ಜಿಲ್ಲೆ

ವಿದ್ಯೆಯಿಂದ ಸರ್ವ ಸಂಪತ್ತು ಪ್ರಾಪ್ತಿ: ಪ್ರಶಾಂತ್​ ಜೋಷಿ ಹೇಳಿಕೆ

Avinash R

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ವಿದ್ಯೆಯಿಂದ ಜ್ಞಾನ, ಜ್ಞಾನದಿಂದ ಧನ, ಧನದಿಂದ ಪ್ರಗತಿ ಪ್ರಾಪ್ತಿಯಾಗುತ್ತದೆ. ಅದಕ್ಕೆ ವಿದ್ಯಾದಾನ ಶ್ರೇಷ್ಠ ಎಂದು ಕ್ಯಾನ್​ ಫಿನ್​ ಹೋಮ್ಸ್​ ಲಿಮಿಟೆಡ್​ ಸಂಸ್ಥೆ ಡಿಜಿಎಂ ಪ್ರಶಾಂತ್​ ಜೋಷಿ ಹೇಳಿದರು.

ರೋಟರಿ ಕ್ಲಬ್​ ಬೆಳ್ತಂಗಡಿ, ರೋಟರಿ ಸೇವಾ ಟ್ರಸ್ಟ್​, ರೋಟರಿ ಬೆಂಗಳೂರು ಇಂದಿರಾನಗರ ವತಿಯಿಂದ ಸೆ.21ರಂದು ರೋಟರಿ ಕಾಶಿಬೆಟ್ಟು ಸುವರ್ಣ ಸಭಾಭಾವನದಲ್ಲಿ ಬೆಳ್ತಂಗಡಿ ತಾಲೂಕಿನ ಖಾಸಗಿ ಕಾಲೇಜಿನ ಶೇ.90ಕ್ಕಿಂತ ಮೇಲ್ಪಟ್ಟು ಅಂಕ ಗಳಿಸಿದ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಮಾತನಾಡಿದರು.

ರೋಟರಿ ಬೆಳ್ತಂಗಡಿ ಅಧ್ಯಕ್ಷ ಪೂರನ್​ ವಮಾರ್ ಸ್ವಾಗತಿಸಿ ಮಾತನಾಡಿ, ವಿದ್ಯೆಗಿಂತ ದೊಡ್ಡ ಉಡುಗೊರೆ ಬೇರೊಂದಿಲ್ಲ. ವಿದ್ಯಾವಂತರಾದರೆ ಮಕ್ಕಳು ಮನೆಗೆ ಆಧಾರ. ಶಿಕ್ಷಣದಲ್ಲಿ ತೊಡಗಿಸಿಕೊಂಡರೆ ಶಿಕ್ಷಣದ ಬಳಿಕ ಅದರ ಫಲ ದೊರೆಯುತ್ತದೆ ಎಂದರು.

ರೋಟರಿ ಇಂದಿರಾ ನಗರದ ಸದಸ್ಯ ಜಗದೀಶ್​ ಮುಗುಳಿ ಮಾತನಾಡಿ ಬೆಳ್ತಂಗಡಿ ತಾಲೂಕಿನ 151 ವಿದ್ಯಾರ್ಥಿಗಳಿಗೆ ತಲಾ 10 ಸಾವಿರ ರೂ.ನಂತೆ 15,10,000 ಲಕ್ಷ ರೂ. ವಿತರಿಸಲಾಯಿತು. ಈ ಬಾರಿ ಸರ್ಕಾರಿ ಮತ್ತು ಖಾಸಗಿ ಸೇರಿ ಒಟ್ಟು 400 ಮಕ್ಕಳಿಗೆ 25 ಲಕ್ಷ ರೂ. ಬೆಳ್ತಂಗಡಿ ತಾಲೂಕಿನ ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದರು.

ಜಿಲ್ಲಾ ಗವರ್ನರ್​ ವಿಕ್ರಮ್​ ದತ್ತ, ರೋಟರಿ ಇಂದಿರಾನಗರ ಕ್ಲಬ್​ ಸದಸ್ಯರಾದ ಪೀಯೂಷ್​ ಜೈನ್​, ಜಗದೀಶ್​ ಮುಗುಳಿ, ರೋಟರಿ ಸೇವಾ ಟ್ರಸ್ಟ್​ ಅಧ್ಯಕ್ಷ ಶ್ರೀಕಾಂತ್​ ಕಾಮತ್​, ಕೋಶಾಧಿಕಾರಿ ಅಬೂಬಕ್ಕರ್​,ಉಪಸ್ಥಿತರಿದ್ದರು. ಕಾರ್ಯದರ್ಶಿ ಸಂದೇಶ್​ ರಾವ್​ ವಂದಿಸಿದರು. ಸುವೀರ್​ ಜೈನ್​ ನಿರೂಪಿಸಿದರು.