ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿ ಕ್ಷೇತ್ರ ಸೂಕ್ಷ್ಮ ಕ್ಷೇತ್ರವಾಗಿ ಮಾರ್ಪಟ್ಟಿದೆ. ಏತನ್ಮಧ್ಯೆ, ತಲಕಾವೇರಿ- ಭಗಂಡೇಶ್ವರ ಕ್ಷೇತ್ರವನ್ನು ದೇವರನ್ನು ಸಂಪ್ರದಾಯ ಬದ್ಧವಾಗಿ ಆರಾಧಿಸುವ ಕೊಡವ ಸಮುದಾಯಕ್ಕೆ ಒಪ್ಪಿಸಬೇಕೆಂಬ ಬೇಡಿಕೆ ವ್ಯಕ್ತವಾಗಿದೆ. ಪ್ರಸ್ತುತ ಮುಜರಾಯಿ ಇಲಾಖೆ ಸ್ವಾಧೀನದಲ್ಲಿರುವ ಕ್ಷೇತ್ರ ರಾಜಕೀಯ ಸಂಘರ್ಷಕ್ಕೆ ವೇದಿಕೆಯಾಗಿದೆ.
ಕಾವೇರಿ ಮಾತೆಯನ್ನು ಕುಲದೇವಿಯಾಗಿ ಮನೆ- ಮನದಲ್ಲಿ ಆರಾಧಿಸುವ ಕೊಡವ ಸಮುದಾಯವರು ತಮ್ಮನ್ನು ಕ್ಷೇತ್ರದಿಂದ ದೂರ ಇಡುವ ಪ್ರಯತ್ನ ರಾಜಕೀಯ ನೆಲೆಗಟ್ಟಿನಲ್ಲಿ ನಡೆಯುತ್ತಿದೆ ಎಂಬ ದುಗುಡದಲ್ಲಿದ್ದಾರೆ. ಹಲವು ದಶಕದಿಂದ ತಲಕಾವೇರಿ- ಭಗಂಡೇಶ್ವರ ಕ್ಷೇತ್ರದ ತಕ್ಕಾಮೆ ಹೊಂದಿರುವ ಅರೆಭಾಷೆ ಗೌಡ ಸಮುದಾಯದವರು ಕೊಡವರಿಗೆ ತಕ್ಕಾಮೆ ನೀಡಬೇಕೆಂಬ ಬೇಡಿಕೆಯೊಂದಿಗೆ ಕ್ಷೇತ್ರದಲ್ಲಿ ಗೊಂದಲ ಮೂಡಿಸುವ ಕೆಲಸ ನಡೆಯುತ್ತಿದೆ ಎಂದು ಅಸಮಾಧಾನದಲ್ಲಿದ್ದಾರೆ.
ಮಂಡೀರ, ಮಣವಟ್ಟೀರ, ಪಟ್ಟಮಾಡ ಕೊಡವ ಕುಟುಂಬಸ್ಥರು ತಲಕಾವೇರಿ ಕ್ಷೇತ್ರದ ತಕ್ಕಾಮೆ ಹೊಂದಿದ್ದರು. ಅಮ್ಮ ಕೊಡವ ಸಮುದಾಯದವರು ಕ್ಷೇತ್ರದಲ್ಲಿ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದರು. ತಕ್ಕಾಮೆ ಹಾಗೂ ಪೂಜೆ ಮಾಡುವ ಪ್ರಕ್ರಿಯೆಯಲ್ಲಿ ನಮ್ಮನ್ನೂ ಭಾಗವನ್ನಾಗಿ ಮಾಡಬೇಕೆಂಬ ಕೂಗು ಹಲವು ವರ್ಷದಿಂದ ಎದ್ದಿದೆ.
