ಜಿಲ್ಲೆ

ಸಾಮರಸ್ಯದ ಸಹಬಾಳ್ವೆ ನಡೆಸಲು ಧರ್ಮಗುರುಗಳ ಕರೆ

ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಕೊಡಗಿನ ಶಾಂತಿ ಕಾಪಾಡಲು ಪ್ರತಿಯೊಬ್ಬರು ಸಾಮರಸ್ಯದಿಂದ ಸಹಬಾಳ್ವೆ ನಡೆಸಬೇಕೆಂದು ಧರ್ಮಗುರುಗಳು ಸೇರಿದ್ದಂತೆ ಪ್ರಮುಖರು ಕರೆ ನೀಡಿದರು.

ಕೊಡಗು ಬಚಾವೋ ವೇದಿಕೆ ಆಶ್ರಯದಲ್ಲಿ ಭಾನುವಾರ ಕಾವೇರಿ ಹಾಲ್‌ನಲ್ಲಿ ಆಯೋಜಿಸಿದ್ದ ಸರ್ವ ಜನಾಂಗದ ಶಾಂತಿಯ ತೋಟ ಕೊಡಗು ಜನಜಾಗೃತಿ ಸಮಾವೇಶದಲ್ಲಿ ಸಂಘರ್ಷಕ್ಕೆ ಅವಕಾಶ ಮಾಡಿಕೊಡದಂತೆ ಮನವಿ ಮಾಡಲಾಯಿತು.

ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮ ಅಧ್ಯಕ್ಷ ಧರ್ಮಾನಾಥನಂದ ಮಹರಾಜ್ ಸಮಾವೇಶ ಉದ್ಘಾಟಿಸಿ ಮಾತನಾಡಿ, ಮತಾಂದತೆ ಯಿಂದ ಸ್ವಾಸ್ಥೃ ಹದಗೆಡುತ್ತಿದೆ. ಸ್ವಾರ್ಥಕ್ಕಾಗಿ ಅಶಾಂತಿ ಸೃಷ್ಟಿಯಾಗುತ್ತಿದೆ. ನನ್ನ ಮತ, ಜಾತಿ ಶ್ರೇಷ್ಠ ಎಂಬ ಪ್ರತಿಷ್ಠೆಯಿಂದ ಸಹೋದರತ್ವ ಮರೆಯಾಗಿ ದ್ವೇಷ ಸೃಷ್ಟಿಯಾಗುತ್ತಿದೆ ಎಂದರು.

ಕೊಡಗು ಬಚಾವೋ ವೇದಿಕೆ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೆಲ ವರ್ಷಗಳ ಹಿಂದೆ ಎಲ್ಲಾ ಸಮುದಾಯದವರು ಸಹೋದರಂತೆ ಬದುಕಿದ ಕೊಡಗಿನಲ್ಲಿ ರಾಜಕೀಯ ಪಕ್ಷಗಳು ಜಾತಿ-ಧರ್ಮ ನಡುವೆ ಕಂದಕ ಸೃಷ್ಟಿಸಿ ಮತ ಬೇಟೆ ಮಾಡಿ ಕಾರ್ಯ ಸಾಧನೆಗೆ ಮುಂದಾಗಿದೆ ಎಂದು ಟೀಕಿಸಿದರು.

ಕೊಡಗಿನಲ್ಲಿ ಜನಸಾಮಾನ್ಯರು, ರೈತರು, ವ್ಯಾಪಾರಿಗಳು ಸಂಕಷ್ಟದಲ್ಲಿದ್ದಾರೆ. ಸರ್ಕಾರದ ಯೋಜನೆ ಜನರಿಗೆ ತಲುಪಿಸುವಲ್ಲಿ ಜನಪ್ರತಿನಿಧಿ ಗಳು ವಿಫಲರಾಗಿದ್ದರೆ. ಜನರು ಇದರಿಂದ ಭ್ರಮನಿರಸನಗೊಂಡಿದ್ದಾರೆ. ಮೂಲಭೂತ ಸವಲತ್ತು ಕೊರತೆ, ವನ್ಯಜೀವಿ- ಮಾನವ ಸಂಘರ್ಷ ದಿಂದ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆಂದರು.

ಮಡಿಕೇರಿಯ ಶಾಂತಿ ಚರ್ಚ್ ಧರ್ಮಗುರು ಫಾದರ್ ಅಮೃತರಾಜ್ ಮಾತನಾಡಿ, ರಾಜಕೀಯ ಕೊಡಗನ್ನು ಹಾಳು ಮಾಡುತ್ತಿದೆ. ಧರ್ಮ ದ ಆಯಾಮ ಇದೀಗ ಬದಲಾಗಿದೆ. ದೇವರ ಹುಡುಕಾಡುವ ಭರದಲ್ಲಿ ದೇವರು ನೆಲೆಸಿರುವ ಜಾಗ ಹಾಳು ಮಾಡುತ್ತಿದ್ದೇವೆಂದು ವಿಷಾದ ವ್ಯಕ್ತ ಪಡಿಸಿದರು.

