ಮಡಿಕೇರಿ: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೇರಳ ಶ್ರೀಮಂಗಲ ಗ್ರಾಮದಲ್ಲಿ ಪತ್ನಿಯನ್ನು ಗುಂಡಿಕ್ಕಿ ಹತ್ಯೆಗೈದಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಬಟ್ಟೀರ ಷಶ್ಮಾ (೪೧) ಎಂಬಾಕೆಯನ್ನು ಪತಿ ಬಟ್ಟೀರ ಕಿಶನ್ ಗೋಪಾಲ್ ಗುಂಡಿಕ್ಕಿ ಹತ್ಯೆಗೈದಿದ್ದಾನೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಹತ್ಯೆ ನಡೆದಿದೆ ಎನ್ನಲಾಗಿದೆ. ಮಂಗಳವಾರ ರಾತ್ರಿ ೯.೪೫ ರ ಹೊತ್ತಿಗೆ ಪತ್ನಿಗೆ ಗುಂಡಿಕ್ಕಿದ್ದು, ಆಕೆ ಸ್ಥಳದಲ್ಲಿಯೇ ಜೀವ ಕಳೆದುಕೊಂಡಿದ್ದಾರೆ. ತದನಂತರ ಕಿಶನ್ ನೆರಮನೆಯವರ ಮೊಬೈಲ್‌ಗೆ ಕರೆ ಮಾಡಿ, ಪತ್ನಿ ಗುಂಡಿಕ್ಕಿಕೊಂಡಿರುವುದಾಗಿ ಮಾಹಿತಿ ನೀಡಿದ್ದ.
ಮಧ್ಯರಾತ್ರಿ ೧೨ ಗಂಟೆ ಹೊತ್ತಿಗೆ ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಶ್ರೀನಿವಾಸ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಮನೆಗೆ ಭೇಟಿ ನೀಡಿದ್ದರು. ವಿಚಾರಣೆ ನಡೆಸಿದ್ದ ವೇಳೆ ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಗುಂಡಿಕ್ಕಿರುವುದಾಗಿ ಪತಿ ಮಾಹಿತಿ ನೀಡಿದ್ದ ಎನ್ನಲಾಗಿದೆ. ಪತ್ನಿ ಹತ್ಯೆ ಆರೋಪ ದಡಿ ಕಿಶನ್ ಗೋಪಾಲ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಷಶ್ಮಾ- ಕಿಶನ್ ದಂಪತಿಯ ಏಕೈಕ ಪುತ್ರ ಬೆಂಗಳೂರಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾನೆ. ಮನೆಯಲ್ಲಿ ಪತಿ- ಪತ್ನಿ ಮಾತ್ರ ಇದ್ದರು. ರಾತ್ರಿ ವೇಳೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಏರ್ಪಟ್ಟಿತ್ತು. ಈ ವೇಳೆ ಬಂದೂಕಿನಿಂದ ಪತ್ನಿಗೆ ಗುಂಡು ಹಾರಿಸಿದ್ದು, ಪತ್ನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಪೊಲೀಸ್ ವರಿಷ್ಠಾಧಿಕಾರಿ ಎಂ.ಎ. ಅಯ್ಯಪ್ಪ, ಡಿವೈಎಸ್ಪಿ ಗಜೇಂದ್ರ ಪ್ರಸಾದ್, ಸರ್ಕಲ್ ಇನ್ಸ್‌ಪೆಕ್ಟರ್ ಅನೂಪ್ ಮಾದಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.