ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೆರಳುತ್ತಿದ್ದ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣದ ಮುಜುಗರದಿಂದ ಪಾರಾಗಲು ಬಿಜೆಪಿ ಉಲ್ಟಾ ಹೊಡೆಯಲಾರಂಭಿಸಿದೆ. ಮೊಟ್ಟೆ ಎಸೆದಿರುವ ಪ್ರಕರಣಕ್ಕೂ ಬಿಜೆಪಿಗೂ ಸಂಬಂಧವಿಲ್ಲ ಎಂದು ಶಾಸಕದ್ವಯರು ಸೇರಿದ್ದಂತೆ ಬಿಜೆಪಿ ಮುಖಂಡರು ಹೇಳಿಕೆ ನೀಡಿದ್ದಾರೆ.
ಮೊಟ್ಟೆ ಎಸೆದಿರುವ ಪ್ರಕರಣವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಗೃಹ ಸಚಿವ ಆರಗ ಜ್ಞಾನೇಂದ್ರ, ಕಂದಾಯ ಸಚಿವ ಆರ್. ಅಶೋಕ್ ಗುರುವಾರವೇ ಖಂಡಿಸಿದ್ದರು. ಕಾಂಗ್ರೆಸ್, ಜೆಡಿಎಸ್, ಎಸ್‌ಡಿಪಿಐ ಮುಖಂಡರು ಕೂಡ ಬಲವಾಗಿ ಖಂಡಿಸಿದ್ದರು.
ಮೊಟ್ಟೆ ಎಸೆತ ವಿಚಾರದಿಂದ ತಮಗೆ ಪ್ರತಿಕೂಲ ಪರಿಸ್ಥಿತಿ ನಿರ್ಮಾಣ ಮಾಡುತ್ತಿರುವುದು ಸ್ಪಷ್ಟವಾಗುತ್ತಿದ್ದಂತೆ ಬಿಜೆಪಿ ಜನಪ್ರತಿನಿಧಿಗಳು, ಮುಖಂಡರು ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದ್ದಾರೆ. ಮೊಟ್ಟೆ ಎಸೆದವರು ಬಿಜೆಪಿಯವರೇ ಅಲ್ಲ ಎಂದು ಹೇಳುವುದರ ಮೂಲಕ ಮೊಟ್ಟೆ ಎಸೆದವರಿಂದ ಅಂತರ ಕಾಯ್ದುಕೊಳ್ಳುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಕೆಲವರು ಜೇಬಿನಲ್ಲಿ ಮೊಟ್ಟೆ ಹಾಕಿಕೊಂಡು ಬಂದು ಸಿದ್ದರಾಮಯ್ಯ ತೆರಳುತ್ತಿದ್ದ ಕಾರಿನ ಮೇಲೆ ಎಸೆದಿದ್ದಾರೆ. ಆ ಮೂಲಕ ಸಿದ್ದರಾಮಯ್ಯ ವಿರುದ್ಧದ ಪ್ರತಿಭಟನೆ ಬೇರೆ ಹಾದಿ ಹಿಡಿಯುವಂತೆ ಮಾಡಿದ್ದಾರೆ. ಇದು ನಮಗೆ ಹಿನ್ನಡೆವುಂಟು ಮಾಡಿದೆ ಎಂದು ಬಿಜೆಪಿ ಮುಖಂಡರು ಕಸಿವಿಸಿ ಅನುಭವಿಸುತ್ತಿದ್ದಾರೆ.
ತಿತಿಮತಿಯಲ್ಲಿ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ದರ್ಶನ್ ಜೋಯಪ್ಪ ನೇತೃತ್ವದಲ್ಲಿ ಕಪ್ಪುಬಾವುಟ ಪ್ರದರ್ಶಿಸಿದ ಬಳಿಕ ದಿಢೀರ್ ಆಗಿ ಮಡಿಕೇರಿಯ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ಪ್ರತಿಭಟನೆಗೆ ಕರೆ ನೀಡಲಾಗಿತ್ತು. ಅಂತಿಮ ಕ್ಷಣದಲ್ಲಿ ಕರೆ ನೀಡಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮುಖಂಡರು ಆಗಮಿಸಿರಲಿಲ್ಲ. ನಾಯಕತ್ವ ಇಲ್ಲದ ಹೋರಾಟದಿಂದ ಮೊಟ್ಟೆ ಎಸೆತ ನಡಿದೆ ಎಂಬ ಚರ್ಚೆ ನಡೆಯುತ್ತಿದೆ.
೯ ಜನರ ಬಂಧನ
ಗುಡ್ಡೆಹೊಸೂರಿನಲ್ಲಿ ಗುರುವಾರ ನಡೆದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಕುಶಾಲನಗರ ಗ್ರಾಮಾಂತರ ಪೊಲೀಸರು ೯ ಜನ ಬಿಜೆಪಿ ಮುಖಂಡ ರನ್ನು ಬಂಧಿಸಿದ್ದಾರೆ.
