ಮೈಸೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿ ವಿದ್ಯಾರ್ಥಿಗೂ ಗ್ರಂಥಾಲಯದ ಅವಶ್ಯಕತೆ ಇದೆ. ಪುಸ್ತಕಗಳಿಂದ ಮಾಡುವ ಜ್ಞಾನಾರ್ಜನೆ ಶ್ರೇಷ್ಠ ಎಂದು ಮೈವಿವಿ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಪ್ರೊ.ಶಾಲಿನಿ ಅರಸ್ ಹೇಳಿದರು.
ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸ್ನೇಹ ಸಿಂಚನ ಹಾಗೂ ಗ್ರಂಥಾಲಯ ಪಿತಾಮಹ ಡಾ. ಎಸ್.ಆರ್.ರಂಗನಾಥ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಕ್ರಿಯಾಶೀಲತೆ ಇರಬೇಕು. ಡಾ.ಎಸ್.ಆರ್.ರಂಗನಾಥ್ ಅವರ ಜನ್ಮ ದಿನಾಚರಣೆಯ ಮಹತ್ವವನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ತಿಳಿಯಬೇಕು ಎಂದರು.
ವಿದ್ಯಾರ್ಥಿಗಳಿಗಷ್ಟೇ ಅಲ್ಲದೇ, ಸಾರ್ವಜನಿಕರೂ ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಲು ಸಾರ್ವಜನಿಕ ಗ್ರಂಥಾಲಯ ಎಲ್ಲೆಡೆ ಇರಬೇಕು. ಜೀವನದಲ್ಲಿ ಗುರಿ ಮತ್ತು ಆಸಕ್ತಿ ಇರಬೇಕು ಎಂದು ತಿಳಿಸಿದರು.
ಮೈವಿವಿ ಗಣಕ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಡಾ.ಡಿ.ಎಸ್. ಗುರು ಮಾತನಾಡಿ, ವಿದ್ಯಾರ್ಥಿಗಳು ತಮಗೆ ದೊರೆತ ಅವಕಾಶವನ್ನು ಬಳಸಿಕೊಳ್ಳಬೇಕು. ಪ್ರಗತಿಯ ಹಾದಿಯತ್ತ ಸದಾ ಮುನ್ನಡೆಯಬೇಕು ಎಂದರು.
ಕಿರಿಯ ವಿದ್ಯಾರ್ಥಿನಿಯರಿಗೆ ಹಿರಿಯ ವಿದ್ಯಾರ್ಥಿನಿಯರು ಸಿಹಿ ತಿನ್ನಿಸುವ ಮೂಲಕ ಆತ್ಮೀಯವಾಗಿ ಸ್ವಾಗತಿಸಿದ ರೀತಿಯು ಸೊಗಸಾಗಿದೆ. ಹಿರಿಯರನ್ನು ಕಿರಿಯರು ಅನುಕರಿಸುತ್ತಾರೆ. ವಿದ್ಯಾರ್ಥಿಗಳಲ್ಲಿ ಜ್ಞಾನ ಮತ್ತು ತಂತ್ರಜ್ಞಾನದ ಬಳಕೆ ಗೊತ್ತಿರಬೇಕು. ಅಹಂಕಾರದ ಮನೋಭಾವ ಇರಬಾರದು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಗ್ರಂಥಾಲಯದ ಉಪಯುಕ್ತತೆ ಕುರಿತು ನಡೆದ ಚರ್ಚಾಸ್ಪರ್ಧೆಯಲ್ಲಿ ಟಿ.ಎ.ಚಂದನಾ ಪ್ರಥಮ, ಬಿ.ಸ್ನೇಹಾ ದ್ವಿತೀಯ, ಬಿ.ಎಸ್.ಮೇಘಾ ತೃತೀಯ, ಪುಷ್ಪವತಿ ಸಮಾಧಾನಕರ ಬಹುಮಾನ ಪಡೆದರು. ಭಾಷೆಯ ಸ್ಪಷ್ಟ ಉಚ್ಚಾರಣೆಗಾಗಿ ಸರಸ್ವತಿ, ವಿಚಾರ ಅಭಿವ್ಯಕ್ತಿಗಾಗಿ ಎ.ಲಕ್ಷ್ಮೀ ಬಹುಮಾನ ಗಳಿಸಿದರು.
ಶ್ರೀನಟರಾಜ ಪ್ರತಿಷ್ಠಾನದ ವಿಶೇಷಾಧಿಕಾರಿ ಪ್ರೊ.ಎಸ್.ಶಿವರಾಜಪ್ಪ, ಪ್ರಭಾರ ಪ್ರಾಂಶುಪಾಲ ಡಾ.ಎನ್.ಜಿ.ಲೋಕೇಶ್, ಗ್ರಂಥಪಾಲಕಿ ಬಿ.ಆರ್.ಶುಭಾ ಅರಸ್ ಇದ್ದರು. ನಂತರ ಪದವಿ ಕಾಲೇಜಿನ ಹಿರಿಯ ಮತ್ತು ಕಿರಿಯ ವಿದ್ಯಾರ್ಥಿನಿಯರು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.