ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಮುಂಗಡ ಪತ್ರದಲ್ಲಿ ಕೊಡಗಿಗೆ ವಿಶೇಷ ಅನುದಾನ ಘೋಷಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ ಲಿಖಿತ ಬೇಡಿಕೆ ಸಲ್ಲಿಸಿದ್ದಾರೆ.
ಜಿಲ್ಲೆಯಲ್ಲಿ ಪ್ರತಿವರ್ಷ ಭಾರೀ ಮಳೆಗೆ ರಸ್ತೆಗಳು ಹಾಳಾಗುತ್ತಿವೆ. ರಸ್ತೆ ಅಭಿವೃದ್ಧಿಗೆ ೨೦೦೮ ರಿಂದ ೨೦೧೩ ರವರೆಗೆ ಬಿಜೆಪಿ ಸರ್ಕಾರ ಇದ್ದಾಗ ಪ್ರತಿ ಮುಂಗಡ ಪತ್ರದಲ್ಲಿ ವಿಶೇಷ ಅನುದಾನ ಒದಗಿಸಿದೆ. ಈ ವರ್ಷ ೧೫೦ ಕೋಟಿ ರೂ. ವಿಶೇಷ ಅನುದಾನ ಘೋಷಿಸು ವಂತೆ ಮನವಿ ಮಾಡಿದ್ದಾರೆ.
ಡಾ.ಡಿ.ಎಂ. ನಂಜುಂಡಪ್ಪ ಸಮಿತಿ ವರದಿಯಲ್ಲಿ ಪ್ರಸ್ತಾಪವಾಗಿರುವಂತೆ ಹಾಗೂ ತಾವು ಚಿಕ್ಕಮಗಳೂರಿನಲ್ಲಿ ಘೋಷಿಸಿರುವಂತೆ ಸ್ವಿಜರ್‌ಲ್ಯಾಂಡ್ ಮಾದರಿ ಕೊಡಗನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿ ಪಡಿಸಲು ೧೦೦ ಕೋಟಿ ರೂ. ಘೋಷಣೆ ಮಾಡಬೇಕೆಂದು ಕೋರಿ ದ್ದಾರೆ.
ಕೊಡಗು ಸಂಸ್ಕೃತಿಯ ಮೂಲ ಆಚಾರ- ವಿಚಾರಗಳು ಪ್ರತಿ ಕುಟುಂಬದ ಐನ್‌ಮನೆ ಹೆಸರಿನಲ್ಲಿದೆ. ಇದರ ಅಭಿವೃದ್ಧಿಗಾಗಿ ೧೦ ಕೋಟಿ ರೂ. ಅನುದಾನ ಘೋಷಣೆ ಮಾಡಬೇಕು. ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಪೊನ್ನಂಪೇಟೆ, ಕುಶಾಲನಗರ ತಾಲೂಕಿನಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ತಲಾ ೧೦ ಕೋಟಿ ರೂ. ಘೋಷಣೆ ಮಾಡುವಂತೆ ಒತ್ತಾಯಿಸಿದ್ದಾರೆ.