ಮಡಿಕೇರಿ: ಕೊಡಗು ಜಿಲ್ಲಾಧಿಕಾರಿ ಭವನ ಎದುರು ನಿರ್ಮಿಸಿರುವ ತಡೆಗೋಡೆ ಕಾಮಗಾರಿ ಕಳಪೆಯಾಗಿದೆ. ಗುತ್ತಿಗೆದಾರ, ಶಾಸಕರು ಕಳಪೆ ಕಾಮಗಾರಿಯಲ್ಲಿ ಶಾಮೀಲಾಗಿದ್ದಾರೆ. ಇದನ್ನು ಮುಂದಿನ ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಜಿಲ್ಲಾಧಿಕಾರಿ ಭವನದ ಎದುರು ಗುಣಮಟ್ಟದ ತಡೆಗೋಡೆ ನಿರ್ಮಿಸಿದ್ದಾರೆಂದು ವ್ಯಂಗ್ಯವಾಡಿದರು. ಭವನ ನಿರ್ಮಾಣಕ್ಕೆ ೫.೫೦ ಕೋಟಿ ರೂ. ವೆಚ್ಚ ಮಾಡಿದ್ದು, ತಡೆಗೋಡೆಗೆ ೭.೫೦ ಕೋಟಿ ರೂ. ವಿನಿಯೋಗಿಸಿದ್ದಾರೆಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
ಮುಖ್ಯಮಂತ್ರಿ ಕೊಡಗಿಗೆ ಭೇಟಿ ನೀಡಿದ್ದ ಸಂದರ್ಭ ಕಳಪೆ ತಡೆಗೋಡೆ ತೋರಿಸಲಿಲ್ಲ. ರಾಜ್ಯದಲ್ಲಿ ಶೇ.೪೦ ಕಮಿಷನ್ ಸರ್ಕಾರ ಇರುವುದ ರಿಂದ ಕಳಪೆ ತಡೆಗೋಡೆ ನಿರ್ಮಾಣವಾಗಿದೆ. ಗುತ್ತಿಗೆದಾರ, ಬಿಜೆಪಿ ಸೇರಿ ತಡೆಗೋಡೆ ಹೆಸರಿನಲ್ಲಿ ಸರ್ಕಾರದ ಹಣ ಲೂಟಿ ಮಾಡಿದೆ ಎಂದು ಆರೋಪಿಸಿದರು.
೨೦೧೮, ೨೦೧೯, ೨೦೨೦ ರಲ್ಲಿ ಪ್ರಕೃತಿ ವಿಕೋಪದಿಂದ ನಷ್ಟಕ್ಕೆ ಒಳಗಾಗಿರುವವರಿಗೆ ಇನ್ನೂ ಪರಿಹಾರ ಕೊಟ್ಟಿಲ್ಲ. ಕೆಲವರಿಗೆ ಪರಿಹಾರ ರೂಪದಲ್ಲಿ ನೀಡಿದ ಚೆಕ್ ನಗದೀಕರಣವಾಗಿಲ್ಲ. ೨೦೧೮, ೨೦೧೯ ರಲ್ಲಿ ಆದ ನಷ್ಟಕ್ಕೆ ನನಗೆ ಪರಿಹಾರ ನೀಡಿಲ್ಲ. ಈಗ ಮನೆಯೂ ಇಲ್ಲ. ಜಾಗವೂ ಇಲ್ಲದ ಸ್ಥಿತಿಯಲ್ಲಿದ್ದೇನೆಂದು ಸಂತ್ರಸ್ತ ಕರ್ತೋಜಿ ನಿವಾಸಿ ಖಾದರ್ ಹೇಳಿದ್ದಾರೆಂದರು.
