ವಿಜಯವಾಣಿ ಸುದ್ದಿಜಾಲ ಧಾರವಾಡ
ಆಧುನಿಕ ತಂತ್ರಜ್ಞಾನವನ್ನು ಪೊಲೀಸ್ ಇಲಾಖೆ ಅಧಿಕಾರಿಗಳು ಅರಿಯುವುದು ಇಂದಿನ ಅಗತ್ಯ ಕರ್ನಾಟಕ ವಿಶ್ವ ವಿದ್ಯಾಲಯ ಮೌಲ್ಯಮಾಪನ ಕುಲಸಚಿವ ಪ್ರೊ. ಸಿ. ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು.
ನಗರದ ಕರ್ನಾಟಕ ವಿಶ್ವ ವಿದ್ಯಾಲಯದ ವಿಧಿ ವಿಜ್ಞಾನ ಮತ್ತು ಅಪರಾಧಶಾಸ್ತ್ರ ವಿಭಾಗ ಮತ್ತು ಧಾರವಾಡ ಪೊಲೀಸ್ ತರಬೇತಿ ಶಾಲೆ ಸಹಯೋಗದಲ್ಲಿ ಪೊಲೀಸರು ಮತ್ತು ಆಧುನಿಕ ಅಪರಾಧ ಪ್ರವೃತ್ತಿಗಳು ಕುರಿತು ಪೊಲೀಸ್ ತರಬೇತಿ ಶಾಲೆಯಲ್ಲಿ ಪ್ರಶಿಕ್ಷಣಾರ್ಥಿಗಳಿಗೆ ಶುಕ್ರವಾರ ಏರ್ಪಡಿಸಿದ್ದ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ನಗರೀಕರಣ ಮತ್ತು ಆಧುನಿಕತೆ ಬೆಳೆದಂತೆ ಅಪರಾಧಗಳ ಸ್ವರೂಪ ಬದಲಾಗುತ್ತಿದ್ದು, ಇತ್ತೀಚಿಗೆ ಸೈಬರ್ ಅಪರಾಧ ಸಂಖ್ಯೆ ಹೆಚ್ಚಿದೆ. ಹೀಗಾಗಿ ಅಪರಾಧ ಕೃತ್ಯಗಳನ್ನು ಬೇಧಿಸುವಲ್ಲಿ ತಂತ್ರಜ್ಞಾನ ಪಾತ್ರ ಪ್ರಮುಖ. ಹೊಸ ತಾಂತ್ರಿಕತೆಯನ್ನು ಇಲಾಖೆ ಮೈಗೂಡಿಸಿಕೊಳ್ಳುವುದು ಇಂದಿನ ಅವಶ್ಯವಾಗಿದೆ ಎಂದರು.
ಕವಿವಿ ಅಪರಾಧ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ವೇಣು ಮಾಧವ ಮಾತನಾಡಿ, ಕರ್ನಾಟಕ ವಿಶ್ವ ವಿದ್ಯಾಲಯ ಮತ್ತು ಪೊಲೀಸ್ ತರಬೇತಿ ಕೇಂದ್ರ ಕೆಲ ದಿನಗಳ ಹಿಂದೆ ಶೈಕ್ಷಣಿಕ ಒಪ್ಪಂದ ಮಾಡಿಕೊಂಡಿದ್ದು, ಇದರ ಪ್ರಯುಕ್ತ ಮುಂದಿನ ದಿನಗಳಲ್ಲಿ ಕಾರ್ಯಾಗಾರ, ತರಬೇತಿ ಆಯೋಜಿಸಲಾಗುವುದು ಎಂದರು.
ಡಾ. ಸಂಜಯಕುಮಾರ ಮಾಲಗತ್ತಿ ಮಾತನಾಡಿ, ದಿನದಿಂದ ದಿನಕ್ಕೆ ಸಾಮಾಜಿಕ ಮಾಧ್ಯಮಗಳ ಮೂಲಕ ಅನೇಕ ಅಪರಾಧ ಕೃತ್ಯಗಳು ಹೆಚ್ಚಾಗಿರುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಅಧಿಕಾರಿಗಳು ತಂತ್ರಜ್ಞಾನ ಅರಿಯುವುದು ಸೂಕ್ತ ಎಂದರು.
ಅಧ್ಯಕ್ಷತೆ ವಹಿಸಿದ್ದ ಪೊಲೀಸ್ ತರಬೇತಿ ಶಾಲೆ ಅಧೀಕ್ಷಕ ಎಂ.ಎಂ. ಯಾದವಾಡ ಮಾತನಾಡಿ, ಜನರ ರಕ್ಷಣೆ ಪೊಲೀಸರ ಕರ್ತವ್ಯ. ಜನಸ್ನೇಹಿ ಪೊಲೀಸ್ ಎಂಬ ಪರಿಕಲ್ಪನೆ ಈಗಿನ ಅಗತ್ಯವಾಗಿದ್ದು, ಅಪರಾಧಿಗಳು ಯಾರು ಮತ್ತು ಯಾರು ಅಪರಾಧಿಗಳಲ್ಲ ಎಂಬುವುದನ್ನು ಗುರುತಿಸುವ ಕೌಶಲ ಕಲಿಯಬೇಕು. ಜನರೊಂದಿಗೆ ಸೌಹಾರ್ದಯುತ ಬಾಂಧವ್ಯ ಬೆಳಸುವಲ್ಲಿ ಪೊಲೀಸರ ಪಾತ್ರ ಬಹಳ ಇದೆ ಎದರು.
ತರಬೇತಿ ಶಾಲೆ ಉಪ ಅಧೀಕ್ಷಕ ಪಿ. ಹರಿಶ್ಚಂದ್ರ ನಾಯ್ಕ, ಪೊಲೀಸ್ ಅಧಿಕಾರಿ ಸುನೀಲ ಮೇಗಲಮನಿ, ಡಾ.ದಿನೇಶ ನಾರಾಯಣಕರ, ಇತರರು ಇದ್ದರು.