ಸೋಮವಾರಪೇಟೆ: ಸಹಕಾರ ಕ್ಷೇತ್ರದಲ್ಲಿ ರಾಜ್ಯದ ಮಟ್ಟಿಗೆ ಕೊಡಗು ಜಿಲ್ಲೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು.
ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ 1.06 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ನೂತನ ಕಟ್ಟಡವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಶೂನ್ಯ ಬಡ್ಡಿದರದಲ್ಲಿ 5 ಲಕ್ಷ ರೂ. ಸಾಲ ಮತ್ತು 15 ಲಕ್ಷ ರೂ. ಮಧ್ಯಮಾವಧಿ ಸಾಲವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿ, ರೈತರಿಗೆ ಸಹಾಯ ಮಾಡಿರುವ ಜಿಲ್ಲೆಯಾಗಿದೆ. ಬೇರೆ ಜಿಲ್ಲೆಗಳಲ್ಲಿ ಈ ಮಟ್ಟಿಗೆ ಸಾಧನೆಯಾಗಿಲ್ಲ ಎಂದು ಹೇಳಿದರು.
ಕೊಡಗು ಜಿಲ್ಲೆಯಲ್ಲಿ ಕೃಷಿಸಾಲ ನೀಡುವುದಕ್ಕೆ ತಾರತಮ್ಯವಿಲ್ಲ ಎಂದು ತಿಳಿದಿದ್ದೇನೆ. ಬೆಳೆಸಾಲ ನೀಡುವುದರಿಂದ ಸಂಘಕ್ಕೆ ಲಾಭವಿಲ್ಲ. ಆದರೂ ಅತಿಹೆಚ್ಚು ಬೆಳೆಸಾಲ ನೀಡುತ್ತಿರುವುದನ್ನು ಗಮನಿಸಿದಾಗ ಜಿಲ್ಲೆಯ ಸಹಕಾರ ಕ್ಷೇತ್ರ ರೈತಸ್ನೇಹಿಯಾಗಿದೆ ಎಂಬುದು ತಿಳಿಯುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಹಕಾರ ಸಂಘಗಳು ಇದ್ದರೆ ಮಾತ್ರ ರೈತರಿಗೆ ನ್ಯಾಯ ಸಿಗುತ್ತದೆ. ಇಲ್ಲದಿದ್ದರೆ ಶೋಷಣೆಗೆ ತುತ್ತಾಗಬೇಕಾಗುತ್ತದೆ. ಈ ಕಾರಣದಿಂದ ಸಹಕಾರಿಗಳು ಹಾಗೂ ನೌಕರರು ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಹಣ ದುರುಪಯೋಗಪಡಿಸಿಕೊಂಡರೆ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.
ಕೊಡಗಿನಲ್ಲಿ ಟೆನ್ಯೂರ್ ಸಮಸ್ಯೆಯಿಂದ ಆಸ್ತಿ ದಾಖಲಾತಿಗಳಿಲ್ಲದೆ ರೈತರು ಸಹಕಾರಿ ಸಂಘದಲ್ಲಿ ಸಾಲ ಪಡೆಯಲು ಸಾಧ್ಯವಾಗುತ್ತಿಲ್ಲ ಎಂಬುದು ತಿಳಿದಿದೆ. ಮುಖ್ಯಮಂತ್ರಿ ನೇತೃತ್ವದಲ್ಲಿ ಕಂದಾಯ ಹಾಗೂ ಅರಣ್ಯ ಸಚಿವರು, ಸ್ಥಳೀಯ ಶಾಸಕರ ಸಭೆಯನ್ನು ಕರೆದು, ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಲಾಗುವುದು ಎಂದು ಭರವಸೆ ನೀಡಿದರು.