ಸಂತ ಮೈಕಲರ ಚರ್ಚ್ ಧರ್ಮಗುರು ಫಾದರ್ ಜಾರ್ಜ್ ದೀಪಕ್ ಮಾತನಾಡಿ, ದೇವರು ಕೊಟ್ಟ ಶಾಂತಿಯನ್ನು ಸ್ವಾರ್ಥಕ್ಕಾಗಿ ಕಳೆದು ಕೊಳ್ಳುತ್ತಿದ್ದೇವೆ. ರಕ್ತ ಎಷ್ಟು ಮುಖ್ಯವೋ ಧರ್ಮವೂ ಮುಖ್ಯ. ಆದರೆ, ಧರ್ಮದಲ್ಲಿ ಮಾನವೀಯ ಮೌಲ್ಯ ಇರಬೇಕು. ಈ ಬಗ್ಗೆ ಜಾಗೃತ ಗೊಳ್ಳಬೇಕೆಂದರು.

ಸುನ್ನಿ ಸ್ಟುಡೆಂಟ್ ಫೆಡರೇಷನ್ ಜಿಲ್ಲಾಧ್ಯಕ್ಷ ಶಾಫಿ ಸಅದಿ ಮಾತನಾಡಿ, ಧರ್ಮ, ಭಾಷೆ, ಜಾತಿ ಆಧಾರದಲ್ಲಿ ಸಮಾಜ ಒಡೆದು ಮಾನವ ಧರ್ಮ ಮರೆಯಾಗುತ್ತಿದೆ. ಇದರಿಂದ ಸರ್ವಜನಾಂಗದ ಶಾಂತಿಯ ತೋಟ ಪರಿಕಲ್ಪನೆಗೆ ಧಕ್ಕೆ ಬಂದಿದೆ. ಜಾತ್ಯತೀತ ನೆಲಗಟ್ಟಿನಲ್ಲಿ ಭದ್ರ ವಾಗಿ ಭಾರತ ನೆಲೆಯೂರ ಬೇಕೆಂದರು.

ಎಸ್‌ಕೆಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ತಂಮ್ಲಿಕ್ ಧಾರಿಮಿ ಮಾತನಾಡಿ, ಸಾಮಾಜಿಕ ಜಾಲತಾಣ ಅಶಾಂತಿಗೆ ವೇದಿಕೆಯಾಗಿ ಸಂಘರ್ಷಕ್ಕೆ ಕಾರಣವಾಗುತ್ತಿದೆ. ಧಾರ್ಮಿಕ ಕಾರ್ಯಕ್ರಮಗಳು ಸೌಹರ್ದ ಸೃಷ್ಟಿಸಬೇಕೆಂದರು. ಎಸ್‌ಕೆಎಸ್‌ಎಸ್‌ಎಫ್ ಕ್ಯಾಂಪಸ್ ವಿಂಗ್ ಅಧ್ಯಕ್ಷ ಇಬ್ರಾಹಿಂ ಬಾತಿಷಾ ಶಂಸಿ ಮಾತನಾಡಿ, ಪ್ರತಿ ಧರ್ಮಗ್ರಂಥವೂ ಬೇರೆ ಧರ್ಮವನ್ನು ದ್ವೇಷಿಸಬೇಡಿ ಎನ್ನುತ್ತದೆ. ಆದರೆ, ತಾವು ಅದನ್ನು ಅಳವಡಿಸಿ ಕೊಳ್ಳದಿರುವುದು ಬೇಸರದ ಸಂಗತಿ ಎಂದರು.

ಮುಖ್ಯಭಾಷಣ ಮಾಡಿದ ಸಾಹಿತಿ ಡಾ.ಜೆ.ಸೋಮಣ್ಣ , ಶಾಂತಿ ಹಾಗೂ ಆರೋಗ್ಯಕರ ಸಮಾಜ ಸೃಷ್ಟಿಯಾಗಬೇಕು. ರಾಜಕೀಯ ಶಕ್ತಿ ಯಿಂದ ವಿಮುಖವಾದರೆ ವ್ಯವಸ್ಥೆ ಹಾಳಾಗುತ್ತದೆ. ಅನ್ಯಾಯ, ಅಸಮಾನತೆ ಸಹಿಸಿಕೊಂಡು ಒಂದೆ ವ್ಯಕ್ತಿಯನ್ನು ಜನಪ್ರತಿನಿಧಿ ಆಯ್ಕೆ ಮಾಡುತ್ತಿದ್ದರೆ ಪ್ರಗತಿ ಅಸಾಧ್ಯ ಎಂದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಕೊಡಗಿನ ಹಿತಾಸಕ್ತಿಗೆ ಒಂದಾಗ ಬೇಕು. ಡ್ರಗ್ಸ್ ವಿರುದ್ಧ ಸಂಘಟಿತವಾಗಿ ಹೋರಾಡಬೇಕಾಗಿದೆ. ಪರಿಸರ, ಕಾವೇರಿ ಮೂಲಕ್ಕೆ ಧಕ್ಕೆಯಾಗಿದೆ. ಇದರ ವಿರುದ್ಧ ಪ್ರತಿಯೊಬ್ಬರೂ ಧ್ವನಿ ಎತ್ತಬೇಕೆಂದರು.

ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಕಾಲೇಜು ಪ್ರಾಧ್ಯಾಪಕ ಡಾ.ಶ್ರೀಧರ್ ಹೆಗಡೆ ಮಾತನಾಡಿದರು. ಮೋಹನ್ ಮೌರ್ಯ ಸ್ವಾಗತಿಸಿ ದರು. ಇಸಾಕ್ ಖಾನ್ ನಿರೂಪಿಸಿದರು. ನರೇಂದ್ರ ಕಾಮತ್ ವಂದಿಸಿದರು. ಗುಲಾಬಿ ಜನಾರ್ಧನ್ ಪ್ರತಿಜ್ಞಾ ವಿಧಿ ಬೋಧಿಸಿದರು.