ಮುಜರಾಯಿ ಇಲಾಖೆ ಸ್ವಾಧೀನದಲ್ಲಿದ್ದ ಹಲವು ದೇವಾಲಯಗಳನ್ನು ನ್ಯಾಯಾಲಯದಲ್ಲಿ ದಾವೆ ಹೂಡುವುದರ ಮೂಲಕ ಭಕ್ತರ ಜವಾಬ್ದಾರಿಗೆ ಪಡೆದುಕೊಂಡಿರುವ ಮಾದರಿ ತಲಕಾವೇರಿ- ಭಗಂಡೇಶ್ವರ ಕ್ಷೇತ್ರವನ್ನು ಕೊಡವರ ಸ್ವಾಧೀನಕ್ಕೆ ಪಡೆಯುವ ನಿಟ್ಟಿನಲ್ಲಿ ಉನ್ನತ ಮಟ್ಟದಲ್ಲಿ ಪ್ರಯತ್ನ ನಡೆಯುತ್ತಿದೆ. ಈ ಬಗ್ಗೆ ಸಮಗ್ರ ದಾಖಲೆ ಸಂಗ್ರಹ ಮಾಡುವುದರೊಂದಿಗೆ ಸುಪ್ರೀಂಕೋಟರ್‌ನಲ್ಲಿ ದಾವೆ ಹೂಡುವ ಚರ್ಚೆ ನಡೆದಿದೆ.
ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಮಾಡುವುದರ ಮೂಲಕ ಗತವೈಭವ ಮರಳಿಸುವ ಪ್ರಯತ್ನ ಸಾಗಿದೆ. ಅದೇ ಮಾದರಿ ಕೊಡವರು ಮತ್ತು ಅಮ್ಮ ಕೊಡವರಿಗೆ ತಲಕಾವೇರಿ- ಭಗಂಡೇಶ್ವರ ಕ್ಷೇತ್ರದಲ್ಲಿ ಪ್ರಾಮುಖ್ಯತೆ ನೀಡಬೇಕು. ಕ್ಷೇತ್ರಕ್ಕೆ ಭಕ್ತರಾಗಿ ಎಲ್ಲರಿಗೂ ಬರಲು ಅವಕಾಶ ಇರುತ್ತದೆ. ಆದರೆ, ಕ್ಷೇತ್ರದ ವಿಧಿವಿಧಾನಗಳು ಮೂಲದಲ್ಲಿ ನಡೆಯುತ್ತಿದ್ದಂತೆ ನಡೆಯಲು ಅವಕಾಶ ಮಾಡಿಕೊಡ ಬೇಕೆಂಬ ಬೇಡಿಕೆ ವ್ಯಕ್ತವಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದ್ದಂತೆ ಲೌಡ್ ಸ್ಪೀಕರ್‌ಗೆ ಅಭಿಪ್ರಾಯ ಸಂಗ್ರಹಿಸಲಾಗಿದೆ.
**
ತಲಕಾವೇರಿ ಕ್ಷೇತ್ರವನ್ನು ಸರ್ಕಾರದಿಂದ ಮುಕ್ತಗೊಳಿಸಬೇಕೆಂದು ಹಿಂದಿನಿಂದಲೂ ಒತ್ತಾಯಿಸುತ್ತಾ ಬಂದಿದ್ದೇವೆ. ಮುಜರಾಯಿ ಸ್ವಾಧೀನ ದಲ್ಲಿರುವುದರಿಂದ ರಾಜಕೀಯ ಕ್ಷೇತ್ರವಾಗುತ್ತಿದೆ. ರಾಜಕೀಯದಲ್ಲಿ ಸ್ಥಾನಮಾನ ಸಿಗದೇ ಅತೃಪ್ತರಾಗಿರುವವರನ್ನು ಅಧ್ಯಕ್ಷರನ್ನಾಗಿ ನೇಮಿಸ ಲಾಗುತ್ತಿದೆ. ಧಾರ್ಮಿಕ ಪಾವಿತ್ರ್ಯತೆ ಉಳಿಯಬೇಕಾದರೆ ಸಂಪ್ರದಾಯ ಬದ್ಧವಾದ ಸಮುದಾಯ ಈ ಕ್ಷೇತ್ರವನ್ನು ನಡೆಸಿಕೊಂಡು ಹೋಗ ಬೇಕು. ಸಂಪ್ರದಾಯ ಬದ್ಧವಾದ ಸಮುದಾಯ ನಡೆಸುವುದು ಎಲ್ಲಾ ಜಾತಿ ಧರ್ಮದಿಂದ ಮೀರಿದಾಗಿರುತ್ತದೆ. ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಅಧ್ಯಕ್ಷರು,ಯುನೈಟೆಡ್ ಕೊಡವ ಆರ್ಗನೈಶೇಷನ್.