ಕಳೆದ ವರ್ಷ ನಬಾರ್ಡ್ 5600 ಕೋಟಿ ರೂ.ಗಳನ್ನು ಕಡಿಮೆ ಬಡ್ಡಿದರದಲ್ಲಿ ರಾಜ್ಯಕ್ಕೆ ಬಿಡುಗಡೆ ಮಾಡಿತ್ತು. ಆದರೆ ಪ್ರಸಕ್ತ ವರ್ಷ 3260 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. ಈ ಕ್ರಮದಿಂದ ರಾಜ್ಯದ ರೈತರ ಮೇಲೆ ದುಷ್ಪರಿಣಾಮ ಬೀರಲಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರ ಹಣಕಾಸು ಮತ್ತು ಸಹಕಾರ ಸಚಿವರನ್ನು ಭೇಟಿ ಮಾಡಿ, ಹೆಚ್ಚಿನ ಹಣ ಬಿಡುಗಡೆಗೊಳಿಸುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ಬ್ರಿಟಿಷರ ಕಾಲದ 130 ಟೆನ್ಯೂರ್ ಕೊಡಗು ಜಿಲ್ಲೆಯಲ್ಲಿವೆ. ಜಿಲ್ಲೆಯ ರೈತರಿಗೆ ಸರಿಯಾದ ಆಸ್ತಿ ದಾಖಲೆಗಳಿಲ್ಲ. ಈಗ ಸಿ ಆ್ಯಂಡ್ ಡಿ ಭೂಮಿ ಮತ್ತು ಸೆಕ್ಷನ್-4 ಸರ್ವೇ, ಒತ್ತುವರಿ ತೆರವಿನ ಭೀತಿ ಜನರಲ್ಲಿದೆ. ಕೊಡಗಿನಲ್ಲಿ 1ಲಕ್ಷ ರೈತರಿಗೆ ನೇರವಾಗಿ ಸಾಲ ನೀಡುವುದಕ್ಕೆ ಸಚಿವರು ಯೋಜನೆ ರೂಪಿಸಬೇಕು ಎಂದು ಹೇಳಿದರು.
ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಪಿ.ಗಣಪತಿ ಮಾತನಾಡಿ, ಜಿಲ್ಲೆಯಲ್ಲಿ 73 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು, 37,616 ಸದಸ್ಯರಿದ್ದಾರೆ. 34,566 ಸದಸ್ಯರು ಸಾಲ ಪಡೆದುಕೊಂಡಿದ್ದಾರೆ. 775 ಕೋಟಿ ರೂ.ಗಳ ಕೆಸಿಸಿ ಸಾಲ ನೀಡಲಾಗಿದೆ. ಜಿಲ್ಲೆಯಲ್ಲಿ ಟೆನ್ಯೂರ್ ಸಮಸ್ಯೆಯನ್ನು ಸರ್ಕಾರ ಬಗೆಹರಿಸಿದರೆ 1.25 ಲಕ್ಷ ರೈತರು ಸಾಲ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಎಚ್.ಆರ್.ಸುರೇಶ್ ಮಾತನಾಡಿ, ಪ್ರಸಕ್ತ ವರ್ಷ ನಮ್ಮ ಸಂಘಕ್ಕೆ ದಾಖಲೆ ಎಂಬಂತೆ 1.40 ಕೋಟಿ ರೂ. ಆದಾಯ ಬಂದಿದೆ. ಮುರ‌್ನಾಲ್ಕು ವರ್ಷ ಸದಸ್ಯರಿಗೆ ಶೇ.25 ರಷ್ಟು ಲಾಭಾಂಶ ನೀಡಲಾಗಿದೆ ಎಮದು ತಿಳಿಸಿದರು.
ಸಂಘದ ಮಮತಾ ಅಶೋಕ್ ಕುಮಾರ್, ಮಾಜಿ ಸಚಿವ ಬಿ.ಎ.ಜೀವಿಜಯ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶರತ್‌ಶೇಖರ್, ಎಚ್.ಕೆ.ಮಾದಪ್ಪ, ಉಮೇಶ್ ಉತ್ತಪ್ಪ, ಜಲಜಾ ಶೇಖರ್, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಪುರುಷೋತ್ತಮ್, ಸಹಕಾರ ಸಂಘದ ಉಪನಿಬಂಧಕ ವಿಜಯಕುಮಾರ್, ಸಂಘದ ನಿರ್ದೇಶಕರಾದ ಎನ್.ಎಸ್.ಪರಮೇಶ್, ವಿ.ಎನ್.ನಾಗರಾಜ್, ಜಿ.ಪಿ.ಸುನಿಲ್ ಕುಮಾರ್, ಕೆ.ಜಿ.ದಿನೇಶ್, ಸಿ.ಇ.ವೆಂಕಟೇಶ್, ಜಿ.ಇ.ಸುರೇಶ್, ಪುಷ್ಪಾ ಸುರೇಶ್, ಸುಮಿತ್ರಾ ಮಹೇಶ್, ವಾಣಿ ಪ್ರಸಾದ್ ಇದ್ದರು.