ಮಡಿಕೇರಿ: ತಿತಿಮತಿಯಲ್ಲಿ ಕಪ್ಪು ಬಾವುಟ ಪ್ರದರ್ಶನ…. ಮಡಿಕೇರಿ, ಗುಡ್ಡೆಹೊಸೂರಿನಲ್ಲಿ ಕಾರಿನ ಮೇಲೆ ಮೊಟ್ಟೆ ಎಸೆತ…. ಮೊಳಗಿದ ಗೋ ಬ್ಲಾಕ್ ಸಿದ್ದರಾಮಯ್ಯ ಘೋಷಣೆ…. ಗುರುವಾರ ಕೊಡಗಿಗೆ ಆಗಮಿಸಿದ್ದ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಸಂಘ ಪರಿವಾರದ ಕಾರ್ಯಕರ್ತರಿಂದ ವಿವಿಧೆಡೆ ಪ್ರತಿರೋಧ ವ್ಯಕ್ತವಾಯಿತು.
ಟಿಪ್ಪು ಜಯಂತಿ ಆಚರಣೆ ಮೂಲಕ ಹಿಂದುಗಳ ಹತ್ಯೆಗೆ ಕಾರಣರಾಗಿರುವ, ಕೊಡವರನ್ನು ಗೋಭಕ್ಷಕರೆಂದು ಬಿಂಬಿಸಿರುವ, ಸ್ವಾತಂತ್ರೃ ಹೋರಾಟಗಾರ ವೀರ ಸಾವರ್ಕರ್ ಅವರನ್ನು ಅಪಮಾನಿಸಿರುವ ಸಿದ್ದರಾಮಯ್ಯ ಕೊಡಗಿಗೆ ಭೇಟಿ ನೀಡುವ ವೇಳೆ ಪ್ರತಿಭಟನೆಗೆ ಸಂಘ ಪರಿವಾರ ಕರೆ ನೀಡಿತ್ತು.
ಕಪ್ಪುಬಾವುಟ ಪ್ರದರ್ಶನ
ಕೊಡಗಿನ ಗಡಿಭಾಗ ತಿತಿಮತಿ ಮೂಲಕ ಸಿದ್ದರಾಮಯ್ಯ ಪ್ರವೇಶಿಸುತ್ತಿದ್ದಂತೆ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ ಜೋಯಪ್ಪ ನೇತೃತ್ವದಲ್ಲಿ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರು. ಮುಖ್ಯರಸ್ತೆಯಲ್ಲಿ ಕಾರು ತೆರಳುತ್ತಿದ್ದಂತೆ ಕಾರ್ಯಕರ್ತನೊಬ್ಬ ತನ್ನ ಕೈಯಲ್ಲಿದ್ದ ವೀರ ಸಾವರ್ಕರ್ ಭಾವಚಿತ್ರ ಸಿದ್ದರಾಮಯ್ಯ ಮಡಿಲಲ್ಲಿ ಇಟ್ಟರು.
ರಾಜ್ಯದಲ್ಲಿ ಮತಾಂಧ ಟಿಪ್ಪು ಜಯಂತಿ ಆಚರಣೆ ಜಾರಿಗೆ ತಂದು ಅಮಾಯಕರ ಕೊಲೆಗೆ ಕಾರಣರಾದ ಟಿಪ್ಪು ಭಕ್ತ ಸಿದ್ದರಾಮಯ್ಯ ಕೊಡಗಿಗೆ ಕಾಲಿಡುವುದರಿಂದ ಮತ್ತೆ ಕೊಡಗಿನ ಶಾಂತಿ ಭಂಗವಾಗಲಿದೆ. ಕೊಡವರನ್ನು ಗೋಮಾಂಸ ಭಕ್ಷಕರೆಂದು ಬಿಂಬಿಸಿರುವ ಹಿಂದು ವಿರೋಧಿ ಸಿದ್ದರಾಮಯ್ಯ ಕೊಡಗಿಗೆ ಕಾಲಿಡಲು ಅಯೋಗ್ಯರಾಗಿದ್ದಾರೆಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ಆಕ್ರೋಶ ವ್ಯಕ್ತ ಪಡಿಸಿದರು.
ಕಾರಿಗೆ ಮೊಟ್ಟೆ ಎಸೆತ
ಮಡಿಕೇರಿಯ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಸಿದ್ದರಾಮಯ್ಯ ಇದ್ದ ಕಾರು ತೆರಳುತ್ತಿದ್ದಂತೆ ಸಂಘ ಪರಿವಾರದ ಕಾರ್ಯಕರ್ತರು ಮೊಟ್ಟೆ ಎಸೆಯಲಾರಂಭಿಸಿದರು. ಬಿಜೆಪಿ ಕಾರ್ಯಕರ್ತರು ಎಸೆದ ಮೊಟ್ಟೆವೊಂದು ಪತ್ರಿಕಾ ಛಾಯಾಗ್ರಾಹಕ ಲಕ್ಷ್ಮೀಶ್ ಅವರ ತಲೆಗೆ ಹೊಡೆಯಿತು.
