ಮಡಿಕೇರಿ:
ಮುಖ್ಯ ಮಂತ್ರಿ ಸಿದ್ದರಾಮಯ್ಯ ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಮಾತನಾಡುತ್ತಾ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ೧೦ ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಘೋಷಣೆ ಮಾಡಿರುವುದು ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ಬೆಂಬಲಿಸಿದ ಇತರ ಸಮುದಾಯದಗಳಿಗೆ ಮಾಡಿರುವ ದ್ರೋಹ ಎಂದು ಕೊಡಗು ಬಿಜೆಪಿ ವಕ್ತಾರ ಮಹೇಶ್ ಜೈನಿ ಹೇಳಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಕಾಂಗ್ರೆಸ್‌ನ ಪೊಳ್ಳು ಗ್ಯಾರಂಟಿಯನ್ನು ನಂಬಿ ಮೋಸ ಹೋದ ಕರ್ನಾಟಕದ ಜನತೆ ಕಾಂಗ್ರೆಸ್ ಅಧಿಕಾರಕ್ಕೆ ತಂದರು. ಆದರೆ ಅಧಿಕಾರಕ್ಕೆ ಬಂದು ೭ ತಿಂಗಳು ಕಳೆದರೂ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಏಳು ರೂ ಗಳನ್ನು ಕೂಡ ತಾರದ ಕೊಡಗಿನ ಶಾಸಕರು ಮುಖ್ಯಮಂತ್ರಿಗಳು ಮುಸ್ಲಿಂ ಸಮುದಾಯ ಒಂದಕ್ಕೇ ಹತ್ತು ಸಾವಿರ ಕೋಟಿ ನೀಡುವ ಹೇಳಿಕೆಯನ್ನು ಒಪ್ಪಿಕೊಳ್ಳುತ್ತಾರೆಯೇ ಎಂದು ಪತ್ರಿಕಾ ಹೇಳಿಕೆಯಲ್ಲಿ ಪ್ರಶ್ನಿಸಿದ್ದಾರೆ.
ಕೊಡಗಿನ ೨ಕ್ಷೇತ್ರಗಳ ಅಭಿವೃದ್ಧಿಗಾಗಿ ಸರ್ಕಾರ ಅನುದಾನ ಘೋಷಿಸಲಿ, ಇದು ಯಾವುದೇ ಸಮುದಾಯಕ್ಕೆ ಸೀಮಿತವಾಗಿರದೇ ಕೊಡಗಿನ ಅಭಿವೃದ್ಧಿಗಾಗಿ ಮಾತ್ರ ಬಳಕೆಯಾಗುವಂತೆ ಇಬ್ಬರು ಶಾಸಕರು ಅನುದಾನ ತರಲಿ. ಒಂದೇ ಸಮುದಾಯಕ್ಕೆ ಹತ್ತು ಸಾವಿರ ಕೋಟಿ ರೂ. ಅನುದಾನ ನೀಡುವುದಾಗಿ ಸಿಎಂ ನೀಡಿರುವ ಹೇಳಿಕೆಯಿಂದ ತಮಗೂ ಮುಜುಗರವಾಗುತಿದೆ ಎಂದು ಮುಖ್ಯಮಂತ್ರಿಗಳಿಗೆ ಶಾಸಕರಿಗೂ ಮನವರಿಕೆ ಮಾಡಲಿ.
ಕೊಡಗಿನ ಹಲವು ಭಾಗಗಳಲ್ಲಿ ಬರ ಮತ್ತು ಕಾಡಾನೆ ಹಾವಳಿಯಿಂದ ರೈತರು ಕಂಗ್ಗೆಟ್ಟಿರುವ ಈ ಸಂದರ್ಭದಲ್ಲಿ ಕೇವಲ ವೋಟ್ ಬ್ಯಾಂಕ್ ರಾಜಕೀಯ ಮಾಡುತಿರುವ ಮುಖ್ಯಮಂತ್ರಿ ನಡೆಯನ್ನು ಕೊಡಗು ಬಿಜೆಪಿ ಖಂಡಿಸುತ್ತಿದೆ ಎಂದು ಮಹೇಶ್ ಜೈನಿ ತಿಳಿಸಿದ್ದಾರೆ.