ಜಿಲ್ಲೆ

13ರಂದು ಕೋಚಿಮುಲ್​ ಸರ್ವ ಸದಸ್ಯರ ಸಭೆ

ಕೋಲಾರ; ಕೋಲಾರ ಹಾಲು ಒಕ್ಕೂಟದ ಕ್ಷೇತ್ರ ವಿಂಗಡಣೆ ವಿಚಾರವಾಗಿ ಹೈಕೋರ್ಟ್​ ಆದೇಶದಂತೆ ಮಾ.13ರಂದು ಕೋಚಿಮುಲ್​ ಸರ್ವ ಸದಸ್ಯರ ಸಭೆಯನ್ನು ಕೋಚಿಮುಲ್​ ಆಡಳಿತ ಮಂಡಳಿ ಕೋಲಾರ&ಮುಳಬಾಗಿಲು ರಸ್ತೆಯ ನಂದಿನಿ ಪ್ಯಾಲೆಸ್​ನಲ್ಲಿ ಕರೆದಿದೆ.

ಸಭೆಯಲ್ಲಿ ಬಹುಮತದ ಮೇಲಾಟ ಟ್ವಿಸ್ಟ್​ ಪಡೆದುಕೊಳ್ಳುವ ಸಾಧ್ಯತೆ ಇದ್ದು, ಸಭೆಯಲ್ಲಿ 2/3 ಮೆಜಾರಿಟಿಯನ್ನು ಆಡಳಿತ ಮಂಡಳಿ ತೋರಿಸಿ ಕ್ಷೇತ್ರ ವಿಂಗಡಣೆಗೆ ಮಂಗಳ ಹಾಡಬೇಕಿದೆ.

ಈಗಾಗಲೇ ಕೋಚಿಮುಲ್​ ಕ್ಷೇತ್ರ ವಿಂಗಡಣೆ ಮಾಡಿದ್ದು, ಕಾಂಗ್ರೆಸ್​ನ ಕೆಲ ಶಾಸಕರ ತಾಳಕ್ಕೆ ಕುಣಿದು ಅಧಿಕಾರಿಗಳು ಇಷ್ಟದಂತೆ ವಿಂಗಡಣೆ ಮಾಡಿದ್ದಾರೆ ಎಂದು ಕೆಲ ಮಾಜಿ ನಿರ್ದೇಶಕರು ಹಾಗೂ ಬಂಗಾರಪೇಟೆ ಶಾಸಕ ಎಸ್​.ಎನ್​.ನಾರಾಯಣಸ್ವಾಮಿ ಆರೋಪಿಸಿದ್ದರು.

ರಾಮರೆಡ್ಡಿ ಎಂಬುವವರು ಕ್ಷೇತ್ರ ವಿಂಗಡಣೆ ವಿರುದ್ಧ ಹೈಕೋರ್ಟ್​ ಮೊರೆ ಹೋಗಿದ್ದರು. ಅದನ್ನು ಪರಿಷ್ಕರಿಸಿದ ನ್ಯಾಯಾಲಯವು ಸರ್ವ ಸದಸ್ಯರ ಸಭೆ ಕರೆದು ಅಲ್ಲಿ ಕ್ಷೇತ್ರ ಮರು ವಿಂಗಡಣೆ ಮಾಡುವಂತೆ ಸೂಚಿಸಿತ್ತು.

ಈ ಬೆನ್ನಲ್ಲೇ ಕೋಚಿಮುಲ್​ ಆಡಳಿತ ಅಧಿಕಾರಿ ಹಾಗೂ ಕೋಲಾರ ಉಪ ವಿಭಾಗಾಧಿಕಾರಿ ಡಾ.ಮೈತ್ರಿ ಅವರು ಮಾ.13ರಂದು ಸರ್ವಸದಸ್ಯರ ಸಭೆ ನಿಗದಿಪಡಿಸಿದ್ದಾರೆ.

ಸೊಸೈಟಿ ಆಡಳಿತ ಮಂಡಳಿಯಿಂದ ಯಾರಾದರೂ ಭಾಗವಹಿಸಲಿ

ಸಭೆಗೆ ಡೇರಿಗಳ ಅಧ್ಯಕ್ಷರು ಮಾತ್ರ ಭಾಗವಹಿಸಬೇಕು. ಡೆಲಿಗೇಟ್ಸ್​ ಪಡೆದುಕೊಂಡವರಿಗೆ ಅವಕಾಶವಿಲ್ಲವೆಂದು ಕಟ್ಟಪ್ಪಣೆ ಮಾಡಲಾಗಿತ್ತು. ಇದರ ವಿರುದ್ಧ ಕೋಲಾರ ತಾಲೂಕು ಕಾಮಧೇನಹಳ್ಳಿ ಹಾಲು ಉತ್ಪನ್ನಗಳ ಸಹಕಾರ ಸಂಘದ ಅಧ್ಯಕ್ಷ ಹರೀಶ್​ ಹೈಕೋರ್ಟ್​ಮೊರೆ ಹೋಗಿ ಎಸಿ ಅವರ ಈ ರ್ನಿಬಂಧವು ಸಹಕಾರ ಕಾಯ್ದೆ ಹಾಗೂ ಕೋಚಿಮುಲ್​ ಬೈಲಾ ಉಲ್ಲಂಘಿಸಲಾಗಿದೆ ಎಂದು ದೂರಿದ್ದರು.

ಕೋಚಿಮುಲ್​ನಿಂದ ಕಳುಹಿಸಿರುವ ಅಜೆಂಡಾ ಜತೆಗೆ ಡೆಲಿಗೇಟ್ಸ್​ ಫಾಮ್​ರ್ ಸಹ ರವಾನಿಸಲಾಗಿದೆ. ಆದರೆ ಅಧ್ಯಕ್ಷರು ಮಾತ್ರ ಭಾಗವಹಿಸಲು ಅರ್ಹರು ಎಂದು ಸೂಚನೆ ನೀಡಿರುವುದು ತಪ್ಪು ಎಂದು ಕಾಮಧೇನಹಳ್ಳಿ ಡೇರಿ ಪರ ವಕೀಲ ಹನುಮಂತರಾಜು ವಾದಿಸಿದರೆ, ಹಾಲು ಸಹಕಾರ ಸಂಘವನ್ನು ಅದರ ಅಧ್ಯಕ್ಷರೇ ಪ್ರತಿನಿಧಿಸುವ ಕಾರಣ ಅವರೇ ಭಾಗವಹಿಸುವಂತೆ ತಿಳಿಸಲಾಗಿದೆ. ವಿನಾಕಾರಣ ದೋಷ ಹುಡುಕಲಾಗುತ್ತಿದೆ ಎಂದು ಕೋಚಿಮುಲ್​ ಪರ ವಕೀಲ ರವಿಶಂಕರ್​ ವಾದಿಸಿದ್ದರು. ಹೈಕೋರ್ಟ್​ ನ್ಯಾಯಮೂರ್ತಿ ಸೂರಜ್​ ಗೋವಿಂದರಾಜು ವಾದ ಆಲಿಸಿ ಮಾ.13 ರಂದು ಕರೆದಿರುವ ಸಭೆಗೆ ಅಧ್ಯಕ್ಷರು ಅಥವಾ ಸೊಸೈಟಿ ಆಡಳಿತ ಮಂಡಳಿಯಿಂದ ನಿಯೋಜಿಸಲ್ಪಟ್ಟಿರುವವರ ಪೈಕಿ ಯಾರಾದರೂ ಭಾಗವಹಿಸಲು ಅವಕಾಶ ನೀಡುವಂತೆ ಆದೇಶಿಸಿದ್ದಾರೆ.

ಕ್ಷೇತ್ರ ವಿಂಗಡಣೆಗೆ ಸಮ್ಮತಿ

ಈಗಾಗಲೇ ಆಡಳಿತ ಮಂಡಳಿ ಕ್ಷೇತ್ರ ವಿಂಗಡಣೆ ಮಾಡಿರುವುದು ಸರಿ ಇದೆ ಎಂದು ಸಭೆಯಲ್ಲಿ ತಿಳಿಸುವಂತೆ ಆಯಾ ತಾಲೂಕುಗಳ ಶಾಸಕರು ಸಭೆಯಲ್ಲಿ ಭಾಗವಹಿಸುವ ಅಧ್ಯಕ್ಷರು ಅಥವಾ ಡೆಲಿಗೇಟ್ಸ್​ಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.