ಜಿಲ್ಲೆ

ಕೊಡಗು ಆದ್ಯತಾ ಪ್ರವಾಸಿ ತಾಣ

ಸುನಿಲ್ ಪೊನ್ನೇಟಿ

ಮಡಿಕೇರಿ:

ಜಗತ್ತಿನ ಪ್ರವಾಸಿ ಭೂಪಟದಲ್ಲಿ ಗುರುತಿಸಿಕೊಂಡಿರುವ ಕೊಡಗು ಗೂಗಲ್‌ನಲ್ಲಿ ಅತ್ಯಂತ ಹೆಚ್ಚು ಹುಡುಕಾಟ ನಡೆಸಿದ ಪ್ರವಾಸಿ ತಾಣಗಳ ಪಟ್ಟಿಯಲ್ಲಿ ೭ನೇ ಸ್ಥಾನದಲ್ಲಿದೆ. ಪ್ರವಾಸೋದ್ಯಮದಲ್ಲಿ ಜಿಲ್ಲೆಯ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದು, ಇದರ ಸದುಪಯೋಗಕ್ಕೆ ಕರ್ನಾಟಕ ಸರ್ಕಾರ ಮುಂದಾಗಿದೆ. ಪ್ರವಾಸೋದ್ಯಮದ ಮೂಲಕ ಕೊಡಗಿನ ಅಭಿವೃದ್ಧಿ ಮತ್ತು ಸ್ಥಳೀಯವಾಗಿ ಉದ್ಯೋಗ ಸೃಷ್ಟಿಗೆ ಅನೇಕ ಯೋಜನೆಗಳನ್ನು ರೂಪಿಸಿದೆ.

ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ಮಲೆನಾಡಿನ ಪುಟ್ಟ ಜಿಲ್ಲೆ ಕೊಡಗು ಪ್ರಾಕೃತಿಕ ಸಂಪತ್ತಿನಿAದ ಶ್ರೀಮಂತವಾಗಿದೆ. ಇಲ್ಲಿನ ಅದ್ಭುತ ಪರಿಸರದಿಂದಾಗಿ ದಕ್ಷಿಣದ ಕಾಶ್ಮೀರ ಎನ್ನುವ ಹೆಸರೂ ಇದೆ. ಹಚ್ಚ ಹಸಿರಿನ ಕಾಡು, ಧುಮ್ಮಿಕ್ಕಿ ಹರಿಯುವ ಜಲಧಾರೆ, ನಿಸರ್ಗ ರಮಣೀಯ ತಾಣಗಳು, ಹಸಿರು ಹೊದ್ದ ಬೆಟ್ಟಗಳು…ಹೀಗೆ ಅನೇಕ ಆಕರ್ಷಣೆಗಳು ಪ್ರವಾಸಿಗರನ್ನು ಕೊಡಗಿನತ್ತ ಸೆಳೆಯುತ್ತಿದೆ.ದೇಶ ವಿದೇಶದ ಪ್ರವಾಸಿಗರು ಇಲ್ಲಿಯ ಸೌಂದರ್ಯ ಆಸ್ವಾದಿಸಲು ಬರುತ್ತಿದ್ದಾರೆ. ಕಾಫಿ ಪ್ರಮುಖ ಬೆಳೆಯಾಗಿರುವ ಜಿಲ್ಲೆಯಲ್ಲಿ ಇತ್ತೀಚಿನ ದಶಕಗಳಿಂದ ಪ್ರವಾಸೋದ್ಯಮ ಕೊಡಗಿನ ಆರ್ಥಿಕ ಬೆನ್ನೆಲುಬಾಗಿ ಬದಲಾಗುತ್ತಿದೆ. ೨೦೧೮ರ ನಂತರದ ಮೂರು ವರ್ಷಗಳಲ್ಲಿ ನಿರಂತರ ಪ್ರಾಕೃತಿಕ ವಿಕೋಪ, ಇದರ ಬೆನ್ನಲ್ಲೇ ಕಾಡಿದ ಕೋವಿಡ್-೧೯ ಪರಿಣಾಮಕ್ಕೆ ಜಿಲ್ಲೆಯ ಪ್ರವಾಸೋದ್ಯಮ ಸ್ವಲ್ಪ ನಲುಗಿದರೂ ಇದೀಗ ಚೇತರಿಕೆಯ ಹಾದಿಯಲ್ಲಿದೆ.

