ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಅಕ್ಟೋಬರ್ ೧೭ ರಂದು ರಾತ್ರಿ ೭.೨೧ ಗಂಟೆಗೆ ಸಲ್ಲುವ ಮೇಷ ಲಗ್ನದಲ್ಲಿ ಪವಿತ್ರ ಕಾವೇರಿ ತೀರ್ಥೋದ್ಭವ ಆಗಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಂಜುಂಡೇಗೌಡ ಹೇಳಿದ್ದಾರೆ.
ಕೊಡಗು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ಕಾವೇರಿ ತುಲಾ ಸಂಕ್ರಮಣ ಪೂರ್ವಭಾವಿ ಸಭೆಯಲ್ಲಿ ಕಾವೇರಿ ಜಾತ್ರೆ ಕುರಿತು ಮಾಹಿತಿ ನೀಡಿದರು. ಸೆ.೨೭ ರಂದು ಬೆಳಗ್ಗೆ ೧೧.೦೫ ಗಂಟೆಗೆ ಸಲ್ಲುವ ವೃಚ್ಛಿಕ ಲಗ್ನದಲ್ಲಿ ಪತ್ತಾಯಕ್ಕೆ ಅಕ್ಕಿ ಹಾಕುವ ಕಾವೇರಿ ಕಾವೇರಿ ಸಂಕ್ರಮಣಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.
ಅ.೫ ರಂದು ಬೆಳಗ್ಗೆ ೯.೩೫ ಗಂಟೆಗೆ ಸಲ್ಲುವ ವೃಚ್ಛಿಕ ಲಗ್ನದಲ್ಲಿ ಆಜ್ಞಾ ಮುಹೂರ್ತ, ೧೫ ರಂದು ಬೆಳಗ್ಗೆ ೧೧.೪೫ ಕ್ಕೆ ಸಲ್ಲುವ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸುವುದು, ಸಂಜೆ ೪.೧೫ ಗಂಟೆಗೆ ಸಲ್ಲುವ ಕುಂಭ ಲಗ್ನದಲ್ಲಿ ಕಾಣಿಕೆ ಡಬ್ಬಿ ಇಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಕಾವೇರಿ ತೀರ್ಥೋದ್ಭವ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆ ಇರುವುದರಿಂದ ಸಕಲ ವ್ಯವಸ್ಥೆ ಮಾಡಿಕೊಳ್ಳಬೇಕು. ಧಾರ್ಮಿಕ ಆಚರಣೆ ಹಾಗೂ ಭಕ್ತರ ನಂಬಿಕೆಗೆ ಧಕ್ಕೆಯಾಗದ್ದಂತೆ ನಡೆದುಕೊಳ್ಳಬೇಕೆಂದು ಉಸ್ತುವಾರಿ ಸಚಿವ ಬಿ.ಸಿ. ನಾಗೇಶ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.