ಜಿಲ್ಲೆ

ಕೊಡಗು ವಿಶೇಷ ಸಂಸ್ಕೃತಿಯ ಮೂಲಕ ಗುರುತಿಸಿಕೊಂಡಿದೆ: ರಾಣಿ ಮಾಚಯ್ಯ

ಮಡಿಕೇರಿ: ರಮ್ಯ ರಮಣೀಯ ಸೌಂದ್ಯರ್ಯವನ್ನು ಹೊಂದಿರುವ ಕೊಡಗು ವಿಶೇಷ ಸಂಸ್ಕೃತಿಯ ಮೂಲಕ ದೇಶದಲ್ಲಿ ಗುರುತಿಸಿಕೊಂಡಿದೆ ಎಂದು ಪದ್ಮಶ್ರೀ ಪುರಸ್ಕೃತರಾದ ಐಮುಡಿಯಂಡ ರಾಣಿ ಮಾಚಯ್ಯ ಹೇಳಿದರು.


ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆ, ಮೈಸೂರು ವಿಭಾಗೀಯ ಪತ್ರಾಗಾರ ಕಚೇರಿ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು, ಇತಿಹಾಸ ವಿಭಾಗ ಇವರ ಸಹಯೋಗದಲ್ಲಿ ಚಾರಿತ್ರಿಕ ದಾಖಲೆಗಳಲ್ಲಿ ಕೊಡಗು ಜಿಲ್ಲೆಯ ಇತಿಹಾಸ ಎಂಬ ವಿಷಯದಲ್ಲಿ ಎರಡು ದಿನಗಳ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಕಾಲೇಜು ಸಭಾಂಗಣದಲ್ಲಿ ಉದ್ಘಾಟಿಸಿ ಮಾತನಾಡಿದರು.


ತನ್ನದೇ ಆದ ಸಂಸ್ಕೃತಿಯನ್ನು ಹೊಂದಿರುವ ಕೊಡಗನ್ನು ವಿಭಿನ್ನ ರಾಜ ಮನೆತನಗಳು ಆಳ್ವಿಕೆ ಮಾಡಿವೆ. ರಮ್ಯ ರಮಣೀಯ ಸೌಂದ್ಯರ್ಯವನ್ನು ಹೊಂದಿರುವ ಕೊಡಗು ವಿಶೇಷ ಸಂಸ್ಕೃತಿಯ ಮೂಲಕ ದೇಶದಲ್ಲಿ ಗುರುತಿಸಿಕೊಂಡಿದೆ. ಕೊಡಗಿನ ವಿಶೇಷ ಕಲೆ ಯಾದ ಉಮ್ಮತ್ತಾಟ್ ನಿಂದ ಕೊಡಗು ದೇಶ-ವಿದೇಶದಲ್ಲಿ ಹೆಸರು ಮಾಡಿದೆ ಎಂದ ಅವರು, ಕೊಡಗಿನ ಮಕ್ಕಳು ಕೊಡಗಿನ ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸ ಮಾಡಿ ಕೊಡಗಿಗೆ ಏಳಿಗೆ ತರುವಲ್ಲಿ ಯಶಸ್ವಿಯಾಗಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ಮಾಡಿದರು.


ಮೈಸೂರಿನ ವಿಭಾಗೀಯ ಪತ್ರಾಗಾರ ಕಚೇರಿಯ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಮಾತನಾಡಿ, ಚಾರಿತ್ರಿಕ ದಾಖಲೆ ಸಂಗ್ರಹಿಸಲು ಪ್ರತ್ಯೇಕ ಸಂಸ್ಥೆ ರಚನೆಯಾಗಬೇಕು. ಚಾರಿತ್ರಿಕ ದಾಖಲೆಗಳಿಂದಲೇ ಮುಂದಿನ ಪೀಳಿಗೆಯ ಅಭಿವೃದ್ಧಿ ಸಾಧ್ಯ. ಭಾರತಕ್ಕೆ ರಾಜ್ಯ ಪತ್ರಾಗಾರ ಇಲಾಖೆಯು ಒಂದು ಕೋಟಿ ಹತ್ತು ಲಕ್ಷ ದಾಖಲೆಗಳನ್ನು ಒದಗಿಸುವುದರಲ್ಲಿ ಮೇಲುಗೈ ಸಾಧಿಸಿರುವುದು ಒಂದು ವಿಶೇಷ ಸಂಗತಿಯಾಗಿದೆ ಎಂದು ಹೇಳಿದರು.


ಮುಂಬೈ ಮಹಿಳಾ ವಿಶ್ವವಿದ್ಯಾನಿಲಯದ ನಿವೃತ್ತ ನಿರ್ದೇಶಕಿ ಡಾ.ವೀಣಾ ಪೂಣಚ್ಚ ಮಾತನಾಡಿ, ಶ್ರಮಿಕ ವರ್ಗದ ಮಾತುಗಳನ್ನು ಕೇಳಬೇಕು ಎಂದು ತಿಳಿಸಿದರು.


ಕಾರ್ಯಪ್ಪ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಪಾರ್ವತಿ ಅಪ್ಪಯ್ಯ ಮಾತನಾಡಿ, ಚರಿತ್ರೆಯನ್ನು ತಿಳಿಯದೆ ನಮಗೆ ಏನೂ ಮಾಡಲಸಾಧ್ಯ. ಚರಿತ್ರೆಗೆ ಮೊದಲ ಆದ್ಯತೆ ನೀಡಬೇಕು. ಕೊಡವ ಭಾಷೆಯನ್ನು ಬೆಳೆಸಬೇಕಾದರೆ ಕೊಡವರ ಸಹಕಾರ ಅವಶ್ಯಕತೆ ಇದೆ. ಕೊಡವ ಭಾಷೆ ರಾಜ್ಯದಲ್ಲಿ ತನ್ನದೇ ಆದ ಛಾಪು ಮೂಡಿಸಿರುವುದು ಒಂದು ವಿಶೇಷ ಸಂಗತಿಯಾಗಿದೆ. ದೇಶದಲ್ಲಿ ಕೊಡವರ ಆಚಾರ, ವಿಚಾರ ಮತ್ತು ಸಂಸ್ಕೃತಿಯನ್ನು ಉಳಿಸಬೇಕು ಎಂದು ತಿಳಿಸಿದರು.


ವಿಚಾರ ಸಂಕಿರಣ ಅಂಗವಾಗಿ ಏರ್ಪಡಿಸಿದ್ದ ಅಜಯ್ ರಾವ್‌ರವರ ನಾಣ್ಯಗಳ ಪ್ರದರ್ಶನವನ್ನು ಅತಿಥಿಗಳಿಂದ ಉದ್ಘಾಟಿಸಿ ವೀಕ್ಷಿಸಿಸಲಾಯಿತು. ಮಡಿಕೇರಿ ಪ್ರಖ್ಯಾತ ಉದ್ಯಮಿ ಶಂಕರ ಪೂಜಾರಿ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ.ಮೇಜರ್ ರಾಘವ ಹಾಗೂ ವಿದ್ಯಾರ್ಥಿಗಳು, ಉಪನ್ಯಾಸಕರು ಪಾಲ್ಗೊಂಡಿದ್ದರು.