ಜಿಲ್ಲೆ

ಮೊಟ್ಟೆ ಎಸೆತಕ್ಕೂ ಬಿಜೆಪಿಗೂ ಸಂಬಂಧವಿಲ್ಲ

reportermys

ಮಡಿಕೇರಿ: ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೆರಳುತ್ತಿದ್ದ ಕಾರಿಗೆ ಮೊಟ್ಟೆ ಎಸೆದಿರುವ ಪ್ರಕರಣಕ್ಕೂ ಬಿಜೆಪಿ- ಹಿಂದು ಸಂಘಟನೆಗಳಿಗೆ ಸಂಬಂಧವಿಲ್ಲ ಎಂದು ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಹೇಳಿದ್ದಾರೆ.

ಅವರಿಗೆ ಯಾರೂ ಅಗೌರವ ತೋರಿಸಿಲ್ಲ. ಕೊಡಗಿಗೆ ಬರುವ ಮುನ್ನ ಶಿವಮೊಗ್ಗದಲ್ಲಿ ನಡೆದ ಅಹಿತಕರ ಘಟನೆಗೆ ಸಂಬಂಧಿಸಿದ್ದಂತೆ ಸಿದ್ದರಾಮಯ್ಯ ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತೆಂದು ಶುಕ್ರವಾರ ಸುದ್ದಿಗಾರರಿಗೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸ್ವಾತಂತ್ರೃ ಅಮೃತ ಮಹೋತ್ಸವ ಆಚರಣೆ ವೇಳೆ ಟಿಪ್ಪು ಫೋಟೋ ಹಾಕಿಲ್ಲ ಎಂದು ಆಕ್ಷೇಪ ವ್ಯಕ್ತ ಪಡಿಸಿದ್ದರು. ಇದರೊಂದಿಗೆ ಸ್ವಾತಂತ್ರೃ ಹೋರಾಟಗಾರ ವೀರ ಸಾವರ್ಕರ್‌ಗೆ ಅವಮಾನ ಆಗುವ ಹೇಳಿಕೆ ನೀಡಿದ್ದರು. ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಏಕೆ ಹಾಕಿ ದ್ದೆಂಬ ಹೇಳಿಕೆಗೆ ಅಸಮಾಧಾನ ವ್ಯಕ್ತವಾಗಿತ್ತು. ಇದರಿಂದ ಅವರ ವಿರುದ್ಧ ಪ್ರತಿಭಟನೆ ನಡೆದಿತ್ತೆಂದು ಹೇಳಿದ್ದಾರೆ.

ಟಿಪ್ಪು ಬಗ್ಗೆ ಕೊಡಗಿನ ಜನರಲ್ಲಿ ಆಕ್ರೋಶ ಇನ್ನೂ ಮರೆಯಾಗಿಲ್ಲ. ಜನ ಆಕ್ರೋಶಿತರಾಗಿ ಪ್ರಜಾಪ್ರಭುತ್ವ ರೀತಿ ಕಪ್ಪುಬಾವುಟ ಹಿಡಿದು ಪ್ರತಿಭಟನೆ ಮಾಡಿದ್ದಾರೆ. ಸಿದ್ದರಾಮಯ್ಯ ಕಾರಿಗೆ ಗುದ್ದಿರುವ ಬಗ್ಗೆ ಏಕೆ ದೂರು ನೀಡಲಿಲ್ಲ. ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸು ವಂತೆ ಪೊಲೀಸರಿಗೆ ಧಮಕ್ಕಿ ಹಾಕಿರುವುದು ಸರಿಯಲ್ಲ ಎಂದಿದ್ದಾರೆ.

ಮಡಿಕೇರಿ ಚಲೋ ಮಾಡಲು, ಎಸ್ಪಿ ಕಚೇರಿಗೆ ಮುತ್ತಿಗೆ ಹಾಕಲು ಅವರಿಗೆ ಹಕ್ಕಿದೆ. ಆದರೆ, ಕಾನೂನು ವಾಹಿರವಾಗಿ ನಡೆದುಕೊಂಡಲ್ಲಿ ಅವರ ಮೇಲೆ ಕಾನೂನು ತನ್ನದೇ ಆದ ಕ್ರಮ ತೆಗೆದುಕೊಳ್ಳುತ್ತದೆ ಎಂದು ಎಚ್ಚರಿಸಿದ್ದಾರೆ.

ಜಿಲ್ಲಾಧಿಕಾರಿ ಭವನ ಎದುರಿನ ತಡೆಗೋಡೆ ಕಾಮಗಾರಿ ಕಳಪೆಯಾಗಿದ್ದಲ್ಲಿ ಲೋಕಾಯುಕ್ತ ಸೇರಿದ್ದಂತೆ ತಮಗೆ ಬೇಕಾದ ಏಜೆನ್ಸಿ ಮೂಲಕ ತನಿಖೆ ನಡೆಸಲಿ. ತನಿಖೆಯನ್ನು ಸ್ವಾಗತಿಸುತ್ತೇನೆ. ಆದರೆ, ಬಾಯಿಗೆ ಬಂದಂತೆ ಮಾತನಾಡಬಾರದು. ನಾವೇನು ಗುತ್ತಿಗೆದಾರರಾ ಎಂದು ಕೆ.ಜಿ. ಬೋಪಯ್ಯ ಪ್ರಶ್ನಿಸಿದ್ದಾರೆ.

ಕೊಡಗು ಕಾಂಗ್ರೆಸ್ ಮುಕ್ತ ಜಿಲ್ಲೆಯಾಗಿ ಹಲವು ವರ್ಷ ಆಗಿದೆ. ಕೊಡಗಿನಲ್ಲಿ ಕಾಂಗ್ರೆಸ್ ಎಲ್ಲಿದೆ ಎಂದು ಹುಡುಕಬೇಕಾಗಿದೆ. ಟಿಪ್ಪು ಬಗ್ಗೆ ಜಿಲ್ಲಾ ಕಾಂಗ್ರೆಸ್ ತನ್ನ ನಿಲುವು ಮೊದಲು ತಿಳಿಸಲಿ.

**
ಮಾಜಿ ಮುಖ್ಯಮಂತ್ರಿಯಾಗಿರುವ ಸಿದ್ದರಾಮಯ್ಯ ಹೇಳಿಕೆ ನೀಡುವಾಗ ಸ್ವಲ್ಪ ತೂಕ ಇರಬೇಕು. ರಾಜ್ಯದಲ್ಲಿ ಇತ್ತೀಚೆಗೆ ನಡೆದಿರುವ ಹತ್ಯೆ, ಚೂರಿ ಇರಿತ ಪ್ರಕರಣದ ಹಿಂದೆ ಸಿದ್ದರಾಮಯ್ಯ ಅವರ ಪ್ರಚೋದನಕಾರಿ ಹೇಳಿಕೆ ಕಾರಣವಾಗಿದೆ. ಕತ್ತಲೆ ಕೋಣೆಯಲ್ಲಿ ೧೪ ವರ್ಷ ಕಳೆದ ಸ್ವಾತಂತ್ರೃ ಹೋರಾಟಗಾರ ವೀರ ಸಾವರ್ಕರ್ ಅವರಿಗೆ ಅವಮಾನವಾಗಿ ಹೇಳಿಕೆ ನೀಡಿರುವುದು ಸರಿಯಲ್ಲ. ಕೆ.ಜಿ. ಬೋಪಯ್ಯ, ವಿರಾಜಪೇಟೆ ಶಾಸಕ.