ಕೂಡುಮಂಗಳೂರು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಭಾಸ್ಕರ್ ನಾಯಕ್, ಬಿಜೆಪಿ ಸೋಮವಾರಪೇಟೆ ಮಂಡಲ ವಕ್ತಾರ ಕೆ.ಜೆ. ಮನು, ಪ್ರಧಾನ ಕಾರ್ಯದರ್ಶಿ ಎಂ.ಡಿ. ಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಮಂಜುಳಾ, ಹಿಂದು ಜಾಗರಣಾ ವೇದಿಕೆ ಮುಖಂಡ ಮಂಜು, ಕೂಡುಮಂಗಳೂರು ಗ್ರಾಪಂ ಸದಸ್ಯ ಪ್ರವೀಣ್, ಪ್ರಮುಖರಾದ ನಿತ್ಯಾನಂದ, ಮಣಿಕಂಠ ಅವರನ್ನು ಪೊಲೀಸರು ಬಂಧಿಸಿದ್ದರು.
ಕೊಡಗಿನ ಶಾಸಕದ್ವಯರು ಕುಶಾಲನಗರ ಠಾಣೆಗೆ ತೆರಳಿ, ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದರು. ಒತ್ತಡಕ್ಕೆ ಮಣಿಯದ ಕುಶಾಲನಗರ ಪೊಲೀಸರು ಮಧ್ಯರಾತ್ರಿ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ವಕೀಲರ ಮೂಲಕ ಸಲ್ಲಿಸಿದ್ದ ಜಾಮೀನಿಗೆ ನ್ಯಾಯಾಧೀಶರು ಮಾನ್ಯತೆ ನೀಡಿದರು.
೯ ಜನರ ವಿರುದ್ಧ ಪ್ರಕರಣ
ಮಡಿಕೇರಿಯ ಜನರಲ್ ಕೆ.ಎಸ್. ತಿಮ್ಮಯ್ಯ ವೃತ್ತದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಬಿಜೆಪಿಯ ೯ ಜನರ ವಿರುದ್ಧ ಮಡಿಕೇರಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಡಿಕೇರಿ ನಗರ ಕಾಂಗ್ರೆಸ್ ಉಪಾಧ್ಯಕ್ಷ ಪ್ರಕಾಶ್ ಆಚಾರ್ಯ ನೀಡಿರುವ ದೂರಿನನ್ವಯ ಪ್ರಕರಣ ದಾಖಲಾಗಿದೆ.
ನಗರಸಭೆ ನಾಮನಿರ್ದೇಶನ ಸದಸ್ಯ ಕವನ್ ಕಾವೇರಪ್ಪ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಸಾಮಾಜಿಕ ಕಾರ್ಯ ಕರ್ತ ಸತ್ಯ ಕರ್ಕೇರ, ಬಿಜೆಪಿ ಜಿಲ್ಲಾ ವಕ್ತಾರ ಮಹೇಶ್ ಜೈನಿ, ಬಿಜೆಪಿ ಯುವ ಮುಖಂಡ ನವೀನ್ ಪೂಜಾರಿ, ನಗರಸಭೆ ಬಿಜೆಪಿ ಸದಸ್ಯ ಅರುಣ್ ಶೆಟ್ಟಿ, ಸವಿತಾ, ಶ್ವೇತಾ ಹಾಗೂ ಮಲ್ಲಿಕಾರ್ಜುನನಗರದ ಭರತ್ ಸೇರಿದ್ದಂತೆ ಇತರರ ಮೇಲೆ ಪ್ರಕರಣ ದಾಖಲಾಗಿದೆ.
ಸಿದ್ದರಾಮಯ್ಯ ಕುರಿತು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾ ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಸಿದ್ದರಾಮಯ್ಯ ತೆರಳುತ್ತಿದ್ದ ವಾಹನದ ಮೇಲೆ ಮೊಟ್ಟೆ ಎಸೆದಿದ್ದಾರೆಂದು ಪ್ರಕಾಶ್ ಆಚಾರ್ಯ ಶುಕ್ರವಾರ ದೂರು ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಚರ್ಚಿಸಿ ಇಂದು ತಡವಾಗಿ ದೂರು ನೀಡುತ್ತಿರುವುದಾಗಿ ಉಲ್ಲೇಖಿಸಿದ್ದಾರೆ.
ಬಿಜೆಪಿ ಗೂಂಡಾಗಳು ಸಿದ್ದರಾಮಯ್ಯ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಸಿದ್ದರಾಮಯ್ಯ ತೆರಳುತ್ತಿದ್ದ ವಾಹನದ ಮೇಲೆ ಮೊಟ್ಟೆ ಎಸೆದಿರುತ್ತಾರೆ. ಸ್ಥಳದಲ್ಲಿದ್ದ ನಾನು, ಆರ್.ಸಿ. ಚಂದ್ರಶೇಖರ್, ಸೂರಜ್ ಹೊಸೂರು, ರಾಫಿ, ಸಿರಾಜ್, ಸುರಯ್ಯ ಅಬ್ರಾರ್, ಶಾಲಿದ್ ಹಾಕತ್ತೂರು ತಡೆಯಲು ಪ್ರಯತ್ನಿಸಿದ್ದೇವು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.