**
ಇಲ್ಲಿ ಸರ್ಕಾರ ಮತ್ತು ಮುಜರಾಯಿ ಇಲಾಖೆ ಕ್ಷೇತ್ರವನ್ನು ನಡೆಸುತ್ತಿರುವುದರಿಂದ ಧಾರ್ಮಿಕ ಪಾವಿತ್ರ್ಯತೆಗೆ ಧಕ್ಕೆಯಾಗುತ್ತಿದೆ. ವಸ್ತ್ರ ಸಂಹಿತೆ ಅನುಸರಿಸುತ್ತಿಲ್ಲ.ಧಾರ್ಮಿಕ ಪ್ರಶಾಂತ ವಾತಾವರಣ ಕಂಡು ಬರುತ್ತಿಲ್ಲ. ಈ ಕ್ಷೇತ್ರಕ್ಕೆ ಧಾರ್ಮಿಕವಾಗಿ ಹಾಗೂ ಭಾವನಾತ್ಮಕವಾಗಿ ಸಂಬಂಧ ಉಳ್ಳ ಜನಾಂಗ ಈ ಕ್ಷೇತ್ರವನ್ನು ನಡೆಸಬೇಕು. ಸರ್ಕಾರ ಹಾಗೂ ಮುಜರಾಯಿ ಇಲಾಖೆಯಿಂದ ಮುಕ್ತಗೊಳಿಸಿದಾಗ ಮಾತ್ರ ರಾಜಕೀಯ ಕ್ಷೇತ್ರವಾಗದೇ ಧಾರ್ಮಿಕ ಕ್ಷೇತ್ರವಾಗಿ ಉಳಿಯುತ್ತದೆ. ಕಾಳಿಮಾಡ ಮೋಟಯ್ಯ, ಅಧ್ಯಕ್ಷರು, ಕೊಡವ ಸಮಾಜ, ಪೊನ್ನಂಪೇಟೆ.
**
ಕುಲದೇವರೆಂದು ಕಾವೇರಿ ಮಾತೆಯನ್ನು ಪೂಜಿಸುವ ಕೊಡವ ಸಮುದಾಯವನ್ನು ಭಾಗಮಂಡಲ- ತಲಕಾವೇರಿ ಕ್ಷೇತ್ರದಿಂದ ದೂರ ಇಡುವ ಪ್ರಯತ್ನ ಹಲವು ವರ್ಷಗಳಿಂದ ನಡೆಯುತ್ತಿದೆ. ಕ್ಷೇತ್ರಕ್ಕೆ ಸಂಬಂಧವೇ ಇಲ್ಲದವರನ್ನು ಮುನ್ನೆಲೆಗೆ ತರಲಾಗುತ್ತಿದೆ. ಕೊಡವರನ್ನು ಹೊರಗಿಟ್ಟು ನಡೆಸುವ ಸಂಪ್ರದಾಯ, ಆಚರಣೆ ಕಾವೇರಿ ಮಾತೆಗೆ ತೃಪ್ತಿ ಆಗುವುದಿಲ್ಲ. ಕ್ಷೇತ್ರವನ್ನು ಕೆಲವು ರಾಜಕೀಯ ಮುಖಂಡರು ನಿಯಂತ್ರಿಸುತ್ತಿದ್ದು, ಜಿಲ್ಲಾಡಳಿತ ಅವರ ತಾಳಕ್ಕೆ ಕುಣಿಯುತ್ತಿದೆ. ಧಾರ್ಮಿಕವಾಗಿ, ಭಾವನಾತ್ಮಕವಾಗಿ ಸಂಬಂಧ ಹೊಂದಿರುವ ಹಾಗೂ ಕುಲದೇವರೆಂದು ಪೂಜಿಸುವ ಕೊಡವ ಜನಾಂಗಕ್ಕೆ ಉಸ್ತುವಾರಿ ವಹಿಸಿಕೊಡಬೇಕು. ಚೊಟ್ಟೆಕ್‌ಮಾಡ ರಾಜೀವ್ ಬೋಪಯ್ಯ, ಸಂಚಾಲಕರು, ಜಬ್ಬೂಮಿ ಚಾರಿಟೇಬಲ್ ಟ್ರಸ್ಟ್.
