ಜಿಲ್ಲೆ

ಪೋಸ್ಟ್​ ಆಫೀಸ್​ನಿಂದ 'ಜ್ಞಾನ ಅಂಚೆ' ಸೇವೆ ಆರಂಭ...

ಪ್ರಶಾಂತ ಜಿ. ಭಾಗ್ವತ

ಭಾರತೀಯ ಅಂಚೆ ಇಲಾಖೆಯಿಂದ ಹೊಸ ಸೌಕರ್ಯ

ವಿಜಯವಾಣಿ ಸುದ್ದಿಜಾಲ ಉಡುಪಿ

ಪಠ್ಯ-ಪುಸ್ತಕ, ಗೈಡ್​ ಮತ್ತು ಸಾಹಿತ್ಯ ಕೃತಿಗಳ ರವಾನೆಗಾಗಿಯೇ ಮೀಸಲಿರುವ ಭಾರತೀಯ ಅಂಚೆ ಇಲಾಖೆಯಿಂದ ಜ್ಞಾನ ಅಂಚೆ ಸೇವೆ ಮೇ 1ರಿಂದಲೇ ಆರಂಭಗೊಂಡಿದೆ.

ಈ ಮೊದಲು ಪಠ್ಯ-ಪುಸ್ತಕ, ಗೈಡ್​ ಮತ್ತು ಸಾಹಿತ್ಯ ಕೃತಿಗಳನ್ನು ಭಾರತೀಯ ಅಂಚೆಯ ಬುಕ್​ ಪ್ಯಾಕೆಟ್​ ಮತ್ತು ಬುಕ್​ ಪೋಸ್ಟ್​ಗಳ ಮೂಲಕ ಕಳುಹಿಸಬೇಕಿತ್ತು. ಭಾರತೀಯ ಅಂಚೆ ಕಾಯ್ದೆಗೆ 2023ರಲ್ಲಿ ತಿದ್ದುಪಡಿ ಮಾಡಲಾಗಿದ್ದು, 2024ರ ಜೂನ್​ನಲ್ಲಿ ಬುಕ್​ ಪ್ಯಾಕೆಟ್​ ಸೇವೆ ರದ್ದುಪಡಿಸಲಾಗಿತ್ತು.

ಇದೀಗ ಭಾರತೀಯ ಅಂಚೆ ಕಾಯ್ದೆಗೆ ಕೇಂದ್ರ ಸರ್ಕಾರ ಮತ್ತೆ ತಿದ್ದುಪಡಿ ಮಾಡಿದ್ದು, ಜ್ಞಾನ ಅಂಚೆ ಸೇವೆ ಆರಂಭಿಸಿದೆ. ಪಠ್ಯ-ಪುಸ್ತಕ, ಸಾಹಿತ್ಯ ಕೃತಿಗಳಿಗಷ್ಟೇ ಈ ಸೇವೆ ಮೀಸಲಾಗಿದೆ. ಬಿಲ್​ ಬುಕ್​ಗಳು, ಆಹ್ವಾನ ಪತ್ರಿಕೆಗಳು, ಕರಪತ್ರಗಳು, ನಿಯತಕಾಲಿಕೆಗಳಿಗೆ ಈ ಸೇವೆ ಅನ್ವಯಿಸುವುದಿಲ್ಲ ಎಂದು ಉಡುಪಿ ಅಂಚೆ ಇಲಾಖೆ ಅಧೀಕ್ಷಕರ ಕಚೇರಿಯ ಪ್ರಕಟಣೆ ತಿಳಿಸಿದೆ.

ಗರಿಷ್ಠ 5 ಕೆಜಿ ವರೆಗಿನ ಪಾರ್ಸಲ್​ಗೆ ಅವಕಾಶ

ಅಂಚೆ ಇಲಾಖೆಯ ಈ ನೂತನ ಸೇವೆಯಡಿ ಪುಸ್ತಕಗಳನ್ನು ಕಳುಹಿಸುವವರು ಅದರ ಮೇಲೆ ಜ್ಞಾನ ಅಂಚೆ ಎಂದು ಕಡ್ಡಾಯವಾಗಿ ನಮೂದಿಸಬೇಕು. ಪುಸ್ತಕ ಕಳುಹಿಸುವವರು ಮತ್ತು ಪಡೆಯುವವರ ಜತೆಗೆ ಪ್ರಕಾಶಕರ ಹೆಸರು ಹಾಗೂ ವಿಳಾಸವನ್ನೂ ನಮೂದಿಸಿರಬೇಕು. ಯಾವುದೇ ವಾಣಿಜ್ಯ ಉದ್ದೇಶದ ಕರಪತ್ರ ಮತ್ತು ಬರಹಗಳು ಇರಕೂಡದು. ಗರಿಷ್ಠ 5 ಕೆಜಿ ವರೆಗಿನ ಪಾರ್ಸಲ್​ಗಳನ್ನು ಮಾತ್ರ ಜ್ಞಾನ ಅಂಚೆ ಸೇವೆಗೆ ಪರಿಗಣಿಸಲಾಗಿದೆ.