ಭೌಗೋಳಿಕ ಮತ್ತು ಹವಾಮಾನದ ಕಾರಣದಿಂದ ಕೊಡಗಿನಲ್ಲಿ ದೊಡ್ಡ ಪ್ರಮಾಣದ ಕೈಗಾರಿಕೆಗಳ ಸ್ಥಾಪನೆ ಸಾಧ್ಯವಾಗದ ಮಾತು. ಏಲಕ್ಕಿ, ಕಾಫಿ, ಜೇನು, ಭತ್ತ, ಕರಿಮೆಣಸು.. ಹೀಗೆ ಕೃಷಿ ಪ್ರಧಾನವಾಗಿದ್ದ ಜಿಲ್ಲೆಯಲ್ಲಿ ಬದಲಾದ ಕಾಲಘಟ್ಟದಲ್ಲಿ ವ್ಯವಸಾಯವೂ ಲಾಭದಾಯಕ ಎನ್ನುವ ಅಭಿಪ್ರಾಯಕ್ಕೆ ಬರಲಾಗುತ್ತಿದೆ. ಈ ಎಲ್ಲಾ ಕಾರಣಗಳಿಂದ ಕೊಡಗಿನ ಆರ್ಥಿಕತೆ ವೃದ್ಧಿ ಮತ್ತು ಉದ್ಯೋಗವಕಾಶದ ಹೆಚ್ಚಳಕ್ಕೆ ಪ್ರವಾಸೋದ್ಯಮವನ್ನು ಅವಲಂಬಿಸಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಕೊಡಗಿನ ಯುವ ಜನತೆ ಪ್ರವಾಸೋದ್ಯಮ ಸಂಬAಧಿ ವ್ಯವಹಾರಗಳತ್ತ ಆಕರ್ಷಿತರಾಗುತ್ತಿದ್ದಾರೆ.
ಸರ್ಕಾರವೂ ಪ್ರವಾಸೋದ್ಯಮ ಇಲಾಖೆ ಮೂಲಕ ಅನೇಕ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ಸುಮಾರು ೨೬.೨೬ ಕೋಟಿ ರೂ. ವೆಚ್ಚದಲ್ಲಿ ೧೬ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೊಡಗಿನ ಪ್ರವಾಸಿ ಕೇಂದ್ರಗಳಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ ಈಗಾಗಲೇ ೨೩.೬೩ ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಮೂಲಗಳು ತಿಳಿಸಿವೆ.

ಮಡಿಕೇರಿಯಲ್ಲಿ ಕೊಡವ ಹೆರಿಟೇಜ್ ಸೆಂಟರ್ ನಿರ್ಮಾಣ, ಮಡಿಕೇರಿಯ ರಾಜಾಸೀಟ್ ಪ್ರದೇಶವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ಯೋಜನೆ, ಸೋಮವಾರಪೇಟೆ ತಾಲೂಕು, ಮಲ್ಲಳ್ಳಿ ಜಲಪಾತ ಪ್ರದೇಶದಲ್ಲಿ ಬಾಕಿ ಇರುವ ಮೆಟ್ಟಿಲುಗಳ ನಿರ್ಮಾಣ, ರೈಲಿಂಗ್ಸ್, ಪಾರ್ಕಿಂಗ್, ಮಳಿಗೆ ಮುಂತಾದ ಸೌಲಭ್ಯಗಳು, ದುಬಾರೆ ಬಳಿ ಕಾವೇರಿ ನದಿ ತೀರದಲ್ಲಿ ಪಾರ್ಕಿಂಗ್ ಸೌಲಭ್ಯ ಅಭಿವೃದ್ಧಿ, ತಲಕಾವೇರಿ ಬಳಿ ಕೆಂಪುರಾಶಿ ಮೊಟ್ಟೆಯಿಂದ ಮಂಟಕಲ್ ಶಾಲೆವರೆಗೆ ೨ ಕಿ.ಮೀ ರಸ್ತೆ ಅಭಿವೃದ್ಧಿ, ಮಡಿಕೇರಿ ಶ್ರೀ ಓಂಕಾರೇಶ್ವರ ದೇವಸ್ಥಾನದ ಬಳಿ ಶೌಚಾಲಯ, ಬಟ್ಟೆ ಬದಲಿಸುವ ಕೊಠಡಿ ನಿರ್ಮಾಣ, ಮಡಿಕೇರಿ ತಾಲೂಕು ನಾಲ್ಕುನಾಡು ಅರಮನೆಗೆ ಸಂಪರ್ಕ ರಸ್ತೆ ಅಭಿವೃದ್ಧಿ, ಸೋಮವಾರಪೇಟೆ ತಾಲೂಕು ಶನಿವಾರಸಂತೆ ಹೋಬಳಿಯಲ್ಲಿ ತಪೋವನ ಮನೆಹಳ್ಳಿ ಶ್ರೀ ಕಾಡು ಮಲ್ಲೇಶ್ವರ ದೇವಸ್ಥಾನದಿಂದ ಅಜ್ಜಯ್ಯ ವೀರಭದ್ರ ಮಠಕ್ಕೆ ಹೋಗುವ ರಸ್ತೆ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗಿದೆ.

