ಜಿಲ್ಲೆ

’’ಹಳೆಬರು- ಹೊಸಬರು’’ ಬಿಜೆಪಿ ಹುರಿಯಾಳು ಯಾರು?

reportermys

ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ವಿಧಾನಸಭೆ ಚುನಾವಣೆಗೆ ರಾಜಕೀಯ ಸಜ್ಜುಗಳು, ನೇತಾರರು ಸಜ್ಜುಗೊಳ್ಳುತ್ತಿದ್ದಾರೆ. ರಾಜಕೀಯ ಭದ್ರಕೋಟೆಯಾಗಿರುವ ಕೊಡಗಿನಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಲು ಬಿಜೆಪಿ ಸಂಘಟನಾತ್ಮಕವಾಗಿ ಸನ್ನದ್ಧವಾಗುತ್ತಿದೆ. ಬಿಜೆಪಿ ಹಳೆಯ ಅಭ್ಯರ್ಥಿಗಳನ್ನು ಮುಂದುವರಿಸಲಿ ದೆಯೋ ಅಥವಾ ಹೊಸ ಮುಖಕ್ಕೆ ರಾಜಕೀಯ ಪರೀಕ್ಷೆಗೆ ಅವಕಾಶ ಮಾಡಿಕೊಡಲಿದೆಯೇ ಎಂಬ ಸಹಜ ಕುತೂಹಲ ಇದೆ.

ಎರಡು ದಶಕದಿಂದ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಶಾಸಕರಿಬ್ಬರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಬೇಕೆಂಬ ಬೇಡಿಕೆ ವ್ಯಕ್ತ ವಾಗುತ್ತಿದೆ. ಅಭ್ಯರ್ಥಿ ಬದಲಾವಣೆ ನಿರೀಕ್ಷೆ ಹಲವು ವರ್ಷದಿಂದ ಚರ್ಚೆಯಲ್ಲಿದೆ. ಹೀಗಿದ್ದರೂ, ಗೆಲ್ಲುವ ಮಾನದಂಡದಡಿ ಮತ್ತೆ, ಮತ್ತೆ ಅವಕಾಶ ಪಡೆದು ಶಾಸಕರಾಗುತ್ತಿದ್ದಾರೆ.

ಶಾಸಕದ್ವಯರು ೭೦ರ ಗಡಿದಾಟುತ್ತಿರುವುದು, ಸುದೀರ್ಘ ಅವಧಿಯಿಂದ ಕ್ಷೇತ್ರ ಪ್ರತಿನಿಧಿಸುತ್ತಿರುವುದು, ಹೊಸಬರಿಗೆ ಅವಕಾಶ ನೀಡ ಬೇಕೆಂಬ ಪ್ರಬಲ ಬೇಡಿಕೆ ಪಕ್ಷದೊಳಗೆ ಮತ್ತು ಜನವಲಯದಿಂದ ವ್ಯಕ್ತವಾಗುತ್ತದೆ. ತಮಗೆ ಅವಕಾಶ ಸಿಗಬಹುದೆಂಬ ನಿರೀಕ್ಷೆಯಲ್ಲಿ ಹಲವು ಆಕಾಂಕ್ಷಿಗಳು ಸ್ಪರ್ಧೆಯ ಕನಸ್ಸು ಕಾಣಲಾರಂಭಿಸಿದ್ದಾರೆ. ತಮ್ಮ ಬೆಂಬಲಕ್ಕೆ ಇರುವ ರಾಜ್ಯ- ರಾಷ್ಟ್ರ ನಾಯಕರು, ಹಿತೈಷಿಗಳ ಮೂಲಕ ವರಿಷ್ಠ ರ ಮೇಲೆ ಪ್ರಭಾವ ಬೀರಲು ತಮ್ಮದೇ ಶೈಲಿಯಲ್ಲಿ ಕಸರತ್ತು ನಡೆಸುತ್ತಿದ್ದಾರೆ.

ಅಧಿಕಾರದ ಚುಕ್ಕಾಣಿ ಹಿಡಿಯಲು ಶಾಸಕರ ಸಂಖ್ಯಾ ಬಲ, ಗೆಲ್ಲುವ ಮಾನದಂಡ, ರಿಸ್ಕ್ ಏಕೆ ಎಂಬ ಲೆಕ್ಕಾಚಾರದಲ್ಲಿ ಶಾಸಕದ್ವಯರು ಸ್ಪರ್ಧಿ ಸಲು ಅವಕಾಶ ಪಡೆಯುತ್ತಿದ್ದಾರೆ. ಹೊಸಬರಿಗೆ ಅವಕಾಶ ನೀಡಿದ್ದಲ್ಲಿ ಬಿಜೆಪಿ ಶಾಸಕ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂದು ಶಾಸಕರ ಬೆಂಬಲಿಗರು ವರಿಷ್ಠರಿಗೆ ಸದಾ ಎಚ್ಚರಿಕೆ ನೀಡುತ್ತಾ ಬಂದಿದ್ದಾರೆ.

