ಜಿಲ್ಲೆ

ಸರ್ಕಾರದ ವಿಳಂಬ ಧೋರಣೆ

reportermys

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ

ಸರ್ಕಾರದಿಂದ ನೇಮಕಾತಿ ಆಗಬೇಕಾಗಿರುವ ಹಲವು ಹುದ್ದೆಗಳು ಸರ್ಕಾರದ ವಿಳಂಬ ಧೋರಣೆಯಿಂದ ನನೆಗುದಿಗೆ ಬಿದ್ದಿದೆ. ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವಂತೆ ವಿವಿಧ ಹುದ್ದೆಗಳ ಭರ್ತಿಗೂ ಕಾಲ ಕೂಡಿ ಬಂದಿಲ್ಲ. ಆದರೆ, ಆ ಸ್ಥಾನದ ನಿರೀಕ್ಷೆಯಲ್ಲಿರುವ ವರು ಮಾತ್ರ ಲಾಬಿ ಮುಂದುವರಿಸಿದ್ದಾರೆ.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರು ಸೇರಿದ್ದಂತೆ ಸದಸ್ಯ ರನ್ನು ನೇಮಕ ಮಾಡಬೇಕಾಗಿದೆ. ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರು, ಸದಸ್ಯರ ನೇಮಕ ಆಗಿಲ್ಲ. ಮಡಿಕೇರಿಯ ಓಂಕಾರೇಶ್ವರ- ಗದ್ದುಗೆ ವ್ಯವಸ್ಥಾಪನಾ ಸಮಿತಿಗೆ ಸದಸ್ಯರ ನೇಮಕ ಮಾಡಬೇಕಾಗಿದೆ.

ಕೊಡವ ಹಾಗೂ ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಹಿರಿಯ ಮುಖಂಡರು ಪ್ರಯತ್ನಿಸುತ್ತಿದ್ದಾರೆ. ಸಂಘ ಪರಿವಾರದ ಶ್ರೀರಕ್ಷೆ ಯಲ್ಲಿ ಕೆಲವರು ಒತ್ತಡ ಹೇರುತ್ತಿದ್ದಾರೆ. ಇದರೊಂದಿಗೆ ಎರಡೂ ಅಕಾಡೆಮಿಗೂ ಸದಸ್ಯತ್ವ ಪಡೆಯಲು ಸಾಕಷ್ಟು ಜನ ಪ್ರಭಾವ ಬೀರುತ್ತಿ
ದ್ದಾರೆ.

ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಓಂಕಾರೇಶ್ವರ- ಗದ್ದುಗೆ ವ್ಯವಸ್ಥಾಪನಾ ಸಮಿತಿಗೂ ತೀವ್ರ ಪೈಪೋಟಿ ಏರ್ಪಟ್ಟಿದೆ. ಬಿಜೆಪಿ, ಸಂಘ- ಪರಿವಾರ ಹಾಗೂ ಜನಪ್ರತಿನಿಧಿಗಳ ನಡುವೆ ಒಮ್ಮತ್ತಾಭಿಪ್ರಾಯ ಇಲ್ಲದಿರುವುದು ನೇಮಕಾತಿ ವಿಳಂಬಕ್ಕೆ ಕಾರಣ ಎನ್ನಲಾಗುತ್ತಿದೆ.

ಆಡಳಿತಾರೂಢ ಬಿಜೆಪಿಯ ಮೂವರು ಜನಪ್ರತಿನಿಧಿಗಳು ತಮ್ಮ ಆಪ್ತರನ್ನು ನೇಮಕ ಮಾಡಲು ಪ್ರಯತ್ತಿಸುತ್ತಿದ್ದಾರೆ. ಮೂವರಲ್ಲಿ ಒಮ್ಮತ್ತಾಭಿಪ್ರಾಯ ಇಲ್ಲದಿರುವುದು ಪಕ್ಷಕ್ಕೆ ಇಕ್ಕಟ್ಟು ತಂದೊಡ್ಡಿದೆ. ಬಿಜೆಪಿ ಮುಖಂಡರು ಕೂಡ ತಮಗೆ ಬೇಕಾದವರಿಗೆ ಹುದ್ದೆ ಕೊಡಿ ಸಲು ಪ್ರಯತ್ನಿಸುತ್ತಿದ್ದಾರೆ. ಪರಿವಾರ ಸಂಘಟನೆಯವರು ತಮ್ಮ ಹಿತೈಷಿಗಳಿಗೆ ಹುದ್ದೆ ಕೊಡಿಸಲು ಉನ್ನತಮಟ್ಟದಲ್ಲಿ ಮಾತುಕತೆ ನಡೆಸುತ್ತಿ
ದ್ದಾರೆ.