ಸ್ಥಳೀಯರ ವಿರೋಧದ ನಡುವೆಯೂ ಪಯಸ್ವಿನಿ ನದಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟು ನಿರ್ಮಿಸಲಾಗಿದೆ. ಇದರಿಂದ ಕಿಂಡಿ ಅಣೆಕಟ್ಟೆಯಲ್ಲಿ ಮರು ಸಿಕ್ಕಿಹಾಕಿಕೊಂಡು ಸ್ಥಳೀಯರು ತೊಂದರೆಗೆ ಸಿಲುಕಿದ್ದಾರೆ. ಗುಡ್ಡ ಕುಸಿತದಿಂದ ಕೊಯನಾಡು ಶಾಲೆ ಹಾನಿಗೀಡಾಗಿದ್ದು, ಇದೇ ದಾರಿ ಯಲ್ಲಿ ತೆರಳಿದ್ದ ಮುಖ್ಯಮಂತ್ರಿ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆಂದರು.
೨ನೇ ಮೊಣ್ಣಂಗೇರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಸೇತುವೆ ಅತ್ಯಂತ ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ. ಸೇತುವೆ ಕಾಮಗಾರಿ ಪೂರ್ಣ ಗೊಳ್ಳದರಿಂದ ಸ್ಥಳೀಯರಿಗೆ ತೊಂದರೆ ಆಗುತ್ತಿದೆ ಎಂದರು. ಪ್ರಕೃತಿ ವಿಕೋಪದಿಂದ ಪ್ರತಿವರ್ಷ ಕೊಡಗಿನಲ್ಲಿ ಸಂಕಷ್ಟ ಎದುರಾಗುತ್ತಿದೆ. ಗುಡ್ಡ ಕುಸಿತ ತಡೆಯಲು ಸರ್ಕಾರ ಶಾಶ್ವತ ಕ್ರಮ ತೆಗೆದುಕೊಂಡಿಲ್ಲ ಎಂದು ದೂಷಿಸಿದರು.
ನಮ್ಮ ಸರ್ಕಾರ ಇದ್ದ ಸಂದರ್ಭ ಕೊಡಗಿನ ಅಭಿವೃದ್ಧಿಗೆ ಅನುದಾನ ಒದಗಿಸಿದ್ದೇವೆ. ಆದರೆ, ಬಿಜೆಪಿ ಸರ್ಕಾರದಿಂದ ಏನೂ ಆಗುತ್ತಿಲ್ಲ. ಜಿಲ್ಲೆಯಲ್ಲಿ ಬಿಜೆಪಿ ಶಾಸಕರೇ ಇದ್ದರೂ ಪ್ರಯೋಜನವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಎರಡು ಕ್ಷೇತ್ರದಲ್ಲಿಯೂ ಕಾಂಗ್ರೆಸ್ ಗೆಲ್ಲಿಸಲು ಕೊಡಗಿನ ಜನತೆ ನಿರ್ಧರಿಸಿದ್ದಾರೆಂದರು.
ಡಿಸೆಂಬರ್‌ನಲ್ಲಿ ಅಭ್ಯರ್ಥಿ ಆಯ್ಕೆ ಅಂತಿಮಗೊಳಿಸಲಾಗುವುದು. ಸ್ಥಳೀಯರ ಅಭಿಪ್ರಾಯದೊಂದಿಗೆ ಅಭ್ಯರ್ಥಿ ಆಯ್ಕೆ ಮಾಡಲಾಗುವುದು. ಗೆಲುವು ಸಾಧಿಸುವುದು ಮುಖ್ಯ ಮಾನದಂಡ ಎಂದು ಸಿದ್ದರಾಮಯ್ಯ ಹೇಳಿದರು. ಗೋಷ್ಠಿಯಲ್ಲಿ ಸಮಾಜಿ ಸಚಿವರಾದ ಎಂ.ಸಿ. ನಾಣಯ್ಯ, ಬಿ.ಎ. ಜೀವಿಜಯ, ಮಾಜಿ ಎಂಎಲ್ಸಿ ಶಾಂತೆಯಂಡ ವೀಣಾ ಅಚ್ಚಯ್ಯ, ಕಾಂಗ್ರೆಸ್ ಮುಖಂಡರಾದ ಎ.ಎಸ್. ಪೊನ್ನಣ್ಣ, ಎಚ್.ಎಸ್. ಚಂದ್ರಮೌಳಿ, ಡಾ.ಮಂಥರ್ ಗೌಡ ಇದ್ದರು.