ಮಡಿಕೇರಿ ರಾಜಾಸೀಟಿಗೆ ತೆರಳುವ ರಸ್ತೆಗೆ ಪಾತ್‌ವೇ, ರೈಲಿಂಗ್ ನಿರ್ಮಾಣ ಕಾಮಗಾರಿ. ಮಡಿಕೇರಿಯ ರಾಜಾಸೀಟು ಬಳಿ ಕೂರ್ಗ್ ವಿಲೇಜ್, ಕೊಡಗು ಶಾಪಿಂಗ್ ಕೇಂದ್ರ ಕಾಮಗಾರಿ ಅಬ್ಬಿ ಫಾಲ್ಸ್ ಪ್ರದೇಶದಲ್ಲಿ ೩೦೦ ಮೀ. ಕಾಂಕ್ರಿಟ್ ರಸ್ತೆ, ಪಾರ್ಕಿಂಗ್ ಸೌಲಭ್ಯ ಹಾಗೂ ಮಳೆನೀರು ಚರಂಡಿ ನಿರ್ಮಾಣ, ಮಾಂದಲಪಟ್ಟಿ ಗ್ರಾಮದ ಕಾಲೂರು ಕರೇನ ಮನೆಯಿಂದ |ಮಾಂದಲ್ ಪಟ್ಟಿಗೆ ಹೋಗುವ ಕಾಂಕ್ರಿಟ್ ರಸ್ತೆ ಕಾಮಗಾರಿ, ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ ಬಳಿ ೧೦೦ ಮೀ ಕಾಂಕ್ರಿಟ್ ರಸ್ತೆ ನಿರ್ಮಾಣ ಮತ್ತು ಪಾರ್ಕಿಂಗ್ ಲಾಟ್ ಅಭಿವೃದ್ಧಿ, ದುಬಾರೆಯಲ್ಲಿ ಕಾವೇರಿ ನದಿ ಬಳಿ ಸೋಪಾನಕಟ್ಟೆ ಮತ್ತು ಜಟ್ಟಿ ನಿರ್ಮಾಣ, ದುಬಾರೆಯಲ್ಲಿ ೨ನೇ ಹಂತದ ಪಾರ್ಕಿಂಗ್ ನಿರ್ಮಾಣ, ಕುಶಾಲನಗರ ಸೋಮೇಶ್ವರ ಕೆರೆಯನ್ನು ಪ್ರವಾಸಿ ತಾಣವನ್ನಾಗಿ ಮಾಡುವ ಕಾಮಗಾರಿಗಳೂ ಪ್ರಗತಿಯಲ್ಲಿದೆ.
ಕೊಡಗು ಜಿಲ್ಲೆಯನ್ನೊಳಗೊಂಡAತೆ ರಾಜ್ಯದ ಇತರ ಜಿಲ್ಲೆಗಳಲ್ಲೂ ಪ್ರವಾಸೋದ್ಯಮ ಅಭಿವೃದ್ಧಿ ಸಂಬAಧ ಸ್ಥಳೀಯರಿಗೆ ಜೀವನ ನಿರ್ವಹಣೆಗಾಗಿ ಅನುಕೂಲ ಕಲ್ಪಿಸಲು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ. ಪ್ರವಾಸಿ ತಾಣಗಳ ಬಳಿ ಪ್ರವಾಸಿಗರಿಗೆ ಆತಿಥ್ಯ ಸೇವ್ನೆ ಒದಗಿಸಲು ಮುಂದೆ ಬರುವ ಮನೆ ಮಾಲೀಕರುಗಳಿಗೆ ಹೋಂ ಸ್ಟೇ ಯೋಜನೆಯಡಿ ಇಲಾಖೆಯಿಂದ ನೋಂದಣಿ ಮಾಡಲಾಗುತ್ತಿದೆ.
ಕರ್ನಾಟಕ ಪ್ರವಾಸೋದ್ಯಮ ನೀತಿ ೨೦೨೦-೨೬ರ ಅಡಿಯಲ್ಲಿ ಕೊಡಗು ಪೂರ್ಣ ಜಿಲ್ಲೆಯನ್ನು ಆದ್ಯತಾ ಪ್ರವಾಸಿ ತಾಣವನ್ನಾಗಿ ಗುರುತಿಸಲಾಗಿದೆ. ಈ ನೀತಿ ಅನ್ವಯ ವಿವಿಧ ರೀತಿಯ ೨೬ ಪ್ರವಾಸಿ ಸೇವೆಗಳನ್ನು ಅಭಿವೃದ್ಧಿಪಡಿಸಲು ಮುಂದೆ ಬರುವ ಖಾಸಗಿ ಬಂಡವಾಳ ಹೂಡಿಕೆದಾರರನ್ನು ಸೆಳೆಯಲು ಸಹಾಯಧನ, ಪ್ರೋತ್ಸಾಹಕಗಳು ಹಾಗೂ ರಿಯಾಯಿತಿಗಳನ್ನು ನೀಡಲು ಸರ್ಕಾರದಿಂದ ಅವಕಾಶ ಕಲ್ಪಿಸಲಾಗಿದೆ.

