ತುಮಕೂರು: ಕರೊನಾ ಸೋಂಕು ಹರಡದಂತೆ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸಿರುವ ಪೌರ ಕಾರ್ಮಿಕರನ್ನು ಕೆಎನ್ ಆರ್ ಅಭಿಮಾನಿ ಬಳಗದಿಂದ ಪುಷ್ಪವೃಷ್ಟಿ ಸುರಿಸಿ ಸತ್ಕರಿಸಲಾಯಿತು.
ಕರೊನಾ ಲಾಕ್‌ಡೌನ್ ಸಂಕಷ್ಟಕ್ಕೆ ಸಿಲುಕಿರುವ 33, 34ನೇ ವಾರ್ಡ್ ಪೌರಕಾರ್ಮಿಕರು, ಮಡಿವಾಳರು, ಮೇದರು, ಆಟೋ ಚಾಲಕರಿಗೆ ಕ್ಯಾತಸಂದ್ರದ ಚಂದ್ರ ಮೌಳೇಶ್ವರ ಸಹಕಾರ ಸಂಘದ ಆವರಣದ ಬಳಿ ಮಂಗಳವಾರ ಪಡಿತರ ವಿತರಿಸಿ ಮಾತನಾಡಿದ ಕ್ರೀಬ್ಕೋ ಸಂಸ್ಥೆ ನಿರ್ದೇಶಕ ಆರ್.ರಾಜೇಂದ್ರ, ಸೋಂಕು ಹರಡದಂತೆ ತಡೆಯುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿರುವ ಪೌರ ಕಾರ್ಮಿಕರು ನಿಜವಾದ ಕರೊನಾ ಸೇನಾನಿಗಳು. ಪೌರಕಾರ್ಮಿಕರು ಸ್ವಚ್ಛತೆ ಜತೆಗೆ ಆರೋಗ್ಯ ಕಾಪಾಡಿಕೊಳ್ಳುವಂತೆ ಹೇಳಿದರು.
ಪೌರಕಾರ್ಮಿಕರು ದೈಹಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಹಾಗೂ ಸ್ಯಾನಿಟೈಜರ್‌ಗಳನ್ನು ಕಡ್ಡಾಯವಾಗಿ ಬಳಕೆ ಮಾಡುವ ಮೂಲಕ ತಮ್ಮ ಕುಟುಂಬವನ್ನು ಸಹ ಸೋಂಕಿನಿಂದ ರಕ್ಷಣೆ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಲಾಕ್‌ಡೌನ್ ಆರಂಭವಾದಗಿನಿಂದಲೂ ತುಮಕೂರಿನಲ್ಲಿ ಕೂಲಿಕಾರ್ಮಿಕರು, ನಿರ್ಗತಿಕರು, ಕರೊನಾ ಸೇನಾನಿಗಳಿಗೆ ಊಟದ ವ್ಯವಸ್ಥೆ ಮಾಡಲಾಗಿದೆ, ಯಾರು ಹಸಿವಿನಿಂದ ಇರಬಾರದು ಎಂಬ ಉದ್ದೇಶದಿಂದ ಕ್ಯಾತಸಂದ್ರ ಭಾಗದ ಆಟೋ ಚಾಲಕರು ಹಾಗೂ ಪೌರಕಾರ್ಮಿಕರಿಗೆ ಪಡಿತರ ನೀಡುತ್ತಿದ್ದೇವೆ, ಇದಕ್ಕೆ ಯಾವುದೇ ರಾಜಕೀಯ ಕಾರಣಗಳಿಲ್ಲ ಎಂದರು.
ಟಿಎಂಸಿಸಿ ನೆರವು : ತುಮಕೂರಿನಲ್ಲಿ ಸ್ವಚ್ಛತೆಗೆ ಶ್ರಮಿಸುತ್ತಿರುವ ಪೌರಕಾರ್ಮಿಕರು ಸುರಕ್ಷತಾ ಸಲಕರಣೆಗಳು ಇಲ್ಲದೇ ಕಾರ್ಯನಿರ್ವಹಿಸುತ್ತಿದ್ದು ಟಿಎಂಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎನ್.ಎಸ್.ಜಯಕುಮಾರ್ ಬ್ಯಾಂಕ್ ವತಿಯಿಂದ ಸಮವಸ್ತ್ರ ನೀಡಿದ್ದು ಅದನ್ನು ಧರಿಸಿ ಪೌರಕಾರ್ಮಿಕರು ಕಾರ್ಯನಿರ್ವಹಿಸುವಂತೆ ರಾಜೇಂದ್ರ ಮನವಿ ಮಾಡಿದರು.
ಚಂದ್ರಮೌಳೇಶ್ವರ ಸಹಕಾರ ಸಂಘದ ನಿರ್ದೇಶಕರಾದ ಕಲ್ಲಹಳ್ಳಿ ದೇವರಾಜು, ಮಹೇಂದ್ರ ಕುಮಾರ್, ಕೆ.ಜಿ.ಆನಂದ್, ಕೆ.ಎನ್.ಜಯರಾಂ, ಪಿ.ಮೂರ್ತಿ, ಕೆ.ಎ.ಜಯರಾಂ, ಪಿ.ರಾಮು, ಕೆ.ಸತ್ಯಾನಾರಾಯಣ್, ಕೆ.ಎಚ್.ಗಂಗಾಧರ್, ಜಿ.ಎಲ್.ನಾಗೇಶ್ ಎಚ್‌ಎಂಟಿ, ಆಡಳಿತಾಧಿಕಾರಿ ಉಗ್ರಪ್ಪ, ಕಾರ್ಯನಿರ್ವಹಣಾಧಿಕಾರಿ ಕೆ.ಎಂ.ರಂಗನಾಥ್ ಇತರರಿದ್ದರು.