ಜಿಲ್ಲೆ

ಕೊಡಗಿನ ಪರ್ಯಾಯ ರಸ್ತೆಯಲ್ಲಿಯೂ (ಮೇಕೇರಿ) ಬಿರುಕು

ಮಡಿಕೇರಿ: ಮಂಗಳೂರು -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ -೭೫ ಶಿರಾಡಿ ಘಾಟ್ ಬಳಿ ಭೂ ಕುಸಿತ ಉಂಟಾದ ಹಿನ್ನಲೆ ಮಂಗಳೂರಿ ನಿಂದ ರಾಜ್ಯ ರಾಜಧಾನಿ ಬೆಂಗಳೂರಿಗೆ ಹೋಗಲು ಬಹುತೇಕರು ಅವಲಂಬಿಸಿದ್ದ ಮಡಿಕೇರಿ ರಸ್ತೆಯಲ್ಲೂ ಕುಸಿತ ಭೀತಿ ಉಂಟಾಗಿದೆ. ಹೀಗಾಗಿ ಆ ಮಾರ್ಗದಲ್ಲೂ ಬೃಹತ್ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.


ಭಾನುವಾರ ಬೆಳಗ್ಗೆಯಷ್ಟೇ ಮಡಿಕೇರಿಯಲ್ಲಿ ಕೊಡಗು ಜಿಲ್ಲಾಧಿಕಾರಿ ಕಚೇರಿಯ ತಡೆಗೋಡೆಯ ಸ್ಲ್ಯಾಬ್‌ಗಳು ಹೊರ ಚಾಚಿದ್ದರಿಂದ ಮಾಣಿ ಮೈಸೂರು ಮಾರ್ಗದ ಈ ಭಾಗದಲ್ಲಿ ರಸ್ತೆ ಸಂಚಾರ ನಿಷೇಧಿಸಿ ಮಡಿಕೇರಿ- ಮೇಕೇರಿ- ಅಪ್ಪಂಗಾಲ- ತಾಳತ್ತಮನೆ ಮಾರ್ಗದಲ್ಲಿ ಅವಕಾಶ ಮಾಡಿಕೊಡಲಾಗಿತ್ತು.
ಇದೀಗ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದ್ದ ಪರ್ಯಾಯ ರಸ್ತೆಯಲ್ಲೂ (ಮೇಕೇರಿ) ಬಿರುಕು ಮೂಡಿದ್ದು, ಕೂಡಲೇ ಕಾರ್ಯತತ್ಪರರಾದ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ರಸ್ತೆಯ ಒಂದು ಬದಿ ಮಾತ್ರ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಆದರೇ ಭಾರಿ ವಾಹನಗಳ ಸಂಚಾರವನ್ನು ಸೋಮವಾರ ರಾತ್ರಿಯಿಂದಲೇ ನಿಷೇಧಿಸಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿವೈಎಸ್ಪಿ ಗಜೇಂದ್ರ ಪ್ರಸಾದ್, ಬಿರುಕು ಬಿಟ್ಟಿರುವ ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ. ಸದ್ಯ, ಖಾಸಗಿ ಭಾರಿ ವಾಹನ ಸಂಚರಿಸಲು ಬಿಟ್ಟಿಲ್ಲ. ಕೆಎಸ್‌ಆರ್‌ಟಿಸಿಯ ಪ್ರಯಾಣಿಕ ವಾಹನಗಳಿಗೆ ಅವಕಾಶ ನೀಡಲಾಗಿದೆ. ಈಗ ಮಂಗಳೂರಿಗೆ ತೆರಳುವ ಖಾಸಗಿ ಭಾರಿ ವಾಹನಗಳು ಶಿವಮೊಗ್ಗ ಹೊನ್ನಾವರ ಮಾರ್ಗದಲ್ಲಿ ಮಾತ್ರವೇ ಸಂಚರಿಸಬೇಕಿದೆ.