ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿರುವ ಕಾಂಗ್ರೆಸ್ ಮಾಜಿ ಜಿಲ್ಲಾಧ್ಯಕ್ಷ ಮುಕ್ಕಾಟಿರ ಶಿವು ಮಾದಪ್ಪ ಪಕ್ಷದಲ್ಲಿ ಮುಂದುವರಿಯಲು ವಿರಾಜಪೇಟೆ ವಿಧಾನಸಭೆ ಕ್ಷೇತ್ರದ ಟಿಕೆಟ್‌ಗೆ ಬೇಡಿಕೆ ಇಟ್ಟಿದ್ದಾರೆ. ೨೦೨೩ ರ ಚುನಾವಣೆಯಲ್ಲಿ ನನಗೆ ಟಿಕೆಟ್ ಖಾತ್ರಿ ಪಡಿಸಿದ್ದಲ್ಲಿ ಮಾತ್ರ ಕಾಂಗ್ರೆಸ್ಸಿನಲ್ಲಿ ಮುಂದುವರಿಯುತ್ತೇನೆಂದು ವರಿಷ್ಠರಿಗೆ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಮೂರು ವರ್ಷ ಹಿಂದೆ ಜಿಲ್ಲಾಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಿರುವುದಕ್ಕೆ ಕಾರಣ ತಿಳಿಸದಿರುವುದು ಹಾಗೂ ತದನಂತರ ಪಕ್ಷದಲ್ಲಿ ಯಾವ ಸ್ಥಾನಮಾನ ನೀಡದೆ ಕಡೆಗಣಿಸಿರುವುದಕ್ಕೆ ಅಸಮಾಧಾನಗೊಂಡು ಕಾಂಗ್ರೆಸ್ ಜಿಲ್ಲಾಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಅವರಿಗೆ ರಾಜೀನಾಮೆ ಪತ್ರ ನೀಡಿದ್ದಾರೆ.
ರಾಜೀನಾಮೆ ನಿರ್ಧಾರ ಪ್ರಕಟಿಸುತ್ತಿದ್ದಂತೆ ವಿಧಾನ ಪರಿಷತ್ ಮಾಜಿ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಸಂಧಾನದ ಮಾತುಕತೆ ನಡೆಸಿ ದ್ದರು. ತದನಂತರ ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವಕುಮಾರ್, ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಪಕ್ಷ ತೊರೆಯದಂತೆ ಮನವೊಲಿಸುವ ಪ್ರಯತ್ನ ನಡೆಸಿದ್ದರು.
ಕೆಪಿಸಿಸಿ ಅಥವಾ ಎಐಸಿಸಿಯಲ್ಲಿ ಹುದ್ದೆ ನೀಡುವ ಭರವಸೆಯನ್ನು ಕಾಂಗ್ರೆಸ್ ನಾಯಕರು ಮನವೊಲಿಕೆ ಸಂದರ್ಭ ನೀಡಿದ್ದರು. ನನ್ನೂರಿನಲ್ಲಿ ನನ್ನ ಜನರ ನಡುವೆ ಕೆಲಸ ಮಾಡುವ ಜವಾಬ್ದಾರಿ ನನಗೆ ಬೇಕು. ಕೆಪಿಸಿಸಿ, ಎಐಸಿಸಿ ಹುದ್ದೆ ತೆಗೆದುಕೊಂಡು ನಾನೇನು ಮಾಡಲಿ ಎಂದು ಶಿವು ಮಾದಪ್ಪ ಪ್ರಶ್ನಿಸಿದ್ದಾರೆ.
ಕುಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷನಾಗಿ, ಜಿಲ್ಲಾ ಪಂಚಾಯಿತಿ ಸದಸ್ಯನಾಗಿ ಕಾರ್ಯನಿರ್ವಹಿಸಿದ್ದಾರೆ. ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ ಕೆಲಸ ಮಾಡಿದ್ದಾರೆ. ಜಿಲ್ಲಾ ಉಸ್ತುವಾರಿಯಾಗಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುಸೇನ್ ಅವರನ್ನು ತರಾಟೆಗೆ ತೆಗೆದುಕೊಂಡ ಕಾರಣಕ್ಕಾಗಿ ಏಕಾಏಕೀ ಜಿಲ್ಲಾಧ್ಯಕ್ಷ ಸ್ಥಾನದಿಂದ ಪದಚ್ಯುತಗೊಳಿಸಲಾಗಿತ್ತು. ಪದಚ್ಯುತ ಸ್ಥಾನಕ್ಕೆ ಕೆ.ಕೆ. ಮಂಜುನಾಥ್‌ಕುಮಾರ್ ಅವರನ್ನು ನೇಮಿಸಲಾಗಿತ್ತು.
