ಕೋಲಾರ: ಕೋಚಿಮುಲ್‌ನಲ್ಲಿ 130 ಕೋಟಿ ರೂ. ವೆಚ್ಚದಲ್ಲಿ ಮೆಗಾ ಡೇರಿ ನಿರ್ಮಾಣದ ಟೆಂಡರ್ ಪ್ರಕ್ರಿಯೆಗೆ ನೀಡಿರುವ ತಡೆಯಾಜ್ಞೆ ಹಿಂಪಡೆಯಲು ಒತ್ತಾಯಿಸಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಳಿ ನಿಯೋಗ ತೆರಳುವುದಾಗಿ ಕೋಚಿಮುಲ್ ಅಧ್ಯಕ್ಷ ಕೆ.ವೈ.ನಂಜೇಗೌಡ ಹೇಳಿದರು.
ಕೋಚಿಮುಲ್ ವಿಭಜಿಸಿ ಚಿಕ್ಕಬಳ್ಳಾಪುರದಲ್ಲಿ ಪ್ರತ್ಯೇಕ ಹಾಲು ಒಕ್ಕೂಟ ರಚಿಸಲು ನಮ್ಮ ಅಭ್ಯಂತರವಿಲ್ಲ. ಒಕ್ಕೂಟದಲ್ಲಿ 25 ವರ್ಷಗಳ ಹಿಂದೆ ಅಳವಡಿಸಿರುವ ಯಂತ್ರೋಪಕರಣ ಶಿಥಿಲಗೊಂಡಿದ್ದರಿಂದ ಆಧುನಿಕ ಯಂತ್ರ ಅಳವಡಿಸಲು ಮೆಗಾ ಡೇರಿ ಸ್ಥಾಪಿಸುವ ಪ್ರಯತ್ನಕ್ಕೆ ಸಚಿವ ಡಾ.ಸುಧಾಕರ್ ಅಡ್ಡಿಪಡಿಸುತ್ತಿರುವುದು ಖಂಡನೀಯ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೈಯುಕ್ತಿಕ ಕಾರಣಕ್ಕೆ ಡಾ.ಸುಧಾಕರ್ ಟೆಂಡರ್ ಪ್ರಕ್ರಿಯೆಗೆ ತಡೆ ಮಾಡಿಸಿದ್ದಾರೆ. ಈ ವಿಚಾರದಲ್ಲಿ ಜಿಲ್ಲೆಯ ಸಂಸದರು, ಶಾಸಕರು ಅಥವಾ ಕೋಚಿಮುಲ್ ಆಡಳಿತ ಮಂಡಳಿ ನಿರ್ದೇಶಕರೊಡನೆ ಚರ್ಚಿಸದೆ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂದು ಆರೋಪಿಸಿದರು.
ಚಿಕ್ಕಬಳ್ಳಾಪುರದಲ್ಲಿ 200 ಕೋಟಿ ರೂ. ವೆಚ್ಚದಲ್ಲಿ ಗೋಲ್ಡನ್ ಡೇರಿ ನಿರ್ಮಿಸಲಾಗಿದ್ದು, ಸಾಲದ ಹೊರೆ ನಮ್ಮ ಮೇಲಿದ್ದರೂ ವಿರೋಧ ವ್ಯಕ್ತಪಡಿಸಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ 3 ಕಡೆ ಚಿಲ್ಲಿಂಗ್ ಸೆಂಟರ್‌ಗೆ ತಲಾ 20 ಕೋಟಿ ರೂ. ಖರ್ಚು ಮಾಡಲಾಗಿದೆ. ಶಿಡ್ಲಘಟ್ಟದಲ್ಲಿ ಪಶು ಆಹಾರ ಘಟಕ ಸ್ಥಾಪಿಸಲು 100 ಕೋಟಿ ರೂ. ಯೋಜನೆಗೆ ಒಪ್ಪಿಗೆ ನೀಡಿದ್ದರೂ ಡಾ.ಸುಧಾಕರ್ ಮೆಗಾ ಡೇರಿ ನಿರ್ಮಾಣಕ್ಕೆ ಏಕೆ ವಿರೋಧಿಸುತ್ತಿದ್ದಾರೆಂದು ಅರ್ಥವಾಗುತ್ತಿಲ್ಲ ಎಂದರು.
ಆದೇಶ ಹಿಂಪಡೆಯದಿದ್ದರೆ ಜಿಲ್ಲೆಯ ಹಾಲು ಉತ್ಪಾದಕರನ್ನು ಸಂಘಟಿಸಿ ಐತಿಹಾಸಿಕ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸೋತವರಿಗೆ ಪುನರ್ವಸತಿ: ಕೋಚಿಮುಲ್ ಮಾಜಿ ಅಧ್ಯಕ್ಷರೊಬ್ಬರಿಗೆ ಪುನರ್ವಸತಿ ಕಲ್ಪಿಸಲು ಒಕ್ಕೂಟವನ್ನು ವಿಭಜಿಸಲು ಡಾ.ಸುಧಾಕರ್ ಯತ್ನಿಸುತ್ತಿದ್ದಾರೆಂದು ಕೆ.ವಿ.ನಾಗರಾಜ ಹೆಸರು ಪ್ರಸ್ತಾಪಿಸದೆ ಆರೋಪಿಸಿದ ನಿರ್ದೇಶಕ ಕಾಡೇನಹಳ್ಳಿ ನಾಗರಾಜ್, ಇಲ್ಲಿ ಮೆಗಾ ಡೇರಿ ನಿರ್ಮಾಣವಾದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಸಮಸ್ಯೆ ಆಗಬಹುದೆಂದು ಅಡ್ಡಿಪಡಿಸಲಾಗುತ್ತಿದೆ ಎಂದರು. ನಿರ್ದೇಶಕ ಜಯಸಿಂಹ ಕೃಷ್ಣಪ್ಪ, ನಿರ್ದೇಶಕರಾದ ಹನುಮೇಶ್, ಕಾಂತಮ್ಮ ಸೋಮಣ್ಣ ಉಪಸ್ಥಿತರಿದ್ದರು.
ಮುಂದೆ ಕಷ್ಟ ಗೊತ್ತಾಗುತ್ತೆ: ಕೋಚಿಮುಲ್‌ಗೆ ಕೋಲಾರ ಜಿಲ್ಲೆಯಿಂದ 4.50 ಲಕ್ಷ ಹಾಗೂ ಚಿಕ್ಕಬಳ್ಳಾಪುರದಿಂದ 3.25 ಲಕ್ಷ ಲೀಟರ್ ಹಾಲು ಸರಬರಾಜು ಆಗುತ್ತಿದೆ. ಕೋಚಿಮುಲ್ ವಿಭಜನೆಯಾದರೆ ಮುಂದೆ ಕಷ್ಟ ಗೊತ್ತಾಗಲಿದೆ ಎಂದು ನಿರ್ದೇಶಕ ಡಿ.ವಿ.ಹರೀಶ್ ಸಚಿವ ಸುಧಾಕರ್‌ಗೆ ಮಾರ್ಮಿಕವಾಗಿ ಎಚ್ಚರಿಕೆ ನೀಡಿದರು.