ಜಿಲ್ಲೆ

ಏಪ್ರಿಲ್ ೨೨, ೨೩ ರಂದು ಐರಿ ಜನಾಂಗದ ಕೌಟುಂಬಿಕ ಕ್ರಿಕೆಟ್

reportermys

ವಿಜಯವಾಣಿ ಸುದ್ದಿಜಾಲ ಮಡಿಕೇರಿ

ಕೊಡಗಿನ ಐರಿ ಜನಾಂಗದ ಮಧ್ಯೆ ೯ನೇ ವರ್ಷದ ಕೌಟುಂಬಿಕ ಕ್ರಿಕೆಟ್ ಪಂದ್ಯಾವಳಿ ಏಪ್ರಿಲ್ ೨೨ ಮತ್ತು ೨೩ ರಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ. ಈ ವರ್ಷ ಐರಿ ಮಕ್ಕಡ ಕೂಟ ಆತಿಥ್ಯ ವಹಿಸಿದೆ. ಕೊಡಗು ಐರಿ ಸಮಾಜದ ಸಹಯೋಗದಲ್ಲಿ ಪಂದ್ಯಾವಳಿ ನಡೆಯಲಿದೆ.

ಈ ಬಾರಿಯ ಪಂದ್ಯಾವಳಿ ಆಯೋಜನೆ ಬಹಳ ವಿಭಿನ್ನವಾಗಿರಲಿದೆ. ಕ್ರಿಕೆಟ್ ಮಾತ್ರವಲ್ಲದೆ ಮಹಿಳೆಯರಿಗೆ ಹಗ್ಗಜಗ್ಗಾಟ, ಜನಾಂಗದ ಹೆಣ್ಣುಮಕ್ಕಳಿಗೆ ಪ್ರದರ್ಶನ ಕ್ರಿಕೆಟ್ ಪಂದ್ಯಾಟ ಹಾಗೂ ಇತರ ಆಟೋಟ ಸ್ಪರ್ಧೆ ನಡೆಯಲಿವೆ. ಪುರುಷರಿಗೆ ಮತ್ತು ಮಹಿಳೆಯರಿಗೆ
೧೦೦ ಮೀಟರ್ ಓಟ, ಹಿರಿಯ ಪುರುಷರು ಮತ್ತು ವಿವಾಹಿತ ಮಹಿಳೆಯರಿಗೆ ೧೦೦ ಮೀಟರ್ ಓಟ, ಪುಟಾಣಿಗಳಿಗೆ ವಿವಿಧ ಬಗೆಯ ಆಟೋಟ ಹಾಗೂ ಹಲವು ಬಗೆಯ ಮನರಂಜನಾ ಸ್ಪರ್ಧೆ ಆಯೋಜಿಸಲಾಗುತ್ತದೆ ಎಂದು ಆಯೋಜನಾ ಸಮಿತಿ ಸಂಚಾಲಕ ಐಮಂಡ ಗೋಪಾಲ್ ಸೋಮಯ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕ್ರಿಕೆಟ್ ಸೇರಿದಂತೆ ವಿವಿಧ ಸ್ಪರ್ಧೆಗಳಲ್ಲಿ ಸಮಗ್ರ ಚಾಂಪಿಯನ್ ಆಗುವ ಕುಟುಂಬಕ್ಕೆ ಜಿಲ್ಲೆಯಲ್ಲೇ ಇದೇ ಮೊದಲ ಬಾರಿಗೆ ಮರದಲ್ಲಿ ಕೆತ್ತನೆ ಮಾಡಲಾಗುವ ಆಕರ್ಷಕ ಐನ್‌ಮನೆ ಮಾದರಿಯನ್ನ ಪ್ರಶಸ್ತಿಯಾಗಿ ನೀಡಲಾಗುತ್ತದೆ. ಕೊಡಗಿನ ಐನ್‌ಮನೆಗಳು ಐರಿ ಜನಾಂಗ ದ ಕೊಡುಗೆಯಾಗಿದ್ದು, ಆ ಪರಂಪರೆಯನ್ನ ಸ್ಮರಿಸುವ ನಿಟ್ಟಿನಲ್ಲಿ ಐನ್‌ಮನೆ ಮಾದರಿಯನ್ನು ಪ್ರಶಸ್ತಿ ರೂಪದಲ್ಲಿ ನೀಡಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.

ಐನ್‌ಮನೆ ಮಾದರಿಯನ್ನು ಹೊಸ್ಕೇರಿ ಗ್ರಾಮದ ಕರಕುಶಲಕರ್ಮಿ ಐನಂಗಡ ಉದಯ್ ಕುಮಾರ್ ಕೆತ್ತನೆ ಮಾಡಲಿದ್ದಾರೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಐರಿ ಜನಾಂಗದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುತ್ತದೆ.

ಕ್ರಿಕೆಟ್ ಪಂದ್ಯಾಟದಲ್ಲಿ ೨೫ ತಂಡ ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿನ್ನರ್ ಮತ್ತು ರನ್ನರ್ ಅಪ್ ತಂಡಕ್ಕೆ ಆಕರ್ಷಕ ನಗದು ಮತ್ತು ಟ್ರೋಫಿ ನೀಡಲಾಗುತ್ತದೆ. ಬೆಸ್ಟ್ ಬ್ಯಾಟ್ಸ್ಮನ್, ಬೆಸ್ಟ್ ಬೌಲರ್, ಅತ್ಯಧಿಕ ರನ್ ಸ್ಕೋರರ್ ಸೇರಿದಂತೆ ಹಲವು ವೈಯಕ್ತಿಕ ವಿಭಾಗಗಳಲ್ಲೂ ಆಕರ್ಷಕ ನಗದು ಮತ್ತು ಟ್ರೋಫಿ ನೀಡಲಾಗುತ್ತದೆ.

ಕ್ರಿಕೆಟ್ ಪಂದ್ಯಾಟದಲ್ಲಿ ಪಾಲ್ಗೊಳ್ಳುವ ತಂಡಗಳು ನೋಂದಣಿಗೆ ಐಮಂಡ ಶಬರಿ ನಾಚಪ್ಪ (೯೫೩೫೬೧೯೬೮೪), ಆಯಪಂಡ ದೀಪು ಗಣಪತಿ (೮೮೬೧೨೮೭೭೪೦), ಕ್ರೀಡಾಕೂಟದ ಬಗ್ಗೆ ಹೆಚ್ಚಿನ ಮಾಹಿತಿಗೆ ಮುಲೈರೀರ ಮೋಹನ್ (೯೪೪೨೩ ೬೩೨೪೯), ಐಮಂಡ ಗೊಪಾಲ್ ಸೋಮಯ್ಯ (೮೧೯೭೬೦೨೦೫೧) ಅವರನ್ನು ಸಂಪರ್ಕಿಸಬಹುದು.