ಕೊಡವರಿಗೆ ಅವಕಾಶ ನೀಡಬೇಕೆಂಬ ಪ್ರಮುಖ ಬೇಡಿಕೆ ಹಿನ್ನೆಲೆಯಲ್ಲಿ ಸತತ ೩ ಅವಧಿಯಿಂದ ವಿರಾಜಪೇಟೆ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೆ.ಜಿ. ಬೋಪಯ್ಯ ಬದಲಾವಣೆಗೆ ಒತ್ತಡ ಹೇರಲಾಗುತ್ತಿದೆ. ಸಂಘ- ಪರಿವಾರದ ಸಂಘಟನೆಯೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿಲ್ಲದ ಕಾರಣಕ್ಕಾಗಿ ೫ ಬಾರಿ ಶಾಸಕರಾಗಿರುವ ಎಂ.ಪಿ. ಅಪ್ಪಚ್ಚು ರಂಜನ್ ಬದಲಾವಣೆಯ ಕೂಗು ಎದ್ದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಯಾರು ಆಗಬಹುದೆಂಬ ಪ್ರಶ್ನೆ ಮುಂದಿಟ್ಟುಕೊಂಡು ಲೌಡ್ ಸ್ಪೀಕರ್‌ಗೆ ಅಭಿಪ್ರಾಯ ಸಂಗ್ರಹಿಸ ಲಾಗಿದೆ.

**
ಮಡಿಕೇರಿ, ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಯಾರೇ ಅಭ್ಯರ್ಥಿಯಾದರೂ ಅವರ ಗೆಲುವಿಗೆ ಪಕ್ಷದ ಪ್ರತಿಯೊಬ್ಬರು ಶ್ರಮಿಸುತ್ತೇವೆ. ಎರಡೂ ಕ್ಷೇತ್ರದಲ್ಲಿಯೂ ಬಿಜೆಪಿ ಮತ್ತೊಮ್ಮೆ ಗೆಲುವು ಸಾಧಿಸುತ್ತದೆ. ಹಾಲಿ ಶಾಸಕರ ಬದಲಾವಣೆ ಅಥವಾ ಹೊಸಬರಿಗೆ ಅವಕಾಶ ನೀಡುವ ವಿಚಾರ ಕುರಿತು ರಾಜ್ಯ, ಜಿಲ್ಲಾ ಹಂತದಲ್ಲಿ ಇದುವರೆಗೂ ಯಾವ ಚರ್ಚೆ ನಡೆದಿಲ್ಲ. ಪಳೆಯಂಡ ರಾಬಿನ್ ದೇವಯ್ಯ, ಬಿಜೆಪಿ ಕೊಡಗು ಜಿಲ್ಲಾಧ್ಯಕ್ಷರು.
**
ಸುದೀರ್ಘ ಅವಧಿಯಿಂದ ಶಾಸಕರಾಗಿರುವವರಿಗೆ ರಾಜ್ಯಸಭೆ ಸ್ಥಾನ ಅಥವಾ ರಾಜ್ಯಪಾಲ ಹುದ್ದೆ ನೀಡುವುದರ ಮೂಲಕ ರಾಜಕೀಯವಾಗಿ ಉನ್ನತ ಸ್ಥಾನಮಾನ ನೀಡಬೇಕು. ಹೀಗೆ ಮಾಡುವುದರಿಂದ ಹೊಸಬರಿಗೆ ಸ್ಪರ್ಧಿಸಲು ಹಾಗೂ ರಾಜಕೀಯವಾಗಿ ಬೆಳೆಯಲು ಅವಕಾಶ ಸಿಗಲಿದೆ. ಟಿಕೆಟ್ ಬಗ್ಗೆ ಪಕ್ಷದ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ. ಮಾಚಿಮಾಡ ಎಂ. ರವೀಂದ್ರ, ಮಾಜಿ ಜಿಲ್ಲಾಧ್ಯಕ್ಷರು, ಬಿಜೆಪಿ.

**
ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಹೊಸ ಸದಸ್ಯನ ನಿರೀಕ್ಷೆಯಲ್ಲಿ ನಾವಿದ್ದೇವೆ. ನಿರೀಕ್ಷಿತ ಮಟ್ಟದ ಅಭಿವೃದ್ದಿ ನಮ್ಮ ವ್ಯಾಪ್ತಿಯಲ್ಲಿ ನಡೆದಿಲ್ಲ. ರಸ್ತೆ ಅಭಿವೃದ್ಧಿ ಕಂಡಿಲ್ಲ. ಇಷ್ಟೊಂದು ಸುದೀರ್ಘ ಅವಧಿಯ ಶಾಸಕರು ಬದಲಾಗಬೇಕು. ನೂತನ ತಂತ್ರಗಾರಿಕೆಯ ಶಾಸಕರು ಬೇಕು. ಹೊಸತನ ಬೇಕು. ಇದು ನಮ್ಮ ಬೇಡಿಕೆ. ನಾಳಿಯಮ್ಮಂಡ ಉಮೇಶ್ ಕೇಚಮಯ್ಯ, ಹಿರಿಯರು, ಕುಟ್ಟಂದಿ.

