ವಿಜಯವಾಣಿ ಸುದ್ದಿಜಾಲ ಸಿದ್ದಾಪುರ
ಕಾಫಿ ತೋಟ ಕೆಲಸಕ್ಕೆ ಭವಿಷ್ಯದಲ್ಲಿ ವಿದೇಶಗಳಿಂದಲೂ ಕಾರ್ಮಿಕರನ್ನು ಕರೆತರುವ ಪರಿಸ್ಥಿತಿ ಬಂದೊದೊಗುವ ಸಾಧ್ಯತೆ ಇಲ್ಲದಿಲ್ಲ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟ ವಕ್ತಾರ ಕೆ.ಕೆ. ವಿಶ್ವನಾಥ್ ಹೇಳಿದರು.
ಪಾಲಿಬೆಟ್ಟ ಖಾಸಗಿ ರೆಸಾರ್ಟ್‌ನಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಮುಖ್ಯಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಮೊದಲಿನ ಕಾಲದಲ್ಲಿ ಆಂಧ್ರಪ್ರದೇಶ, ತಮಿಳುನಾಡು, ಶ್ರೀಲಂಕಾದ ವಲಸಿಗರನ್ನು ಕೊಡಗಿನ ತೋಟಗಳಿಗೆ ಕಾರ್ಮಿಕರಾಗಿ ಕರೆತರಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಒರಿಸ್ಸಾ, ಬಿಹಾರದ ಕಾರ್ಮಿಕರು ಬಂದರು. ಇದೀಗ ಅಸ್ಸಾಂ ಮೂಲದ ಕಾರ್ಮಿಕರೇ ಕಂಡು ಬರುತ್ತಿದ್ದಾರೆ. ಇದೇ ಪರಿಸ್ಥಿತಿ ಮುದುವರೆದರೆ ದಕ್ಷಿಣ ಆಫ್ರಿಕಾ ಸೇರಿದಂತೆ ವಿದೇಶಗಳಿಂದಲೂ ಕಾರ್ಮಿಕರನ್ನು ಕರೆದುಕೊಂಡು ಬರುವ ಪರಿಸ್ಥಿತಿ ತಲೆದೋರೀತು. ಬೇರೆ ದೇಶಗಳಲ್ಲಿಯೂ ವಿದೇಶಗಳಿಂದ ಕಾಮಿ೯ಕರನ್ನು ಕರೆಸಿ ಕೆಲಸ ಮಾಡಿಸುವ ವ್ಯವಸ್ಥೆ ಈಗಾಗಲೇ ಪ್ರಾರಂಭವಾಗಿದೆ ಎಂದರು.
ಮುಂದಿನ ಪೀಳಿಗೆಗೆ ಕಾಫಿ ಮೇಲೆ ಆಸಕ್ತಿ ಉಂಟಾಗುವಂತೆ ಮಾಡಬೇಕು. ಆ ಮೂಲಕ ಭಾರತೀಯ ಕಾಫಿಗೆ ಕಾಯಕಲ್ಪ ನೀಡಬೇಕು. ಕಾಫಿ ಮಂಡಳಿಯಿಂದ ಹೊಸ ಕಾಫಿ ತಳಿ ಸಷ್ಟಿಸುವ ಚಿಂತನೆ ನಡೆದಿದೆ. ಕೃಷಿಕರು ಹೊಸ ಕಾಫಿ ತಳಿ ಬೆಳೆಯುವಿಕೆಗೆ ಆದ್ಯತೆ ನೀಡಬೇಕಾಗಿದೆ.
ಕೊಡಗಿನಲ್ಲಿ ಸಾವಿರಾರು ಎಕ್ರೆ ಕೃಷಿ ಭೂಮಿ ತೆರಿಗೆಯಿಂದ ಹೊರತಾಗಿದೆ. ಇಂಥ ಜಮೀನನ್ನು ಕಂದಾಯ ತೆರಿಗೆ ವ್ಯಾಪ್ತಿಗೆ ತರಬೇಕೆಂದರು.
ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘ ಅಧ್ಯಕ್ಷೆ ಜ್ಯೋತಿಕಾ ಬೋಪಣ್ಣ ಮಾತನಾಡಿ, ಕಾಫಿ ಸೇವನೆಗೆ ಉತ್ತೇಜನ ನೀಡುವಂವ ಕಾರ್ಯಕ್ರಮ ರೂಪಿಸಲಾಗುತ್ತಿದೆ, ಆಧುನಿಕ ತಂತ್ರಜ್ಞಾನಗಳನ್ನೂ ಕಾಫಿ ಉತ್ಪಾದನೆಗೆ ಬಳಸುವ ಅಗತ್ಯವಿರುವ ಈ ಕಾಲಘಟ್ಟದಲ್ಲಿ ಮಹಿಳೆಯರೂ ಕೂಡ ನವನವೀನ ತಂತ್ರಜ್ಞಾನದ ಕುರಿತಂತೆ ತಿಳುವಳಿಕೆ ಹೊಂದಿರಬೇಕೆಂದರು.
ಸಂಘದ ಉಪಾಧ್ಯಕ್ಷೆ ಅನಿತಾ ಅಯ್ಯಣ್ಣ ಮಾತನಾಡಿ, ಕಾಫಿ ಜಿಲ್ಲೆ ಎಂಬ ಹೆಗ್ಗಳಿಕೆ ಹೊಂದಿದ್ದ ಕೊಡಗು ಇತ್ತೀಚಿನ ವರ್ಷಗಳಲ್ಲಿ ಹಿರಿಯ ನಾಗರಿಕರ ಜಿಲ್ಲೆ ಎಂಬ ಹೆಸರಿಗೆ ಕಾರಣವಾಗುತ್ತಿದೆ. ಯುವಪೀಳಿಗೆ ಕಾಫಿ ತೋಟವನ್ನೇ ಮರೆತು ಮಹಾನಗರಗಳಿಗೆ ವಲಸೆ ಹೋಗುತ್ತಿರುವುದು ಹೆಚ್ಚಾಗಿದೆ. ಯುವಜನಾಂಗಕ್ಕೆ ಕಾಫಿ ಮಹತ್ವ ಬಗ್ಗೆ ತಿಳುವಳಿಕೆ ಮೂಡಿಸುವ ಕೆಲಸ ಆಗಬೇಕಂದರು.
ಲೇಖಕಿ ಕೇಟೋಳೀರ ಶಶಿ ಸುಬ್ರಹ್ಮಣಿ ಮಾತನಾಡಿ, ವಿಶ್ವದಲ್ಲಿಯೇ ಮಹಿಳೆಯರಿಗೆ ಅತ್ಯಂತ ಗೌರವ ನೀಡುವ ಸಮುದಾಯ ಎಂದರೆ ಅದು ಕೊಡವ ಜನಾಂಗ ಎಂದು ಹರ್ಷ ವ್ಯಕ್ತಪಡಿಸಿದರು. ಕೊಡವ ಮಹಿಳೆಯರಿಗೆ ಇರುವ ಸ್ವಾತಂತ್ರ್ಯ ಬೇರೆ ಯಾವುದೇ ಜನಾಂಗದಲ್ಲಿ ಯೂ ಇಲ್ಲ ಎಂದರು.
ವೇದಿಕೆಯಲ್ಲಿ ಕೊಡಗು ಮಹಿಳಾ ಕಾಫಿ ಜಾಗೃತಿ ಸಂಘ ಸಂಘಟನಾ ಕಾರ್ಯದರ್ಶಿಗಳಾದ ರೀಟಾ ದೇಚಮ್ಮ, ರಾಣಿ ನರೇಂದ್ರ, ಖಜಾಂಜಿ ಕುಮಾರಿ ಕುಂಜ್ಞಪ್ಪ ಇದ್ದರು. ಶರೀನ್ ನಂಜಪ್ಪ ಪ್ರಾರ್ಥಿಸಿದರು. ಸುಮಾ ತಿಮ್ಮಯ್ಯ ವಂದಿಸಿದರು.