ಮಡಿಕೇರಿಯಿಂದ ಕುಶಾಲನಗರದತ್ತ ತೆರಳುತ್ತಿದ್ದ ಸಿದ್ದರಾಮಯ್ಯ ಅವರಿದ್ದ ಕಾರಿಗೆ ಗುಡ್ಡೆಹೊಸೂರಿನಲ್ಲಿ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಎಸೆದು ಆಕ್ರೋಶ ವ್ಯಕ್ತ ಪಡಿಸಿದರು. ರಸ್ತೆ ಬದಿ ವೀರ ಸಾವರ್ಕರ್ ಭಾವಚಿತ್ರ ಹಿಡಿದು, ಸಿದ್ದರಾಮಯ್ಯ ವಿರುದ್ಧ ಧಿಕ್ಕಾರ ಕೂಗಿದರು. ರಸ್ತೆ ಬದಿ ಸಂಚಾರಕ್ಕೂ ಅಡ್ಡಿ ಪಡಿಸಿದ್ದ ವೇಳೆ ಪೊಲೀಸರು- ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ, ನೂಕಾಟ ನಡೆಯಿತು.
ಪೊಲೀಸರು ಬಿಜೆಪಿಗರನ್ನು ಹೊತ್ತೊಯ್ದು ಪೊಲೀಸ್ ವಾಹನಕ್ಕೆ ಹತ್ತಿಸಿದರು. ಸಿದ್ದರಾಮಯ್ಯ ಇದ್ದ ಕಾರಿಗೆ ಕಲ್ಲು ಎಸೆಯುವ ಪ್ರಯತ್ನಕ್ಕೆ ಪೊಲೀಸರು ಆಕ್ಷೇಪ ವ್ಯಕ್ತ ಪಡಿಸಿದರು. ಈ ಸಂದರ್ಭ ಪೊಲೀಸರ ವಿರುದ್ಧ ಬಿಜೆಪಿಗರು ಘೋಷಣೆ ಕೂಗಿದರು.
ನಾವು ಮನಸ್ಸು ಮಾಡಿದರೆ ಸಿಎಂ ತಿರುಗಾಡಲು ಸಾಧ್ಯವಿಲ್ಲ
ನಾವು ಮನಸ್ಸು ಮಾಡಿದರೆ ಮುಖ್ಯಮಂತ್ರಿ, ಸಚಿವರು ಸೇರಿದ್ದಂತೆ ಬಿಜೆಪಿಯವರಿಗೆ ರಸ್ತೆಯಲ್ಲಿ ತಿರುಗಾಡಲು ಸಾಧ್ಯವಾಗುವುದಿಲ್ಲ ಎಂದು ತಮ್ಮ ಕೊಡಗು ಭೇಟಿಗೆ ಸಂಘ ಪರಿವಾರ ಒಡ್ಡಿದ್ದ ಅಡೆತಡೆಗೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.
ನನ್ನ ವಿರುದ್ಧ ಪ್ರತಿಭಟನೆ ಮಾಡಲು ಹಣಕೊಟ್ಟು ಕರೆಸಿದ್ದಾರೆ. ಇದು ಹೇಡಿಗಳು ಮಾಡುವ ಕೆಲಸ. ಇವರಿಗೆ ಸರ್ಕಾರ ನಡೆಸಲು ಬರುವುದಿಲ್ಲ. ರಾಜ್ಯದಲ್ಲಿ ಸರ್ಕಾರವೇ ಇಲ್ಲ ಎಂದು ಕಿಡಿಕಾರಿದರು. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶ ಇದೆ. ಆದರೆ, ಇವರು ಮಾಡಿದ ರೀತಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಸರ್ಕಾರ ಸತ್ತಿದೆ. ಜನರ ಗಮನ ಬೇರೆಡೆ ಸೆಳೆಯುವ ಉದ್ದೇಶದಿಂದ ಸಣ್ಣತನದಿಂದ ವರ್ತಿಸಿದ್ದಾರೆ. ನಾನು ಸಿಎಂ ಆಗಿದ್ದಾಗ ಎಲ್ಲಾ ಕಾಲ ದಲ್ಲಿಯೂ ಟಿಪ್ಪು ಜಯಂತಿ ಮಾಡಿದ್ದೇನೆ. ಆವಾಗ ಇವರು ಎಲ್ಲಿಗೆ ಹೋಗಿದ್ದರು. ಅಲ್ಲಿಂದ ನಾನು ಕೊಡಗಿಗೂ ಭೇಟಿಗೆ ಎಷ್ಟೋ ಸಲ ಬಂದಿ ದ್ದೇನೆ. ಆವಾಗ ಬಿಜೆಪಿ ಕಾರ್ಯಕರ್ತರು ಸತ್ತು ಹೋಗಿದ್ದರೆ ಎಂದು ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಭವನದ ಎದುರು ಕಳಪೆ ಗುಣಮಟ್ಟದ ತಡೆಗೋಡೆ ನಿರ್ಮಿಸಿದ್ದು, ಇದರಲ್ಲಿ ಗುತ್ತಿಗೆದಾರರೊಂದಿಗೆ ಶಾಸಕರು ಶಾಮೀಲಾಗಿ ದ್ದಾರೆ. ಇದನ್ನು ನಾನು ವೀಕ್ಷಿಸುವುದನ್ನು ತಡೆಯಲು ಕಪ್ಪುಬಾವುಟ ಪ್ರದರ್ಶಿಸಿದ್ದಾರೆ. ಈ ಬಾರಿ ಕೊಡಗಿನ ಎರಡೂ ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಅದಕ್ಕೆ ಹತಾಸೆಯಿಂದ ಹೀಗೆ ಮಾಡಿಸಿದ್ದಾರೆಂದು ಅಸಮಾಧಾನ ವ್ಯಕ್ತ ಪಡಿಸಿದರು.