**
ಯುವ ನಾಯಕರು ಶಾಸಕರಾಗಿ ಆಯ್ಕೆಯಾಗಬೇಕು. ನಾವೇ ಮುಂದುವರಿಯಬೇಕು ಎಂಬುದನ್ನು ಬಿಟ್ಟು ನಿವೃತ್ತಿ ಪಡೆದು ಹೊಸಬರಿಗೆ ಅವಕಾಶ ಮಾಡಿಕೊಡಲಿ. ಹಂತ, ಹಂತವಾಗಿ ಎಲ್ಲರೂ ರಾಜಕೀಯವಾಗಿ ಬೆಳೆಯಬೇಕಿದೆ. ಕೊಡವ ಅಭ್ಯರ್ಥಿಗೆ ವಿರಾಜಪೇಟೆ ಕ್ಷೇತ್ರದಲ್ಲಿ ಅವಕಾಶ ಸಿಗಲಿ. ಗೆಲ್ಲಿಸುತ್ತೇವೆ. ಕೋಳೇರ ಭಾರತಿ ದಿನು, ಸಮಾಜ ಸೇವಕಿ, ಪೊನ್ನಂಪೇಟೆ.

**
ಅಮೇರಿಕಾ ಮಾದರಿಯಲ್ಲಿ ೨ ಅವಧಿಗೆ ಮಾತ್ರ ಶಾಸಕರಾಗಲು ಕಾನೂನು ಮಾಡಬೇಕು. ೨೫ ವರ್ಷದಿಂದ ಅವರುಗಳೇ ಶಾಸಕರಾದರೆ, ಬುದ್ಧಿವಂತ ಕಾರ್ಯಕರ್ತ ಎಲ್ಲಿಗೆ ಹೋಗಬೇಕು. ಬ್ಯಾನರ್ ಕಟ್ಟಿ, ಘೋಷಣೆ ಕೂಗಿಕೊಂಡೆ ಇರಬೇಕಾಗುತ್ತದೆ. ಹೊಸ ಮುಖಗಳಿಗೆ ಅವಕಾಶ ಸಿಗಲಿ. ಒಂದು ವ್ಯಕ್ತಿಗೆ ಒಂದೆ ಹುದ್ದೆ ಇರಬೇಕು. ಲಕ್ಷ್ಮಣ, ರೈತ ಹೋರಾಟಗಾರರು, ಗರಗಂದೂರು.

**
೧೯೮೦ ರಿಂದಲೂ ಪಕ್ಷಕ್ಕಾಗಿ ದುಡಿಯುತ್ತಿದ್ದೇವೆ. ವ್ಯಕ್ತಿಗಿಂತ ಪಕ್ಷ ಮುಖ್ಯ. ಚುನಾವಣಾ ಸಂದರ್ಭ ಯುವಕರಿಗೆ ಟಿಕೆಟ್ ಕೊಡುವಂತೆ ಯುವ ಕಾರ್ಯಕರ್ತರು ಒತ್ತಡ ಹಾಕುವುದು ಮಾಮೂಲಿ. ಪಕ್ಷದ ಹೈಕಮಾಂಡ್ ಎಲ್ಲವನ್ನೂ ಗಮನಕ್ಕೆ ತೆಗೆದುಕೊಂಡು ಸ್ಪರ್ಧಿಸಲು ಅವಕಾಶ ನೀಡುತ್ತದೆ. ನಾವು ಪಕ್ಷದ ಅಭ್ಯರ್ಥಿಗಳ ಪರವಾಗಿ ಕೆಲಸ ಮಾಡುತ್ತೇವೆ. ಹೈಕಮಾಂಡ್ ಸುಪ್ರಿಂ. ಎಸ್.ಪಿ. ಪೊನ್ನಪ್ಪ, ಹಿರಿಯ ಬಿಜೆಪಿ ಕಾರ್ಯಕರ್ತ, ತಾಕೇರಿ.

**
ಐದು ಬಾರಿ ಶಾಸಕರಾಗಿರುವ ಇವರನ್ನು ಈ ಬಾರಿ ಬದಲಿಸಿದರೆ ಉತ್ತಮ. ಬೇರೆ ಕಡೆ ೫ ಬಾರಿ ಶಾಸಕರಾದರೆ ಸರ್ಕಾರದ ಮಟ್ಟದಲ್ಲಿ ದೊಡ್ಡ ಪ್ರಭಾವ ಹೊಂದಿರುತ್ತಾರೆ. ನಮ್ಮ ಶಾಸಕರಿಗೆ ಇನ್ನೂ ಕೊಪ್ಪ ಗೇಟ್ ದಾಟಲು ಸಾಧ್ಯವಾಗಿಲ್ಲ. ಪ್ರಭಾವ ಬೀರುವ ನಾಯಕನನ್ನು ಗುರುತಿಸಿ ಅವಕಾಶ ನೀಡಿದರೆ ಉತ್ತಮ. ಸಾಕಷ್ಟು ಜನ ನಾಯಕರಾಗುವ ಗುಣ ಇರುವವರು ಇದ್ದಾರೆ. ಎಸ್.ಎಸ್. ಮನೋಹರ್, ಸ್ಥಳೀಯರು, ಕುಶಾಲನಗರ.