**
ತಲಕಾವೇರಿ ಕ್ಷೇತ್ರ ಭಾಗಮಂಡಲ ವ್ಯಾಪ್ತಿಗಷ್ಟೇ ಸೀಮಿತವಾಗಿಲ್ಲ. ವ್ಯವಸ್ಥಾಪನಾ ಸಮಿತಿ ರಚನೆ ಸಂದರ್ಭ ಮತ್ತು ಜಾತ್ರೆಯ ಪೂರ್ವಭಾವಿ ಸಭೆಗಳಿಗೂ ಭಾಗಮಂಡಲ ವ್ಯಾಪ್ತಿಯ ಮುಖಂಡರನ್ನು, ಸಮುದಾಯದವರನ್ನು ಮಾತ್ರ ಪರಿಗಣಿಸಲಾಗುತ್ತಿದೆ. ಇದು ಸರಿಯಲ್ಲ. ಈ ಹಿಂದೆ ಕೊಡವ ಜನಾಂಗದ ತಕ್ಕರು ಈ ಕ್ಷೇತ್ರವನ್ನು ನಡೆಸುತ್ತಿದ್ದರು. ಮೂಲ ತಕ್ಕಾಮೆ ಹೊಂದಿರುವ ಕೊಡವ ಜನಾಂಗಕ್ಕೆ ಕ್ಷೇತ್ರ ಮುನ್ನಡೆಸಲು ನೀಡಬೇಕು. ಕೊಡವ ಜನಾಂಗ ಮಾತ್ರ ಕಾವೇರಿ ಮಾತೆಯನ್ನು ಕುಲಮಾತೆಯೆಂದು ಪೂಜಿಸುತ್ತಿದೆ. ಕ್ಷೇತ್ರವನ್ನು ನಡೆಸುವುದು ಕೊಡವರ ಧಾರ್ಮಿಕ ಹಕ್ಕಾಗಿದ್ದು, ಬದಲಾವಣೆ ಸರಿ ಪಡಿಸಬೇಕು. ಅಪ್ಪಚ್ಚಿರ ಕಮಲ ಮುತ್ತಣ್ಣ, ಕಾವೇರಿ ಕೊಡವ ಭಕ್ತ ಸಂಘ,ದೊಡ್ಡಪುಲಿಕೋಟು.
**
ಇತಿಹಾಸದಂತೆ ಕೊಡವರಿಗೆ ಕ್ಷೇತ್ರದ ತಕ್ಕಾಮೆ ಸಿಗಬೇಕು. ಅಮ್ಮಕೊಡವರಿಗೆ ಪೂಜೆ ಸಲ್ಲಿಸಲು ಅವಕಾಶ ನೀಡಬೇಕು. ಮುಜರಾಯಿ ಇಲಾಖೆ ವ್ಯಾಪ್ತಿಯಿಂದ ಹೊರ ತರಲು ರಾಮಜನ್ಮಭೂಮಿಗಾಗಿ ನಡೆದಂತ ಕಾನೂನು ಹೋರಾಟ ನಡೆಸಿ ಹಕ್ಕು ಪಡೆಯುತ್ತೇವೆ. ಕೊಣಿಯಂಡ ಬೋಜಮ್ಮ ಉತ್ತಪ್ಪ, ಉಪಾಧ್ಯಕ್ಷೆ, ಇಗ್ಗುತ್ತಪ್ಪ ಕೊಡವ ಸಂಘ, ಗೋಣಿಕೊಪ್ಪ.
**
ಮುಜರಾಯಿ ಇಲಾಖೆಯಿಂದ ಹೊರ ತಂದು ಕೊಡವ ಮತ್ತು ಭಕ್ತರಿಗೆ ತಕ್ಕಾಮೆ ನೀಡುವ ಹೋರಾಟಕ್ಕೆ ನಮ್ಮ ಬೆಂಬಲ ಇದೆ. ಪೂಜಾ ಕಾರ್ಯ ಅಮ್ಮಕೊಡವರು ನಡೆಸುತ್ತಾ ಬಂದಿರುವುದರಿಂದ ಇತಿಹಾಸಕ್ಕೆ ಮನ್ನಣೆ ನೀಡಲಿ. ನಮಗೂ ಕೂಡ ಕಾವೇರಿಯನ್ನು ನಿತ್ಯ ಪೂಜಿಸು ವ ಅವಕಾಶ ದೊರೆಯಲಿ. ಬಾನಂಡ ಎನ್. ಪ್ರತ್ಯು, ಅಧ್ಯಕ್ಷರು, ಅಖಿಲ ಅಮ್ಮಕೊಡವ ಸಮಾಜ.
**
ಕಾವೇರಿ ಹುಟ್ಟುವಾಗ ಅದರ ಚಿಲುಮೆಯನ್ನು ತೀರ್ಥವಾಗಿ ಆರಾಧಿಸಿಕೊಂಡು ಬಂದವರು ಕೊಡವರು. ಕಾವೇರಿ ಹೊಳೆ ನಮ್ಮ ತೀರ್ಥ ಕ್ಷೇತ್ರ. ನಾವು ಕಾವೇರಿ ಭಕ್ತರು. ನಾವು ನೇರವಾಗಿ ಹುಟ್ಟು ಸ್ಥಾನಕ್ಕೆ ತೆರಳಿ ೩ ಸುತ್ತು ಪ್ರದಕ್ಷಿಣೆ ಹಾಕಿಕೊಂಡು ಪೂಜಿಸಿಕೊಂಡು ಬಂದಿದ್ದೇವೆ. ಕೊಡವರ ಹಣದಿಂದ ಕಾವೇರಿ ಕ್ಷೇತ್ರವನ್ನು ಮುನ್ನಡೆಸಲಾಗುತ್ತಿತ್ತು. ಮುಜರಾಯಿ ಇಲಾಖೆಗೆ ನೀಡಿದ್ದು ತಪ್ಪಾಗಿದೆ. ಇದರೊಂದಿಗೆ ರಾಜಕೀಯ ಪ್ರಭಾವದಿಂದ ಹೊರಗಿನವರು ನಮ್ಮ ಹಕ್ಕು ಕಸಿಯುವ ಪ್ರಯತ್ನ ನಡೆಯುತ್ತಿದೆ. ನಂದಿನೆರವಂಡ ಯು. ನಾಚಪ್ಪ ಕೊಡವ, ಅಧ್ಯಕ್ಷರು, ಕೊಡವ ನ್ಯಾಷನಲ್ ಕೌನ್ಸಿಲ್.
**
ಕಾವೇರಿ ವಿಚಾರಕ್ಕೆ ಸಂಬಂಧಿಸಿದ್ದಂತೆ ಪ್ರತಿವರ್ಷ ಜಾತ್ರೆ ಸಂದರ್ಭ ವಿವಾದ ಪ್ರಾರಂಭವಾಗುತ್ತದೆ. ತಲಕಾವೇರಿ ಕ್ಷೇತ್ರ ದೈವ ನೆಲೆಯಾಗಿದ್ದು, ಅದನ್ನು ಅರಿತುಕೊಂಡು ಮುನ್ನಡೆಯಬೇಕು. ಭಕ್ತರು ಭಕ್ತಿಯಿಂದ ಕ್ಷೇತ್ರಕ್ಕೆ ಬರುವಂತಾಗಬೇಕು. ಕೊಡಗು ಸಂಸ್ಕೃತಿ- ಸಂಸ್ಕಾರಕ್ಕೆ ಹೆಸರಾಗಿ ದ್ದು, ಇದನ್ನು ಉಳಿಸಿಕೊಳ್ಳಬೇಕು. ತಕ್ಕಾಮೆ ವಿಚಾರ ಸೇರಿದ್ದಂತೆ ಇತರೆ ವಿಚಾರದ ಕುರಿತು ನಾನು ಮಾತನಾಡುವುದಿಲ್ಲ. ಕೋಡಿ ಮೋಟಯ್ಯ, ತಕ್ಕ ಮುಖ್ಯಸ್ಥರು, ತಲಕಾವೇರಿ ಕ್ಷೇತ್ರ.