ಅರಸೀಕೆರೆ ಗ್ರಾಮಾಂತರ: ಸನಾತನ ಧರ್ಮದ ಪುನರುತ್ಥಾನಕ್ಕೆ ಅವತರಿಸಿದ ಶ್ರೀ ಶಂಕರ ಭಗವತ್ಪಾದರ ಬಗ್ಗೆ ಪ್ರತಿಯೊಬ್ಬರೂ ಅರಿಯಬೇಕು. ಅವರ ದೈವೀ ಕಾರ್ಯಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಭಕ್ತ ವೃಂದ ಮುಂದಾಗಬೇಕು ಎಂದು ಕೆ.ಆರ್.ನಗರದ ಯಡತೊರೆ ಶ್ರೀ ಯೋಗನಂದೇಶ್ವರ ಸರಸ್ವತೀ ಮಠದ ಶ್ರೀ ಶಂಕರ ಭಾರತೀ ಸ್ವಾಮೀಜಿ ಹೇಳಿದರು.
ನಗರದ ಹೊರವಲಯದಲ್ಲಿರುವ ಶ್ರೀ ಮಾರುತಿ ಸಚ್ಚಿದಾನಂದ ಆಶ್ರಮದಲ್ಲಿ ಗುರುವಾರ ಆಯೋಜಿಸಿದ್ದ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ಆಯಸ್ಸು ಪೂರ್ಣ ಗುರುಗಳಿಗೆ ವಂದಿಸುವ ಪುಣ್ಯ ಎಲ್ಲರಿಗೂ ಸಿಗುವುದಿಲ್ಲ. ಯಾರು ಆಧ್ಯಾತ್ಮದಲ್ಲಿ ಸಾಧನೆಗೈದು ಧರ್ಮ ಸಂಸ್ಥಾಪನೆಗಾಗಿ ಅವಿರತ ಸೇವೆ ಮಾಡುತ್ತಾರೋ ಅವರಿಗೆ ಮಾತ್ರ ಆಯಸ್ಸು ಪೂರ್ಣ ಗುರುಗಳಿಗೆ ವಂದಿಸುವ ಸೌಭಾಗ್ಯ ದೊರೆಯುತ್ತದೆ. ಪ್ರತಿಯೊಬ್ಬ ಮನುಷ್ಯನು ಪ್ರತಿನಿತ್ಯ ಕೆಲಸಗಳನ್ನು ಮಾಡುವುದೇ ಗುರಿಯಲ್ಲ, ಆ ಕೆಲಸಗಳ ಮೂಲಕ ಶಾಶ್ವತವಾಗಿ ನೆಮ್ಮದಿ ಆನಂದ ಪಡೆಯುವುದೇ ಗುರಿಯಾಗಬೇಕು. ಕೇವಲ ಲೌಕಿಕವಾದ ಕಾರ್ಯಗಳಿಗೆ ಗಮನ ನೀಡದೆ, ದೈವಿ ಕಾರ್ಯಗಳ ಬಗ್ಗೆಯೂ ಗಮನ ಹರಿಸಬೇಕು. 1,200 ವರ್ಷಗಳ ಹಿಂದೆ ಶಂಕರಾಚಾರ್ಯರು ಜನಿಸಿ ಧರ್ಮ ಸಂಸ್ಥಾಪನೆ ಮಾಡಿದರು ಎಂದರು. ಧಾರ್ಮಿಕ ಸಭೆ ಸಮಾರಂಭಗಳಲ್ಲಿ ಕುಟುಂಬ ಮತ್ತು ಕುಟುಂಬದ ಸದಸ್ಯರು ಹೆಚ್ಚೆಚ್ಚು ಭಾಗವಹಿಸಬೇಕು.ಆಗ ಮಾತ್ರ ಧರ್ಮ ಸಂರಕ್ಷಣೆಯಾಗಲು ಸಾಧ್ಯ. ಗಲ್ಲಿ ಗಲ್ಲಿಯಲ್ಲಿ ಶಂಕರ ಭಗವಾತ್ಪಾದರ ಜೀವನ ಚರಿತ್ರೆ ಬಗ್ಗೆ ದೊಡ್ಡ ಮಟ್ಟದಲ್ಲಿ ಆಂದೋಲವಾಗಲಿ ಎಂದು ಆಶಿಸಿದರು.
ಪರಂಪರಾವಧೂತ ಶ್ರೀ ಸತೀಶ್ ಶರ್ಮಾಜೀ ಮಹಾರಾಜರ ಉಪಸ್ಥಿತಿ ವಹಿಸಿದ್ದರು. ಶ್ರೀಗಳಿಗೆ ಪೂರ್ಣಕುಂಭ ಸ್ವಾಗತ ಕೋರಿದ ಯತಿವರ್ಯರು ಮಂತ್ರ ಘೋಷಗಳೊಂದಿಗೆ ಬರಮಾಡಿಕೊಂಡರು. ಧೂಳೀ ಪಾದ ಪೂಜೆ, ಫಲ ಸಮರ್ಪಣೆ , ಸಪರಿವಾರ ನರಸಿಂಹ ದೇವರ ದರ್ಶನದೊಂದಿಗೆ, ಭಿಕ್ಷಾವಂದನೆ ಭಿನ್ನವತ್ತಳೆ ಸಮರ್ಪಣೆ, ಆಶೀರ್ವಚನ ಮತ್ತು ಫಲಮಂತ್ರಾಕ್ಷತೆ ನೀಡಲಾಯಿತು.
ಶ್ರೀ ಸೀತಾ ಮಹಿಳಾ ಸಂಘದ ಸದಸ್ಯರು ಸಾಮೂಹಿಕವಾಗಿ ವಿವಿಧ ಭಕ್ತಿಗೀತೆಗಳನ್ನು ಹೇಳಿದರು.
ಪುರೋಹಿತರಾದ ಸುಬ್ರಹ್ಮಣ್ಯ ಪುರಾಣಿಕ್, ರವಿ ಪುರಾಣಿಕ್, ಆದಿತ್ಯ ಕಟಕಟ್ಟೆ, ಬ್ರಾಹ್ಮಣ ಸಂಘದ ಗೌರವಾಧ್ಯಕ್ಷ ರಮೇಶ್, ಅಧ್ಯಕ್ಷ ರವಿಕುಮಾರ್, ಯುವಕ ಸಂಘದ ಅಧ್ಯಕ್ಷ ಚೈತನ್ಯ ಕಶ್ಯಪ್, ಶ್ರೀ ಸೀತಾ ಮಹಿಳಾ ಸಂಘದ ಅಧ್ಯಕ್ಷೆ ಶಕುಂತಲಾ ಆನಂದ್, ನಗರಸಭೆ ಸದಸ್ಯೆ ಶ್ವೇತಾ ರಮೇಶ್ ನಾಯ್ಡು, ಮುಖಂಡರಾದ ಟಿ.ಆರ್ ನಾಗರಾಜು, ಪುರುಷೋತ್ತಮ, ಶ್ರೀ ಲಕ್ಷ್ಮೀನರಸಿಂಹ ಕ್ಷೇಮಾಭಿವೃದ್ಧಿ ಸಂಘ ಪದಾಧಿಕಾರಿಗಳು, ಭಕ್ತಾದಿಗಳು ಭಾಗವಹಿಸಿದ್ದರು.