ಕಳೆದ ಬಾರಿ ಕೊಡವ ಮತ್ತು ಅರೆಭಾಷೆ ಅಕಾಡೆಮಿಗೆ ಸರ್ಕಾರ ಅಚ್ಚರಿಕರ ಆಯ್ಕೆ ಮಾಡಿತ್ತು. ಜನಪ್ರತಿನಿಧಿಗಳು, ಪಕ್ಷದ ಮುಖಂಡರ ಅಭಿಪ್ರಾಯಕ್ಕೆ ಮಾನ್ಯತೆ ನೀಡದೆ ಅನಿರೀಕ್ಷಿತ ಆಯ್ಕೆ ಮಾಡಿತ್ತು. ಈ ನೇಮಕಾತಿಯಲ್ಲಿ ಸಂಘ ಪರಿವಾರದ ಮಾತಿಗೆ ಮನ್ನಣೆ ನೀಡ ಲಾಯಿತ್ತೆಂಬ ಚರ್ಚೆ ನಡೆದಿತ್ತು.

ತಲಕಾವೇರಿ ನೇಮಕಾತಿಗೆ ತಡೆಯಾಜ್ಞೆ
ತಲಕಾವೇರಿ- ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಗೆ ಸರ್ಕಾರ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಿತ್ತು. ಈ ನೇಮಕಾತಿ ಪ್ರಕ್ರಿಯೆ ಕ್ರಮಬದ್ಧವಾಗಿ ನಡೆದಿಲ್ಲ ಎಂದು ತಡೆಯಾಜ್ಞೆ ತರಲಾಗಿದೆ. ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಸದಸ್ಯರ ನೇಮಕಾತಿಗೆ ಸಂಬಂಧಿಸಿದ್ದಂತೆ ನೀಡಿದ್ದ ಪತ್ರ ಬಹಿರಂಗಗೊಳ್ಳುವುದರ ಮೂಲಕ ಚರ್ಚೆಗೆ ಗ್ರಾಸ ಒದಗಿಸಿತ್ತು.

ದಕ್ಷಿಣ ಭಾರತದ ಜೀವಾಳವಾಗಿರುವ ಜೀವನದಿ ಕಾವೇರಿ ಉಗಮ ಸ್ಥಾನ ತಲಕಾವೇರಿ ಕ್ಷೇತ್ರದಲ್ಲಿರುವ ದೇವಾಲಯಕ್ಕೆ ಸಹಸ್ರಾರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿನ ವ್ಯವಸ್ಥೆ ಅಚ್ಚುಕಟ್ಟಾಗಿ ನಡೆಯಲು ವ್ಯವಸ್ಥಾಪನಾ ಸಮಿತಿಯ ಅಗತತ್ಯತೆ ಇದೆ. ಸರ್ಕಾರ ನೇಮಕಾತಿ ಸಮರ್ಥಿಸಿಕೊಳ್ಳುವ ಅಥವಾ ನೇಮಕಾತಿ ರದ್ದುಗೊಳಿಸುವ ಮೂಲಕ ನ್ಯಾಯಾಲಯದಲ್ಲಿ ವಿವಾದ ಇತ್ಯರ್ಥವಾಗುವಂತೆ ಮುತುವರ್ಜಿ ವಹಿಸಬೇಕಾಗಿದೆ.

**
ಕೊಡವ- ಅರೆಭಾಷೆ ಅಕಾಡೆಮಿ, ಮುಡಾ, ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಗೆ ನೇಮಕಾತಿ ಮಾಡಲು ಸರ್ಕಾರ ನಿರ್ಧಾರ ತೆಗೆದುಕೊಳ್ಳಬೇಕು. ತಲಕಾವೇರಿ- ಭಗಂಡೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಗೆ ಸರ್ಕಾರ ನೇಮಕಾತಿ ಮಾಡಿದ್ದು, ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ. ಬಾಕಿ ಇರುವ ನೇಮಕಾತಿಗೆ ಸಂಬಂಧಿಸಿದ್ದಂತೆ ಇದುವರೆಗೂ ಪಕ್ಷದಿಂದ ಅಭಿಪ್ರಾಯ ಕೇಳಿಲ್ಲ. ಪಳೆಯಂಡ ರಾಬಿನ್ ದೇವಯ್ಯ, ಜಿಲ್ಲಾಧ್ಯಕ್ಷರು, ಬಿಜೆಪಿ.