ಜಿಲ್ಲೆ

ಪೂರ್ವಜರಲ್ಲಿತ್ತು ನೈಸರ್ಗಿಕ ಶಕ್ತಿಯ ಮೂಲಗಳ ಜ್ಞಾನ

ವಿಜಯವಾಣಿ ಸುದ್ದಿಜಾಲ ಧಾರವಾಡ

ನಮ್ಮ ಪೂರ್ವಜರು ನೈಸರ್ಗಿಕ ಶಕ್ತಿಯ ಮೂಲಗಳ ಬಗ್ಗೆ ಅಗಾಧ ಜ್ಞಾನ ಹೊಂದಿದ್ದಲ್ಲದೆ, ಅವುಗಳ ಪ್ರಾಮುಖ್ಯತೆ ಬಗ್ಗೆ ತಿಳಿದು ಅವುಗಳನ್ನು ಪೂಜ್ಯನಿಯವಾಗಿ ಕಾಣುತ್ತಿದ್ದರು ಎಂದು ಎಸ್​ಡಿಎಂ ಇಂಜಿನಿಯರಿಂಗ್​ ಕಾಲೇಜಿನ ಪ್ರಾಚಾರ್ಯ ಡಾ. ಆರ್​.ವಿ. ಚಕ್ರಸಾಲಿ ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಹಾಗೂ ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ ಶಕ್ತಿ ಸಂರಕ್ಷಣಾ ದಿನಾಚರಣೆ-2024 ನಿಮಿತ್ತ ಪ್ರೌಢ ಶಾಲೆ ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಸೆಮಿನಾರ ಸ್ಪರ್ಧೆ ಹಾಗೂ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಶಕ್ತಿಯ ಮೂಲಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡದ ಕಾರಣ ಕೆಲವು ನವೀಕರಿಸಲಾಗದ ಶಕ್ತಿಯ ಮೂಲಗಳು ಮುಗಿಯುವ ಹಂತಕ್ಕೆ ಬರುತ್ತಿವೆ. ವಿದ್ಯಾರ್ಥಿಗಳು ಶಕ್ತಿ ಸಂಕ್ಷರಣೆ ಬಗ್ಗೆ ಅರಿತು ಇತರರಿಗೂ ಅರಿವು ಮೂಡಿಸಬೇಕು ಎಂದರು.

ಡಾ. ಮಂಜಲಿ ಸಾಳುಂಕೆ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಸುತ್ತಲೂ ನಡೆಯುವ ಬದಲಾವಣೆಗಳ ಹಾಗೂ ಏರುಪೇರುಗಳ ಕುರಿತು ಚಿಂತಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಮಟ್ಟಿಗೆ ಪ್ರಬುದ್ಧರಾಗಬೇಕು. ಈ ಎಲ್ಲ ಬದಲಾವಣೆಗಳಿಗೆ ವಿಜ್ಞಾನವೇ ಉತ್ತಮವಾಗಿರುತ್ತದೆ ಎಂದರು.

ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ವೀರಣ್ಣ ಬೋಳಿಶೆಟ್ಟಿ ಮಾತನಾಡಿದರು. ಡಾ. ಸಂಗಪ್ಪ ಬಿರಾದಾರ, ಡಾ. ಬಸವರಾಜ್​, ಕೇಂದ್ರದ ಸಿಬ್ಬಂದಿ, ಶಿಕ್ಷಕರು, ಇತರರು ಇದ್ದರು.