ವಿಜಯವಾಣಿ ಸುದ್ದಿಜಾಲ ಮಡಿಕೇರಿ
ಭಾರತೀಯರು ಆಯುರ್ವೇದಿಂದ ಅಲೋಪತಿ ಕಡೆ ಹೋಗಿದ್ದೇವೆ. ವಿದೇಶಿಗರು ನಮ್ಮ ಆಯುರ್ವೇದದ ಕಡೆ ಹೆಚ್ಚಿನ ಆಸಕ್ತಿ ತೋರುತ್ತಿ
ದ್ದಾರೆಂದು ಕರ್ನಾಟಕ ರಾಜ್ಯ ಔಷಧಿ ಗಿಡಮೂಲಿಕಾ ಪ್ರಾಧಿಕಾರದ ಮುಖ್ಯಕಾರ್ಯನಿರ್ವಹಕ ಅಧಿಕಾರಿಯಾಗಿರುವ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಿ.ಎ. ಸುದರ್ಶನ್ ಹೇಳಿದರು.
ಕರ್ನಾಟಕ ಜೀವ ವೈವಿಧ್ಯ ಮಂಡಳಿ ವತಿಯಿಂದ ಜೀವ ವೈವಿಧ್ಯದ ಸಂರಕ್ಷಣೆ, ಸುಸ್ಥಿರ ಬಳಕೆ ಮತ್ತು ಔಷಧಿ ಸಸ್ಯ ಸಂಪತ್ತಿನ ಕುರಿತು ಕ್ರಿಸ್ಟಲ್ ಕೋಟರ್ ಹೋಟೆಲ್ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪಾಲುದಾರರ ಸಮಾವೇಶದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು. ಔಷಧೀಯ ಸಸ್ಯಗಳು ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ನಮಗೆ ನಮ್ಮ ತೋಟ, ಕಾಡುಗಳಲ್ಲಿ ಕಾಣ ಸಿಗುವ ಗಿಡಗಳ ಅನುಕೂಲದ ಬಗ್ಗೆ ತಿಳಿದಿಲ್ಲ. ಔಷಧಿ ಸಸ್ಯಗಳ ಪಾರ್ಕ್ ನಿರ್ಮಾಣ ಬಗ್ಗೆ ಅಧಿಕಾರಿಗಳು, ಜನಪ್ರತಿನಿಧಿಗಳ ಜತೆ ಚರ್ಚಿಸಿ ಆದಷ್ಟು ಶೀಘ್ರದಲ್ಲಿ ಕಾರ್ಯರೂಪಕ್ಕೆ ತರಲು ಶ್ರಮಿಸಲಾಗುವುದೆಂದರು.
ಔಷಧಿ ಸಸ್ಯಗಳ ಸಲಹೆಗಾರ ಡಾ.ಎಂ.ಜೆ. ಪ್ರಭು ಸಭಾ ನಡಾವಳಿ ಮಂಡಿಸಿದರು. ವೇದಿಕೆಯಲ್ಲಿ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನಿತಾ ಎಸ್. ಅರೇಕಲ್, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಸಿ.ಜಿ. ಕುಶಾಲಪ್ಪ, ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ. ಪೂವಯ್ಯ, ಸಾಮಾಜಿಕ ಅರಣ್ಯ ವಿಭಾಗದ ಪೂರ್ಣಿಮಾ ವೇದಿಕೆಯಲ್ಲಿದ್ದರು. ಕೆ.ಆರ್. ಪ್ರಸನ್ನ ನಿರೂಪಿಸಿದರು.