ಜಿಲ್ಲೆ

ಕೊಡಗಿನ ಶಾಸಕರ ಶಿಫಾರಸ್ಸಿನ್ವಯ ಎಸ್ಪಿ ಅಯ್ಯಪ್ಪ ನೇಮಕ

reportermys

ಮಡಿಕೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಡಗಿನ ಶಾಸಕರ ಕೋರಿಕೆಯಂತೆ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ ಅವರನ್ನು ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕ ಮಾಡಿದ್ದಾರೆ. ಸರ್ಕಾರಿ ಜಮೀನುಗಳ ಸಂರಕ್ಷಣಾ ಸಮಿತಿ ಅಧ್ಯಕ್ಷರಾಗಿರುವ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಲೆಟರ್ ಹೆಡ್‌ನಲ್ಲಿ ಫೆಬ್ರವರಿ ೨ ರಂದು ಮುಖ್ಯಮಂತ್ರಿಗೆ ನೀಡಿರುವ ಕೋರಿಕೆ ಪತ್ರವನ್ನು ಬಿಜೆಪಿ ಸಾಮಾಜಿಕ ಜಾಲತಾಣದವರು ಬಿಡುಗಡೆ ಮಾಡಿದ್ದಾರೆ.

ಕರ್ನಾಟಕ ವಿದ್ಯುತ್ ನಿಗಮ ನಿಯಮಿತದಲ್ಲಿ ಎಸ್ಪಿ ಮತ್ತು ಸಿವಿಒ ಆಗಿದ್ದ ಕ್ಯಾಪ್ಟನ್ ಎಂ.ಎ. ಅಯ್ಯಪ್ಪ ಅವರನ್ನು ಪೊಲೀಸ್ ವರಿಷ್ಠಾಧಿಕಾರಿ ಯನ್ನಾಗಿ ನೇಮಕ ಮಾಡುವಂತೆ ನೀಡಿದ ಪತ್ರಕ್ಕೆ ಮಡಿಕೇರಿ ಶಾಸಕರು, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುಜಾ ಕುಶಾಲಪ್ಪ ಕೂಡ ಸಹಿ ಮಾಡಿದ್ದರು.

ಕೊಡವ ಪೊಲೀಸ್ ವರಿಷ್ಠಾಧಿಕಾರಿ ಆಗಿ ಬರುವುದನ್ನು ತಡೆಯಲು ಶಾಸಕ ಕೆ.ಜಿ. ಬೋಪಯ್ಯ ಸಾಕಷ್ಟು ಪ್ರಯತ್ನಿಸಿದ್ದಾರೆ. ಆವರು ಎದೆಮುಟ್ಟಿ, ಆತ್ಮಸಾಕ್ಷಿಯಾಗಿ ಇಲ್ಲ ಎಂದು ಹೇಳಲಿ ಎಂದು ಕೆಪಿಸಿಸಿ ಕಾನೂನು ಅಧ್ಯಕ್ಷ ಎ.ಎಸ್. ಪೊನ್ನಣ್ಣ ಸುದ್ದಿಗೋಷ್ಠಿಯಲ್ಲಿ ಸವಾಲು ಹಾಕಿದ್ದರು. ದಾಖಲೆ ಬಿಡುಗಡೆ ಮಾಡುವುದರೊಂದಿಗೆ ಪೊನ್ನಣ್ಣ ಮೇಲೆ ಬಿಜೆಪಿಯವರು ಸಾಮಾಜಿಕ ಜಾಲತಾಣದಲ್ಲಿ ಮುಗಿಬಿದ್ದಿದ್ದಾರೆ.

ಕಾಂಗ್ರೆಸ್ಸಿನವರು ಎಂತಹ ಸುಳ್ಳುಕೋರರೆಂದರೆ ಕೊಡಗು ಎಸ್ಪಿಯನ್ನು ವರ್ಗಾಯಿಸವಬೇಕೆಂದು ಪ್ರತಿಭಟಿಸಿಯೇ ಇಲ್ಲ ಎಂದು ನಾಟಕದ ಚಾಳಿ ಮುಂದುವರೆಸಿದ್ದಾರೆ. ಅಷ್ಟೇ ಅಲ್ಲದೆ ಮತ್ತೆ ೨೬ ಕ್ಕೆ ಎಸ್ಪಿ ಕಚೇರಿಗೆ ಮುತ್ತಿಗೆ ಹಾಕುವ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ. ಇದು ಯಾವ ರೀತಿಯ ನಾಟಕವೆಂದು ಜನರೇ ತೀರ್ಮಾನಿಸಬೇಕೆಂದು ಬಿಜೆಪಿ ವಿರಾಜಪೇಟೆ ಮಂಡಲ ಅಧ್ಯಕ್ಷ ನೆಲ್ಲೀರ ಚಲನ್ ಕುಮಾರ್ ಮನವಿ ಮಾಡಿದ್ದಾರೆ.

ಅಯ್ಯಪ್ಪ ಅವರನ್ನು ಕೊಡಗಿನ ಎಸ್ಪಿಯಾಗಿ ನಿಯೋಜಿತಗೊಳಿಸುವಂತೆ ಸರ್ಕಾರಕ್ಕೆ ಕೋರಿಕೊಂಡ ಪತ್ರ ಮತ್ತು ಪೋಸ್ಟಿಂಗ್ ಲೆಟರ್ ಜನರ ಮುಂದಿಡುತ್ತಿದ್ದೇವೆ. ಹೀಗಿರುವಾಗ ಬಿಜೆಪಿ ಶಾಕಸರು ಎಸ್ಪಿಯವರನ್ನು ವಿರೋಧಿಸುತ್ತಿದ್ದಾರೆಂದು ಎ.ಎಸ್. ಪೊನ್ನಣ್ಣ ಸುಳ್ಳನ್ನು ಹರಿ ಬಿಡುತ್ತಿ
ದ್ದಾರೆ. ಜನ ಇವರುಗಳ ಸುಳ್ಳನ್ನು ನಂಬಿ ಬರುತ್ತಾರೆ ಅಂತ ಎಂದುಕೊಂಡಿದ್ದರೆ ಅದು ಭ್ರಮೆ. ಸುಳ್ಳಿನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಾಧ್ಯವಿಲ್ಲವೆಂಬುದನ್ನು ಪೊನ್ನಣ್ಣ ಅವರಿಗೆ ತಿಳಿದಿಲ್ಲವೇನೋ ಎಂದು ಪ್ರಶ್ನಿಸಿದ್ದಾರೆ.