ಸಾಹಸ ಪ್ರವಾಸೋದ್ಯಮ, ಕೃಷಿ ಪ್ರವಾಸೋದ್ಯಮ, ಮನರಂಜನಾ ಪಾರ್ಕ್, ಕ್ಯಾರವಾನ್ ಪಾರ್ಕ್,
ಕ್ಯಾರವಾನ್ ಪ್ರವಾಸೋದ್ಯಮ, ಸಮಾವೇಶ ಕೇಂದ್ರ, ಸಾಂಸ್ಕೃತಿಕ ಪ್ರವಾಸೋದ್ಯಮ, ಸಾಂಸ್ಕೃತಿಕ ಗ್ರಾಮ, ಪರಿಸರ ಪ್ರವಾಸೋದ್ಯಮ, ಪಾರಂಪರಿಕ ಹೋಟೆಲ್, ಪಾರಂಪರಿಕ ಪ್ರವಾಸೋದ್ಯಮ, ಪಾರಂಪರಿಕ ನಡಿಗೆ, ಹೋಂಸ್ಟೇ, ಬಜೆಟ್ ಮತ್ತು ಪ್ರೀಮಿಯಂ ಹೊಟೇಲ್, ಹೌಸ್ ಬೋಟ್, ವಸ್ತು ಸಂಗ್ರಹಾಲಯಗಳು ಮತ್ತು ಗ್ಯಾಲರಿಗಳು, ರೋಪ್ ವೇ, ಸುರಕ್ಷತೆ ಮತ್ತು ನೈರ್ಮಲ್ಯ ಪ್ರವಾಸೋದ್ಯಮ, ಧ್ವನಿ ಮತ್ತು ಬೆಳಕಿನ ದರ್ಶನ, ಟೆಂಟ್ ವಸತಿ ಸೌಕರ್ಯ, ಥೀಮ್ ಪಾರ್ಕ್, ಪ್ರವಾಸಿ ವಿವರಣಾ ಕೇಂದ್ರ, ಪ್ರವಾಸಿ ಲಕ್ಷುರಿ ಕೋಚ್, ಸ್ವಾಸ್ಥ್ಯ ಕೇಂದ್ರ, ರಸ್ತೆ ಬದಿ ಸೌಲಭ್ಯಗಳು.. ಹೀಗೆ ೨೬ ಬಗೆಯ ಪ್ರವಾಸಿ ಸೇವೆಗಳನ್ನು ಅಭಿವೃದ್ಧಿಪಡಿಸಲು ಖಾಸಗಿ ವಲಯಕ್ಕೆ ಸರ್ಕಾರ ಪ್ರೋತ್ಸಾಹ ನೀಡಲಿದೆ.