ಕೊಡಗಿನ ಐವರು ನಾಯಕರಿಗೆ ಕೆಪಿಸಿಸಿಯಲ್ಲಿ ಅವಕಾಶ ನಿಡಲಾಗಿದೆ. ಈ ಸಂದರ್ಭ ಶಿವು ಮಾದಪ್ಪ ಅವರನ್ನು ಪರಿಗಣಿಸಿರಲಿಲ್ಲ. ಕೆಪಿಸಿಸಿ ಕಾರ್ಯದರ್ಶಿ ಹುದ್ದೆಗೆ ನೇಮಕ ಮಾಡುವಂತೆ ಜಿಲ್ಲೆಯ ಮುಖಂಡರು ವರಿಷ್ಠರ ಗಮನ ಸೆಳೆದಿದ್ದಾರೆ. ಇದೀಗ ಕೆಪಿಸಿಸಿ ಹುದ್ದೆ ಬಗ್ಗೆ ಶಿವು ಮಾದಪ್ಪ ಆಸಕ್ತಿ ಕಳೆದುಕೊಂಡಿದ್ದಾರೆ.
ಕೆಪಿಸಿಸಿ ಕಾನೂನು ಘಟಕ ಅಧ್ಯಕ್ಷರಾಗಿರುವ ವಕ್ತಾರ ಎ.ಎಸ್. ಪೊನ್ನಣ್ಣ ವಿರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ಖಚಿತ ಎನ್ನಲಾಗುತ್ತದೆ. ಏತನ್ಮಧ್ಯೆ, ಕಾಂಗ್ರೆಸ್ ಟಿಕೆಟ್ ಪಡೆಯಲು ಮಾಜಿ ಎಂಎಲ್ಸಿ ಶಾಂತೆಯಂಡ ವೀಣಾ ಅಚ್ಚಯ್ಯ ಪ್ರಯತ್ನ ತೀವ್ರಗೊಳಿಸಿ ದ್ದಾರೆ. ಇವರಿಬ್ಬರ ಪೈಕಿ ಒಬ್ಬರ ಸ್ಪರ್ಧೆ ಖಚಿತವಾಗಿದೆ. ಹೀಗಿರುವಾಗ, ಶಿವು ಮಾದಪ್ಪ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸುವ ಸಾಧ್ಯತೆ ತೀರ ವಿರಳ. ಹೀಗಾಗಿ, ಕಾಂಗ್ರೆಸ್ ರಾಜಕೀಯ ಮುಗಿದ ಅಧ್ಯಯವಾಗಲಿದೆ.
ಸ್ಪರ್ಧೆ ಖಚಿತ
ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ೨೦೨೩ ರಲ್ಲಿ ಸ್ಪರ್ಧಿಸುವುದು ಖಚಿತ ಎಂದು ಕಾಂಗ್ರೆಸ್ಸಿಗೆ ರಾಜೀನಾಮೆ ಸಲ್ಲಿಸಿರುವ ಮುಕ್ಕಾಟೀರ ಶಿವು ಮಾದಪ್ಪ ವಿಜಯವಾಣಿಗೆ ತಿಳಿಸಿದ್ದಾರೆ. ನನಗೆ ಎಂಎಲ್‌ಎ ಟಿಕೆಟ್ ಘೋಷಿಸಿದರೆ ಕಾಂಗ್ರೆಸ್ಸಿನಲ್ಲಿ ಮುಂದುವರಿಯುವುದಾಗಿ ನನ್ನೊಂದಿಗೆ ಮಾತನಾಡಿದವರಿಗೆ ಸ್ಪಷ್ಟವಾಗಿ ಹೇಳಿದ್ದೇನೆ. ಕೆಪಿಸಿಸಿ, ಎಐಸಿಸಿ ಹುದ್ದೆ ನನಗೆ ಬೇಕಾಗಿಲ್ಲ ಎಂದಿದ್ದಾರೆ.
ಜಿಲ್ಲಾಧ್ಯಕ್ಷ ಸ್ಥಾನದಿಂದ ಬದಲಾಯಿಸುವಾಗ ಕಾರಣ ತಿಳಿಸಲಿಲ್ಲ. ತದನಂತರ ಯಾವ ಜವಾಬ್ದಾರಿಯೂ ನೀಡಿಲ್ಲ. ಇಷ್ಟು ವರ್ಷ ಜವಾಬ್ದಾರಿ ನೀಡುವ ನಿರೀಕ್ಷೆಯಲ್ಲಿದ್ದೆ. ಈಗ ಅನಿವಾರ್ಯವಾಗಿ ಪಕ್ಷ ತೊರೆಯುವ ಸಮಯ ಬಂದಿದೆ. ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಪಕ್ಷಕ್ಕೆ ಸೇರುತ್ತೇನೆ. ನಾನು ರಾಜಕೀಯ ಸನ್ಯಾಸಿಯಲ್ಲ ಎಂದಿದ್ದಾರೆ.
