ಸಿಂಧನೂರಿನ ಪಾಟೀಲ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮವನ್ನು ಇಸ್ರೋ ವಿಜ್ಞಾನಿ ಡಾ.ಬಿ.ಎಚ್.ಎಂ.ದಾರುಕೇಶ ಉದ್ಘಾಟಿಸಿದರು. ಶಾಸಕ ಹಂಪನಗೌಡ ಬಾದರ್ಲಿ, ತಹಸೀಲ್ದಾರ್ ಅರುಣ ದೇಸಾಯಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರಗೌಡ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು ಇದ್ದರು. 
ಜಿಲ್ಲೆ

ಜ್ಞಾನ ಹಂಚುವ ಮಟ್ಟಕ್ಕೆ ಬೆಳೆದಿದೆ ಭಾರತ

ರುದ್ರಪ್ಪ ವಾಲಿ

ಸಿಂಧನೂರು: ಚಂದ್ರಯಾನ-3ರ ಯಶಸ್ಸು ದೇಶದ ಜನರ ಆತ್ಮವಿಶ್ವಾಸ ಹೆಚ್ಚಿಸಿದೆ. ಈ ಸಾಧನೆ ವಿದ್ಯಾರ್ಥಿಗಳ ಯೋಚನೆ, ಯೋಜನೆಯ ದಿಕ್ಕು ಬದಲಾಯಿಸಿದೆ. ತಾವು ಕೂಡ ಸಾಧಿಸಬಲ್ಲೆವು ಎನ್ನುವ ದೃಢ ಸಂಕಲ್ಪ ತೊಡಲು ಮುಂದಾಗುವಂತೆ ಮಾಡಿದೆ ಎಂದು ಇಸ್ರೋ ವಿಜ್ಞಾನಿ ಡಾ.ಬಿ.ಎಚ್.ಎಂ.ದಾರುಕೇಶ ಹೇಳಿದರು.

ಸಂವಾದ ಕಾರ್ಯಕ್ರಮ

ನಗರದ ಪಾಟೀಲ್ ಶಿಕ್ಷಣ ಸಂಸ್ಥೆಯಲ್ಲಿ ಶನಿವಾರ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಇಸ್ರೋ ವಿಜ್ಞಾನಿಯೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಹಿಂದೆ ಏನೋ ಮೆಚ್ಚಿಕೊಂಡು ಸಂಭ್ರಮಪಡುತ್ತಿದ್ದ ದೇಶದ ಜನರು, ಈಗ ಹಳ್ಳಿ ಹಳ್ಳಿಯಲ್ಲೂ ಇಸ್ರೋ ವಿಜ್ಞಾನಿಗಳ ಸಾಧನೆ ಕೊಂಡಾಡುತ್ತಿದ್ದಾರೆ. ಈ ಬೆಳವಣಿಗೆ ಅಂತಾರಾಷ್ಟ್ರೀಯ ಮನ್ನಣೆಗಿಂತಲೂ ಅಧಿಕವಾಗಿದೆ. ಎಲ್ಲ ಬೆಳವಣಿಗೆಗೆ ವಿಜ್ಞಾನವೇ ಕಾರಣ. ಈಗ ವಿಜ್ಞಾನ ತಂತ್ರಜ್ಞಾನದಲ್ಲೂ ದೇಶ ಜಗತ್ತಿಗೆ ಜ್ಞಾನ ಹಂಚುವ ಮಟ್ಟಕ್ಕೆ ಬೆಳೆದು ನಿಂತಿದೆ.

ಬಾಹ್ಯಾಕಾಶ ಸಂಶೋಧನೆಯಿಂದ ಭೂಮಿ ಮೇಲಿನ ಸಮಸ್ಯೆಗಳಿಗೆ ಪರಿಹಾರ ಸಾಧ್ಯವಿದೆ. ಭೂಸ್ಥಿರ ಉಪಗ್ರಗಳು ಜಗತ್ತಿನ ಸಂಪತ್ತು. ಉಪಗ್ರಹ ತಂತ್ರಜ್ಞಾನ ಜನರ ಜೀವನ ಮಟ್ಟ ಸುಧಾರಣೆಗೆ ಸಹಕಾರಿಯಾಗಿದೆ ಎಂದರು.

ಈಗಾಗಲೇ ಚಂದ್ರನ ಮೇಲೆ ಅಲ್ಯೂಮಿನಿಯಂ, ಸಿಲಿಕಾನ್, ಗಂಧಕ, ಸಲ್ಫರ್, ಮ್ಯಾಂಗನೀಸ್, ಆಮ್ಲಜನಕ, ಕ್ಯಾಲ್ಸಿಯಂ, ಟೈಟಾನಿಯಂ ಪತ್ತೆಯಾಗಿದೆ. ಇನ್ನುಳಿದ ದಿನಗಳಲ್ಲಿ ಚಂದ್ರನ ಮೇಲೆ ಹೈಡ್ರೋಜನ್ ಲಭ್ಯದ ಬಗ್ಗೆ ಪ್ರಗ್ಯಾನ್ ರೋವರ್ ಅಧ್ಯಯನ ನಡೆಸಲಿದೆ ಎಂದರು.

ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಇಸ್ರೋ ವಿಜ್ಞಾನಿಗಳು ಮಾಡಿದ ಸಾಧನೆ ನಮ್ಮ ಹೆಮ್ಮೆ. ಇತರ ದೇಶಗಳು ಸಾಧನೆ ಮಾಡುವ ಮೊದಲೇ ಇಸ್ರೋ ವಿಜ್ಞಾನಿಗಳು ಗಮನಾರ್ಹ ಯಶಸ್ಸು ಕಂಡಿದ್ದಾರೆ ಎಂದು ಶ್ಲಾಘಿಸಿದರು.

ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಎಂ.ದೊಡ್ಡಬಸವರಾಜ, ಬಿಇಒ ಸೋಮಶೇಖರಗೌಡ ಮಾತನಾಡಿದರು. ತಹಸೀಲ್ದಾರ್ ಅರುಣ ದೇಸಾಯಿ, ನಗರಸಭೆ ಪೌರಾಯುಕ್ತ ಮಂಜುನಾಥ ಗುಂಡೂರು, ತಾಪಂ ಇಒ ಚಂದ್ರಶೇಖರ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಶರಣಬಸವ, ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಸ್.ಶರಣೇಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಬಸವಲಿಂಗಪ್ಪ, ಸಂಸ್ಥೆ ಕಾರ್ಯದರ್ಶಿ ಆರ್.ಸಿ.ಪಾಟೀಲ್ ಇದ್ದರು.
ಡಾ.ಬಿ.ಎಚ್.ಎಂ.ದಾರುಕೇಶ, ಚಂದ್ರಯಾನ-3 ಯಶಸ್ವಿ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು.