಜೆ ಮತ್ತು ಕೈ ಹಾಕುವ ಸ್ಪರ್ಧೆಯಲ್ಲಿ ಪ್ರಸಿನ್ ಗೌಡ ಪ್ರಥಮ, ಗೋಪಾಲ್ ಸೋಮಯ್ಯ ದ್ವಿತೀಯ ಹಾಗೂ ಬೊಳ್ಳಜೀರ ಬಿ. ಅಯ್ಯಪ್ಪ ತೃತೀಯ ಬಹುಮಾನ ಪಡೆದರು. ಬಲೂನ್ ಒಡೆಯುವ ಸ್ಪರ್ಧೆಯಲ್ಲಿ ಗೋಪಾಲ್ ಸೋಮಯ್ಯ ಪ್ರಥಮ, ಸುರ್ಜಿತ್ ದ್ವಿತೀಯ ಹಾಗೂ ಜೀವನ್‌ತೃತೀಯ ಬಹುಮಾನ ಪಡೆದರು. ವಿಜೇತರಿಗೆ ಕೊಡಗು ಪ್ರೆಸ್ ಕ್ಲಬ್ ಉಪಾಧ್ಯಕ್ಷ ಚೀಯಂಡಿ ತೇಜಸ್ ಪಾಪಯ್ಯ ನಗದು ಬಹುಮಾನ ನೀಡಿದರು.

ಜೀವನ್ ಪಾಲೆಕ್ಕಾಡ್ ಅವರ ತಾಯಿ ಮಾಂಗಲ್ಯ ಅವರಿಗೆ ಕೊಡಗು ಪ್ರೆಸ್ ಕ್ಲಬ್ ವತಿಯಿಂದ ೫ ಸಾವಿರ ರೂಪಾಯಿ ಆರ್ಥಿಕ ನೆರವು ನೀಡ ಲಾಯಿತು. ಕೊಡಗು ಪ್ರೆಸ್ ಕ್ಲಬ್ ಪ್ರಧಾನ ಕಾರ್ಯದರ್ಶಿ ಕೆ.ಕೆ. ರೆಜಿತ್‌ಕುಮಾರ್ ಗುಹ್ಯ, ಉಪಾಧ್ಯಕ್ಷ ಚೀಯಂಡಿ ತೇಜಸ್ ಪಾಪಯ್ಯ, ಖಜಾಂಚಿ ಬೊಳ್ಳಜೀರ ಬಿ. ಅಯ್ಯಪ್ಪ, ಸಂಘಟನಾ ಕಾರ್ಯದರ್ಶಿ ಎಂ.ಎನ್. ಚಂದ್ರಮೋಹನ್, ನಿರ್ದೇಶಕರಾದ ಸುನಿಲ್ ಪೊನ್ನೆಟಿ, ನವೀನ್ ಡಿಸೋಜ, ಪ್ರಸಿನ್ ಗೌಡ, ವಿಶ್ವ ಕುಂಬೂರು ಮತ್ತಿತರರು ಇದ್ದರು.