ಕೊಡಗು ಸೇರಿದಂತೆ ರಾಜ್ಯದಲ್ಲಿ ಪ್ರವಾಸೋದ್ಯಮ ಅವಕಾಶಗಳು ಇರುವ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬAಧಿಸಿದAತೆ ಮತ್ತು ಸ್ಥಳೀಯರಿಗೆ ಜೀವನ ನಿರ್ವಹಣೆಗಾಗಿ ಅನುಕೂಲ ಕಲ್ಪಿಸುವುದರ ಜತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಂಡಿದೆ. ಕರ್ನಾಟಕ ಪ್ರವಾಸೋದ್ಯಮ ನೀತಿ ೨೦೨೦-೨೬ರ ಅಡಿಯಲ್ಲಿ ಕೊಡಗು ಪೂರ್ಣ ಜಿಲ್ಲೆಯನ್ನು ಆದ್ಯತಾ ಪ್ರವಾಸಿ ತಾಣವನ್ನಾಗಿ ಗುರುತಿಸಲಾಗಿದೆ. ಕೊಡಗು ಒಳಗೊಂಡAತೆ ರಾಜ್ಯದ ಪ್ರವಾಸಿ ತಾಣಗಳ ಬಳಿ ಪ್ರವಾಸಿಗರಿಗೆ ಆತಿಥ್ಯ ಸೇವೆ ಒದಗಿಸಲು ಮುಂದೆ ಬರುವ ಮನೆ ಮಾಲೀಕರುಗಳಿಗೆ ಹೋಂ ಸ್ಟೇ ಯೋಜನೆಯಡಿ ಇಲಾಖೆಯಿಂದ ನೋಂದಣಿ ಮಾಡಲಾಗುತ್ತಿದೆ.
ಎಚ್.ಕೆ. ಪಾಟೀಲ್, ಪ್ರವಾಸೋದ್ಯಮ ಸಚಿವ+++

ಕೊಡಗು ಪ್ರವಾಸೋದ್ಯಮದಲ್ಲಿ ಉತ್ತಮ ಬೆಳವಣಿಗೆ ಸಾಧಿಸುತ್ತಿದೆ. ಕಾಲಕಾಲಕ್ಕೆ ಸರ್ಕಾರಗಳಿಂದಲೂ ಅಗತ್ಯ ಪ್ರೊತ್ಸಾಹ ಸಿಗುತ್ತಿದೆ. ಜಿಲ್ಲೆಯಲ್ಲಿ ಇನ್ನೂ ಸಾಕಷ್ಟು ಪ್ರವಾಸಿ ತಾಣಗಳು ಹೊರ ಜಗತ್ತಿಗೆ ಪರಿಚಯ ಆಗಬೇಕಿದೆ. ದುಬಾರೆಯಲ್ಲಿ ರ‍್ಯಾಫ್ಟಿಂಗ್‌ನAತಹ ಪ್ರವಾಸಿ ಆಕರ್ಷಣೆ ವರ್ಷದ ಕೆಲವು ತಿಂಗಳು ಮಾತ್ರ ಇರುತ್ತದೆ. ಉಳಿದ ಅವಧಿಯಲ್ಲಿ ರ‍್ಯಾಫ್ಟಿಂಗ್ ನಿರ್ವಾಹಕರಿಗೆ ಕೆಲಸ ಇರುವುದಿಲ್ಲ. ಇಂಥ ಸಂದರ್ಭದಲ್ಲಿ ಪರ್ಯಾಯ ವ್ಯವಸ್ಥೆ ಮಾಡಬೇಕಾಗುತ್ತದೆ.
ಸಿ.ಎಲ್. ವಿಶ್ವ, ಪ್ರವಾಸೋದ್ಯಮಿ, ದುಬಾರೆ