ಗ್ರೂಪ್‌ನಿಂದ ನಿರ್ಗಮನ
ರಾಜೀನಾಮೆ ವಿಚಾರ ಬಹಿರಂಗವಾಗುತ್ತಿದ್ದಂತೆ ರಾಜೀನಾಮೆ ತಡೆಹಿಡಿಯಲಾಗಿದೆ. ಯಾರೂ ಗೊಂದಲಕ್ಕೆ ಒಳಗಾಗಬಾರದೆಂದು ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಹೇಳಿಕೆ ಬಿಡುಗಡೆ ಮಾಡಿದ್ದರು. ಆದರೆ, ತನ್ನ ರಾಜೀನಾಮೆ ನಿರ್ಧಾರಕ್ಕೆ ಅಂಟಿಕೊಂಡಿರುವ ಶಿವು ಮಾದಪ್ಪ ಕಾಂಗ್ರೆಸ್ಸಿನ ವಾಟ್ಸ್‌ಆ್ಯಪ್ ಗ್ರೂಪ್‌ಗಳಿಂದ ನಿರ್ಗಮಿಸಿದ್ದಾರೆ. ಆ ಮೂಲಕ ಬಹುತೇಕ ಕಾಂಗ್ರೆಸ್‌ನಿಂದ ಶಿವು ಮಾದಪ್ಪ ಹೊರಗೆ ಹೋಗು ವುದು ಖಚಿತವಾಗಿದೆ.
ಪೊಲೀಸ್ ದೂರು
ಮಡಿಕೇರಿ ಚಲೋ ಹಾಗೂ ಜನಜಾಗೃತಿ ಸಮಾವೇಶ ಘೋಷಿತ ದಿನ ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವ ಜಿಲ್ಲಾಡಳಿತದ ಕ್ರಮ ಸ್ವಾಗತಿಸಿ ಶಿವು ಮಾದಪ್ಪ ನೀಡಿದ್ದ ಹೇಳಿಕೆಯಲ್ಲಿ ಎಸ್‌ಡಿಪಿಐ ಮುಖಂಡರ ಹೆಸರು ಸೇರಿಸಿ, ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿರುವ ಬಗ್ಗೆ ಕುಟ್ಟ ಸರ್ಕಲ್ ಇನ್ಸ್‌ಪೆಕ್ಟರ್‌ಗೆ ಶಿವು ಮಾದಪ್ಪ ದೂರು ನೀಡಿದ್ದಾರೆ.
ನನ್ನ ಹೇಳಿಕೆಯನ್ನು ತಿರುಚಿ ಎಸ್‌ಡಿಪಿಐ ಸಂಘಟನೆಯ ಪತ್ರಿಕಾಗೋಷ್ಠಿಯಾಗಿ ಬಿಂಬಿಸಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡುತ್ತಿ
ರುವುದು ನನ್ನ ಗಮನಕ್ಕೆ ಬಂದಿದೆ. ನನ್ನ ವರ್ಚಸ್ಸು ಹಾಗೂ ಹೆಸರನ್ನು ದುರ್ಬಳಕೆ ಮಾಡಿಕೊಂಡು ರಾಜಕೀಯವಾಗಿ ವೈರತ್ವ ಹಾಗೂ ನಷ್ಟ ಉಂಟು ಮಾಡುವ ಹುನ್ನಾರ ಇದಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
**
ಕಾಂಗ್ರೆಸ್ಸಿನಲ್ಲಿ ಶಿವು ಮಾದಪ್ಪ ಮುಂದುವರಿಯುವಂತೆ ಮಾಡಲು ಅವರ ಮನವೊಲಿಸಲಾಗುತ್ತಿದೆ. ಅಪಾರ ಬೆಂಬಲಿಗರನ್ನು ಹೊಂದಿರುವ ಶಿವುಗೆ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ನೀಡುವಂತೆ ವರಿಷ್ಠರ ಗಮನ ಸೆಳೆಯಲಾಗಿದೆ. ಜಿಲ್ಲಾಧ್ಯಕ್ಷ ಸ್ಥಾನದಿಂದ ಬದಲಾವಣೆ ಮಾಡಿರುವುದು ಮತ್ತು ತದನಂತರ ಜವಾಬ್ದಾರಿ ನೀಡದರಿಂದ ಸಹಜವಾಗಿ ಬೇಸರಗೊಂಡಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ತೊರೆಯುವುದು ಸರಿಯಲ್ಲ. ಶಾಂತೆಯಂಡ ವೀಣಾ ಅಚ್ಚಯ್ಯ, ಮಾಜಿ ಎಂಎಲ್ಸಿ.
**
ಕೆಪಿಸಿಸಿ ಕಾರ್ಯಾಧ್ಯಕ್ಷ ಧ್ರುವಕುಮಾರ್ ಕೂಡ ಶಿವು ಮಾದಪ್ಪ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಕೆಪಿಸಿಸಿಯಲ್ಲಿ ಸೂಕ್ತ ಸ್ಥಾನಮಾನ ನೀಡುವಂತೆ ಜಿಲ್ಲಾ ಕಾಂಗ್ರೆಸ್ಸಿನಿಂದ ಶಿಫಾರಸ್ಸು ಮಾಡಲಾಗಿದೆ. ನಾನು ಸಹ ಪಕ್ಷದಲ್ಲಿ ಮುಂದುವರಿಯುವಂತೆ ವೈಯುಕ್ತಿಕವಾಗಿ ಮನವಿ ಮಾಡಿದ್ದೇನೆ. ತೀತೀರ ಧರ್ಮಜ ಉತ್ತಪ್ಪ, ಕಾಂಗ್ರೆಸ್ ಜಿಲ್ಲಾಧ್ಯಕ್ಷರು.