ಹಾತೂರು ಶಾಲಾ ಮೈದಾನದಲ್ಲಿ ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಆಯೋಜಿಸಿದ್ದ ಕ್ರಿಕೆಟ್ ಪಂದ್ಯಾವಳಿಗೆ ಬ್ಯಾಟ್ ಬೀಸುವ ಮೂಲಕ ಕೊರಕುಟ್ಟಿರ ಸರಚಂಗಪ್ಪ ಚಾಲನೆ ನೀಡಿದರು. 
ಜಿಲ್ಲೆ

ಕೊಡಗು ಹೆಗ್ಗಡೆ ಕ್ರೀಡೋತ್ಸವಕ್ಕೆ ಚಾಲನೆ

ಗೋಣಿಕೊಪ್ಪ: ಕೊಡವ ಭಾಷಿಕ ಜನಾಂಗದ ಕ್ರೀಡಾಕೂಟಕ್ಕೆ ಸರ್ಕಾರದ ವತಿಯಿಂದ ಪ್ರತಿವರ್ಷ ವಿಶೇಷ ಅನುದಾನ ಮಂಜೂರು ಮಾಡುವಂತೆ ಕೊಡವ ತಕ್ಕ್ ಜನಾಂಗ ಕಾರಡ ಒಕ್ಕೂಟದ ಅಧ್ಯಕ್ಷ ಕೊರಕುಟ್ಟಿರ ಸರಚಂಗಪ್ಪ ಒತ್ತಾಯಿಸಿದರು.

ಗೋಣಿಕೊಪ್ಪ ಸಮೀಪದ ಹಾತೂರು ಶಾಲಾ ಮೈದಾನದಲ್ಲಿ ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಆಯೋಜಿಸಿರುವ ಮೂರು ದಿನಗಳ ಕ್ರೀಡೋತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ಕೊಡಗಿನಲ್ಲಿರುವ 18 ಮೂಲ ನಿವಾಸಿಗಳು ತಮ್ಮ ಕಲೆ, ಸಂಸ್ಕೃತಿಯನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. ಸಮಾಜಕ್ಕೆ ತಮ್ಮದೇ ಆದ ಅಪಾರ ಕೊಡಗೆ ನೀಡಿದ್ದಾರೆ. ಇಂದಿಗೂ ಮೂಲ ನಿವಾಸಿಗಳು ಆರ್ಥಿಕವಾಗಿ ಬಹಳ ಹಿಂದುಳಿದಿದ್ದಾರೆ. ಆದರೆ ತಮ್ಮ ಆಚಾರ, ವಿಚಾರ, ಪದ್ಧತಿ, ಪರಂಪರೆಯನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಇತ್ತೀಚೆಗೆ ಕ್ರೀಡಾಕೂಟವನ್ನು ಎಲ್ಲ ಭಾಗದಲ್ಲೂ ಆಯೋಜಿಸುತ್ತ ಬರುತ್ತಿದ್ದಾರೆ. ಆದರೆ ಅನುದಾನವಿಲ್ಲದೆ ಕ್ರೀಡಾಕೂಟ ಮುಂದುವರಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವು ಪ್ರತಿ ವರ್ಷ ಮೂಲ ನಿವಾಸಿಗಳು ನಡೆಸುವ ಕ್ರೀಡಾಕೂಟಕ್ಕೆ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದರು.

ಕೊಡಗು ಹೆಗ್ಗಡೆ ಸಮಾಜದ ಕಳೆದ 21 ವರ್ಷಗಳಿಂದ ಕ್ರೀಡೋತ್ಸವವನ್ನು ಆಚರಿಸುತ್ತ ಬರುತ್ತಿದೆ. ಕೊಡಗು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಹೆಗ್ಗಡೆ ಸಮಾಜದ ಜನಾಂಗವು ವಾಸವಿದ್ದು, 10 ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ. ವಿದ್ಯಾಭ್ಯಾಸ ಹಾಗೂ ಕ್ರೀಡೆಗೆ ಒತ್ತು ನೀಡುವ ಸಲುವಾಗಿ ವಾರ್ಷಿಕವಾಗಿ ಸಮಾಜದವರು ಒಂದೆಡೆ ಸೇರುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಸರ್ಕಾರವು ಮುಂದಿನ ಸಾಲಿನಿಂದ ಹೆಗ್ಗಡೆ ಸಮಾಜದ ಕ್ರೀಡೋತ್ಸವಕ್ಕೆ ಆರ್ಥಿಕ ಸಹಕಾರ ನೀಡಬೇಕು ಹಾಗೂ ರಾಜಕೀಯ ಮೀಸಲಾತಿಗೆ ಅವಕಾಶ ಕಲ್ಪಿಸಿಕೊಡಬೇಕೆಂದರು.

ಹೆಗ್ಗಡೆ ಸಮಾಜದ ಅಧ್ಯಕ್ಷ ಪಡಿಞರಂಡ ಜಿ.ಅಯ್ಯಪ್ಪ ಮಾತನಾಡಿ, ಕಳೆದ 21 ವರ್ಷಗಳಿಂದ ಸಮಾಜದವರ ಸಹಕಾರದಿಂದ ಕ್ರೀಡೋತ್ಸವವನ್ನು ವಾರ್ಷಿಕವಾಗಿ ಆಯೋಜಿಸುತ್ತ ಬರಲಾಗಿದೆ. ಕೊಡಗಿನ ಎಲ್ಲ ಭಾಗದಿಂದ ಸಮುದಾಯದವರು ಒಂದೆಡೆ ಸೇರುವ ಮೂಲಕ ಒಗ್ಗಟ್ಟನ್ನು ಮತ್ತಷ್ಟು ಗಟ್ಟಿಗೊಳಿಸಲಾಗುತ್ತಿದೆ ಎಂದರು.

ಕ್ರೀಡೋತ್ಸವದಲ್ಲಿ ಪೊನ್ನಂಪೇಟೆ, ಹಾತೂರು, ಬಿಟ್ಟಂಗಾಲ, ಒಂಟಿಯಂಗಡಿ, ಹಾಲುಗುಂದ, ಪಾರಾಣೆ, ಮೈತಾಡಿ, ಕಡಿಯತ್ತೂರು, ಬೆಟ್ಟಗೇರಿ ಹಾಗೂ ಕುಶಾಲನಗರ 10 ವಲಯಗಳು ಭಾಗವಹಿಸಿದ್ದವು. ಸಮಾಜದವರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಮೈದಾನದ ಸುತ್ತಲೂ ದುಡಿಕೊಟ್ಟಿನ ಮೂಲಕ ಮೆರವಣಿಗೆ ನಡೆಸಿದರು. ಧ್ವಜಾರೋಹಣದ ನಂತರ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಯಿತು.